ಹಂತಹಂತವಾಗಿ ಡಾ.ಸ್ವಾಮಿನಾಥನ್ ವರದಿ ಜಾರಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2020-01-18 17:02 GMT

ಧಾರವಾಡ, ಜ.18: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಸರಕಾರ ದೇಶದ 6 ಕೋಟಿ ರೈತರಿಗೆ ನೆರವು ನೀಡುತ್ತಿದೆ. ಹಂತ ಹಂತವಾಗಿ ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರುವ ಮೂಲಕ ರೈತರಿಗೆ ಬೆಂಬಲ ಬೆಲೆ ಯೋಜನೆಯಲ್ಲಿ ಹೆಚ್ಚಳ ಮಾಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಶನಿವಾರ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ‘ಕೃಷಿ ಮೇಳ 2019-20’ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರದ ಬಿಕ್ಕಟ್ಟುಗಳನ್ನು ಪರಿಹರಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದರು.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶದ ಜಿಡಿಪಿ ಕೃಷಿ ಕ್ಷೇತ್ರದ ಕೊಡುಗೆ ಶೇ.60 ರಷ್ಟಿತ್ತು. ಈಗ ಶೇ.18ಕ್ಕೆ ಇಳಿದಿದೆ. ಇದರ ಅರ್ಥ ಕೃಷಿ ಉತ್ಪಾದನೆ ಕುಸಿದಿದೆ ಎಂದಲ್ಲ. ಇತರ ವಲಯಗಳ ಉತ್ಪಾದನೆ ಹೆಚ್ಚಾಗಿದೆ. ಜನಸಂಖ್ಯೆ ಹೆಚ್ಚಳ ಮತ್ತು ಕೃಷಿ ಭೂಮಿ ಪ್ರಮಾಣದ ಇಳಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದನ್ನು ಸರಿದೂಗಿಸಲು ಜೇನುಸಾಗಣೆ, ಹೈನುಗಾರಿಕೆ ಸೇರಿದಂತೆ ಇತರ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳನ್ನು ಹೆಚ್ಚಿಸಲು ಕೇಂದ್ರ ಸರಕಾರ ಆದ್ಯತೆ ನೀಡಿದೆ ಎಂದು ಅವರು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲು ರಿಯಾಯಿತಿ ದರದ ಕಳ್ಳಸಾಗಣೆ ತಡೆದು, ಬೇವು ಲೇಪಿತ ಯೂರಿಯಾ ಉತ್ಪಾದನೆ ಮಾಡುವ ಮೂಲಕ ಕಳ್ಳಸಾಗಣೆಗೆ ಕಡಿವಾಣ ಹಾಕಲಾಗಿದೆ. ಇದರಿಂದ 80 ಸಾವಿರ ಕೋಟಿ ರೂ.ಉಳಿತಾಯವಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಧಾರವಾಡ ಜಿಲ್ಲೆಯ 1400 ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು. ಸಣ್ಣ ಸಣ್ಣ ಯೋಜನೆಗಳ ಮೂಲಕ ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಕುಟುಂಬಗಳು ಕೃಷಿಯೇತರ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತೇಜಿಸುವ ಯೋಜನೆಗಳನ್ನು ಭಾರತ ಸರಕಾರ ರೂಪಿಸುತ್ತಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಡಾ.ಸ್ವಾಮಿನಾಥನ್ ವರದಿ ಪ್ರಕಾರ ಕಬ್ಬನ್ನೂ ಸೇರಿ ವಿವಿಧ 26 ಬೆಳೆಗಳಿಗೆ ನಿಗದಿತ ಬೆಲೆ ನೀಡಲು ಶಿಫಾರಸ್ಸು ಮಾಡಲಾಗಿದೆ. ಇದನ್ನು ಅನುಷ್ಠಾನಗೊಳಿಸಿ ರೈತರ ಹಿತಕಾಯುವ ಕಾರ್ಯ ಮಾಡಲು ಪ್ರಧಾನಮಂತ್ರಿ ಮುಂದಾಗಿದ್ದಾರೆ ಎಂದರು.

ರೈತರು ಅತಿಯಾದ ವಿಷಪೂರಿತ ರಸಾಯನಿಕಗಳ ಬಳಕೆ ಕೈಬಿಟ್ಟು, ಸಾವಯವ ಪದ್ಧತಿ ಅಳವಡಿಕೆಗೆ ಆದ್ಯತೆ ನೀಡಿ ಆರೋಗ್ಯ ಮತ್ತು ಆರ್ಥಿಕ ಸಾಮರ್ಥ್ಯ ವೃದ್ಧಿಸಬೇಕು. ಪ್ರತಿವರ್ಷ ಸೆಪ್ಟಂಬರ್, ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡ ಕೃಷಿಮೇಳ ನಡೆಯುತ್ತಿತ್ತು. ಈ ಬಾರಿ ನೆರೆ ಹಾಗೂ ಪ್ರವಾಹದ ಕಾರಣದಿಂದ ಮುಂದೂಡಲಾಗಿತ್ತು ಎಂದು ಅವರು ಹೇಳಿದರು.

ಬರಗಾಲದಿಂದ, ನೀರಿನ ಅಂತರ್ಜಲ ಮಟ್ಟದ ಕುಸಿತವಾಗಿರುವ ಭಾಗಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಯೋಜನೆ ರೂಪಿಸಿ, 800 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಭಾಗಗಳ ಕಬ್ಬು ಬೆಳೆಗಾರರು ಮಣ್ಣಿನ ಆರೋಗ್ಯ ಕಾಪಾಡಲು ಒತ್ತು ನೀಡಬೇಕು. ಸಾವಯವ ಕೃಷಿಗೆ ಆದ್ಯತೆ ನೀಡಿದರೆ ಜಗತ್ತಿನ ಜನರ ಆರೋಗ್ಯ ಕಾಪಾಡಬಹುದು ಎಂದು ಅವರು ತಿಳಿಸಿದರು.

ವಿಷಪೂರಿತ ಆಹಾರ ಸೇವನೆಯಿಂದ ಮಹಾರಾಷ್ಟ್ರದ ಒಂದು ಗ್ರಾಮದಲ್ಲಿ ಶೇ.32 ರಷ್ಟು ಜನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದಕ್ಕೆ ಅತಿಯಾದ ವಿಷಕಾರಿ ರಾಸಾಯನಿಕಗಳ ಬಳಕೆಯೇ ಕಾರಣ ಎಂದು ಪರೀಕ್ಷೆಯಿಂದ ತಿಳಿದು ಬಂದಿದೆ. ಕೃಷಿ ಇಲಾಖೆಯ ಅಧಿಕಾರಿಗಳು ವಿಷಪೂರಿತ ರಸಾಯನಿಕಗಳ ಮಾರಾಟ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಶಾಸಕರಾದ ಶಾಸಕರಾದ ಅಮೃತ ದೇಸಾಯಿ, ಶಂಕರ ಪಾಟೀಲ್ ಮುನೇನಕೊಪ್ಪ, ಸಿ.ಎಂ.ನಿಂಬಣ್ಣವರ, ಎಸ್.ವಿ.ಸಂಕನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News