ಮಾವೋವಾದಿಗಳೊಂದಿಗೆ ನಂಟಿನ ಆರೋಪ: ಒಸ್ಮಾನಿಯಾ ವಿವಿ ಪ್ರೊಫೆಸರ್ ಬಂಧನ

Update: 2020-01-18 18:34 GMT

ಹೈದರಾಬಾದ್, ಜ.18: ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಶಂಕೆಯಲ್ಲಿ ಹೈದರಾಬಾದ್‌ನ ಒಸ್ಮಾನಿಯಾ ವಿವಿ ಪ್ರೊಫೆಸರ್ ಸಿ ಕಾಸಿಮ್‌ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

 ಒಸ್ಮಾನಿಯಾ ವಿವಿಯ ತೆಲುಗು ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಕಾಸಿಮ್ ವಿರುದ್ಧ ಅಕ್ರಮ ಚಟುವಟಿಕೆ ತಡೆ ಕಾಯ್ದೆಯಡಿ ಮುಲುಗು ಪೊಲೀಸ್ ಠಾಣೆಯಲ್ಲಿ 2015ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯ ಸಂದರ್ಭ ಹಲವು ಮಹತ್ವದ ಪುರಾವೆಗಳು ಲಭಿಸಿವೆ. ಈ ಹಿನ್ನೆಲೆಯಲ್ಲಿ ಸರ್ಚ್ ವಾರಂಟ್ ಪಡೆದು ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಇನ್ನಷ್ಟು ಪುರಾವೆಗಳು ಹಾಗೂ ವಿದ್ಯುನ್ಮಾನ ಸಾಕ್ಷಿ ದೊರಕಿದೆ. ಪ್ರೊಫೆಸರ್ ಕಾಸಿಂ ಮಾವೋವಾದಿ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಬಗ್ಗೆ ದಾಖಲೆ ದೊರಕಿದೆ ಎಂದು ಸಿದ್ದಿಪೇಟೆ ಪೊಲೀಸ್ ಆಯುಕ್ತ ಡಿ ಜೋಯೆಲ್ ಡೇವಿಸ್ ಹೇಳಿದ್ದಾರೆ.

ಪ್ರೊಫೆಸರ್ ಕಾಸಿಮ್ ತೆಲಂಗಾಣ ರಾಜ್ಯದಲ್ಲಿ ಮಾವೋವಾದಿಗಳ ಯುನೈಟೆಡ್ ಫ್ರಂಟ್ ವರ್ಟಿಕಲ್ ವಿಭಾಗದ ಸಂಘಟಕರಾಗಿ ಕೆಲಸ ಮಾಡುತ್ತಿದ್ದರು. ಸಂಘಟನೆಗೆ ನಿಧಿ ಸಂಗ್ರಹ ಮತ್ತಿತರ ಕೆಲಸದ ಸಂಯೋಜಕರಾಗಿದ್ದರು ಎಂದು ಡೇವಿಸ್ ಹೇಳಿದ್ದಾರೆ.

 ಘಟನೆಯನ್ನು ಖಂಡಿಸಿರುವ ಸಿಪಿಐ ಹಿರಿಯ ಮುಖಂಡ ನಾರಾಯಣ, ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಸರಕಾರ ಬುದ್ಧಿಜೀವಿಗಳಿಗೆ ಕಿರುಕುಳ ನೀಡಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತಿದೆ ಎಂದು ಟೀಕಿಸಿದ್ದಾರೆ.

2018ರಲ್ಲಿ ಒಸ್ಮಾನಿಯಾ ವಿವಿಯ ಸಹಾಯಕ ಪ್ರೊಫೆಸರ್ ಹಾಗೂ ವಿಪ್ಲವ ರಚಯಿತಲ ಸಂಘಂ (ವಿರಾಸಮ್)ನ ಸದಸ್ಯ ಕೆ ಜಗನ್‌ರನ್ನು ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಬಂಧಿಸಲಾಗಿತ್ತು. ಅಲ್ಲದೆ ವಿರಾಸಮ್‌ನ ಮತ್ತೊಬ್ಬ ಸದಸ್ಯ, ಖ್ಯಾತ ತೆಲುಗು ಕವಿ ಪಿ ವರವರ ರಾವ್‌ರನ್ನೂ ಇದೇ ಆರೋಪದಡಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News