ಹೆಣ್ಣು ಶಿಶುವಿನ ಮಾರಾಟ ಪ್ರಕರಣ: ಮಗುವಿನ ಪೋಷಕರು ಸೇರಿ 7 ಮಂದಿಯ ಬಂಧನ

Update: 2020-01-18 18:43 GMT

ದಾವಣಗೆರೆ, ಜ.18: ಆರು ತಿಂಗಳ ಹೆಣ್ಣು ಶಿಶುವನ್ನು ಮಾರಾಟ ಮಾಡಿದ ಪ್ರಕರಣದ ಸಂಬಂಧ ಮಗುವಿನ ಪೋಷಕರು ಮತ್ತು ನಗರದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳು ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಎಸ್ಪಿ ಕಚೇರಿಯಲ್ಲಿ ಶನಿವಾರ ಸಂಜೆ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಮಕ್ಕಳ ಸಹಾಯವಾಣಿ ಡಾನ್‍ಬಾಸ್ಕೋ ಬಾಲ ಕಾರ್ಮಿಕ ಮಿಷನ್‍ಗೆ ಕಳೆದ ಡಿಸೆಂಬರ್ 26 ರಂದು ಬಂದ ಅನಾಮದೇಯ ಕರೆಯ ಜಾಡು ಹಿಡಿದು ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂತು. ದಾವಣಗೆರೆ ಅಂಬೇಡ್ಕರ್ ನಗರದ ನಿವಾಸಿ ಕವಿತಾ ಮಂಜುನಾಥ ದಂಪತಿಗೆ ಜನಿಸಿದ ನಾಲ್ಕನೆ ಹೆಣ್ಣು ಮಗುವನ್ನು ಕಳೆದ ಜೂನ್‍ನಲ್ಲಿ ರಾಣೆಬೆನ್ನೂರಿನ ದ್ರಾಕ್ಷಾಯಿಣಿ ಹಾಗೂ ಸಿದ್ದಪ್ಪ ದಂಪತಿಗೆ 25 ಸಾವಿರ ರೂಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ ಎಂದರು.

ಘಟನೆ ಸಂಬಂಧ ಮಗುವಿನ ತಾಯಿ ಕವಿತಾ, ತಂದೆ ಮಂಜುನಾಥ, ಮಗು ಖರೀದಿಸಿದ್ದ ರಾಣೇಬೆನ್ನೂರಿನ ಕುರುಬರ ಗೇರಿಯ ದ್ರಾಕ್ಷಯಿಣಿ, ರವಿ ಅಲಿಯಾಸ್ ರವೀಂದ್ರ, ಕರಿಬಸಪ್ಪ, ದಾವಣಗೆರೆಯ ಖಾಸಗಿ ಆಸ್ಪತ್ರೆಯ  ಚಿತ್ರಮ್ಮ ಮತ್ತು ಮಧ್ಯವರ್ತಿ ಕಮಲಮ್ಮ ಇವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಪ್ರಕರಣದ ಆರೋಪಿಗಳ ಪತ್ತೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್.ಎಂ ಹಾಗೂ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಯು. ನಾಗೇಶ್ ಐತಾಳ್ ಅವರ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕಿ ನಾಗಮ್ಮ ಅವರ ಸಿಬ್ಬಂದಿಗಳಾದ ಪಿಎಸ್ಐ ಮಾಳವ್ವ, ಪರಶುರಾಮ, ಪ್ರಸನ್ನ ಕುಮಾರ್, ರೇಣುಕಮ್ಮ, ಜಂಷಿದಾ ಖಾನಂ, ಕವಿತಾ, ಶಿವಲಿಂಗಮ್ಮ ಬಾಗೇವಾಡಿ, ಛಾಯಾ, ಕವಿತಾ.ಟಿ.ಎಸ್ ರವರನ್ನು ಒಳಗೊಂಡ ಒಂದು ತಂಡ ಯಶಸ್ವಿಯಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಹೆಚ್ಚುವರಿ ಎಸ್ಪಿ ರಾಜೀವ್, ಮಹಿಳಾ ಠಾಣಾ ಪಿಎಸ್‍ಐ ನಾಗಮ್ಮ ಇತರರು ಹಾಜರಿದ್ದರು.

ವ್ಯವಸ್ಥಿತ ಜಾಲದ ಶಂಕೆ !

ನಗರದಲ್ಲಿ ಮಕ್ಕಳ ಮಾರಾಟದ ವ್ಯವಸ್ಥಿತ ಜಾಲ ಇರುವ ಬಗ್ಗೆ ಸಂಶಯವಿದ್ದು. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಸಮಗ್ರ ತನಿಖೆ ನಡೆಸಲಾಗುವುದು. ಅಷ್ಟೇ ಅಲ್ಲದೇ ಜಿಲ್ಲೆಯ ಎಲ್ಲ ಹೆರಿಗೆ ಆಸ್ಪತ್ರೆಗಳು, ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವ ವೈದ್ಯರು ದಾದಿಯರು, ಆಯಾಗಳ ಸಭೆ ನಡೆಸಿ ಅವರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಲಾಗುವುದು.

ಹನುಮಂತರಾಯ, ಜಿಲ್ಲಾ ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News