ಜ.20ರಿಂದ ಮಲೆಗಳಲ್ಲಿ ಮದುಮಗಳು ನಾಟಕ ಪ್ರದರ್ಶನ

Update: 2020-01-18 18:47 GMT

ಬೆಂಗಳೂರು, ಜ.18: ರಾಷ್ಟ್ರಕವಿ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ರಂಗರೂಪ ಪ್ರದರ್ಶನವು ಜ.20ರಿಂದ ಫೆ.29ರವರೆಗೆ ರಾತ್ರಿ 8ರಿಂದ 6ರವರೆಗೆ ನಗರದ ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ ತಿಳಿಸಿದ್ದಾರೆ.

ಶನಿವಾರ ಕನ್ನಡಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ನಾಟಕ ರಂಗಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಜ.20 ಸಂಜೆ 8ರಂದು ಮೊದಲ ಪ್ರದರ್ಶನ ಪ್ರಾರಂಭಗೊಳ್ಳಲಿದ್ದು, ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರದಂದು ನಾಟಕ ಪ್ರದರ್ಶನ ಇರಲಿದೆ ಎಂದು ತಿಳಿಸಿದರು.

ಬರಹ ರೂಪದಲ್ಲಿದ್ದ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಕೇವಲ ಅಕ್ಷರಸ್ಥರಿಗೆ ಹಾಗೂ ಕನ್ನಡ ಬಲ್ಲವರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಅದು ರಂಗರೂಪದಲ್ಲಿ ಪ್ರದರ್ಶನಗೊಳ್ಳುತ್ತಿರುವುದರಿಂದ ಅನಕ್ಷರಸ್ಥರನ್ನು ಮೊದಲುಗೊಂಡಂತೆ ಕನ್ನಡೇತರ ಸಮುದಾಯಗಳಿಗೂ ತಲುಪುವಂತಾಗಿದೆ ಎಂದು ಅವರು ಹೇಳಿದರು.

ಮಲೆಗಳಲ್ಲಿ ಮದುಮಗಳು ಕಾದಂಬರಿ ನಾಟಕ ರೂಪಕ್ಕೆ ಬಂದು ಈಗಾಗಲೇ ಹಲವು ಪ್ರದರ್ಶನಗಳನ್ನು ಕಂಡಿದೆ. ಇದನ್ನು ಮತ್ತಷ್ಟು ನಾಡಿನ ಒಳಗೆ ಹಾಗೂ ಹೊರಗಿರುವ ರಂಗಾಸಕ್ತರು ಮೆಚ್ಚಿಕೊಂಡರೆ ಇತರೆ ಕಾದಂಬರಿ ಪ್ರಕಾರಗಳನ್ನು ನಾಟಕ ರೂಪಕ್ಕೆ ತಂದು ಜನತೆಯ ಮುಂದೆ ಪ್ರದರ್ಶಿಸಲು ರಂಗ ನಿರ್ದೇಶಕರಿಗೆ ಹಾಗೂ ಕಲಾವಿದರಿಗೆ ಪ್ರೇರಣೆ ಸಿಗುವಂತಾಗುತ್ತದೆ ಎಂದು ಅವರು ಆಶಿಸಿದರು.

ನಾಟಕ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿ, 2013ರಲ್ಲಿ ಪ್ರಾರಂಭವಾದ ಕುವೆಂಪುರವರ ಮಲೆಗಳಲ್ಲಿ ಮದುಮಗಳು ನಾಟಕ ಪ್ರದರ್ಶನವು ಇಲ್ಲಿಯವರೆಗೂ 85 ಪ್ರದರ್ಶನಗಳನ್ನು ಕಂಡಿದ್ದು, ಈಗ ಜ.20ರಿಂದ ಫೆ.29ರವರೆಗೆ 24ಪ್ರದರ್ಶನಗಳು ನಡೆಯವಲಿವೆ. ಆ ಮೂಲಕ 100ಕ್ಕೂ ಹೆಚ್ಚು ಪ್ರದರ್ಶನಗೊಂಡ ಕಾದಂಬರಿ ರೂಪದ ಬೃಹತ್ ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ನಾಟಕಕಾರ ಕೆ.ವೈ.ನಾರಾಯಣಸ್ವಾಮಿ, ಇಲಾಖೆಯ ಕಾರ್ಯದರ್ಶಿ ಆರ್.ಆರ್.ಜನ್ನು ಉಪಸ್ಥಿತರಿದ್ದರು.

ರಾಷ್ಟ್ರಕವಿ ಕುವೆಂಪು ತಮ್ಮ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಯಂತ್ರನಾಗರಿಕತೆಯ ಆರಂಭಿಕ ಕಾಲಘಟ್ಟ, ಬ್ರಿಟಿಷರ ಆಡಳಿತ, ಮಲೆನಾಡು, ಅಲ್ಲಿನ ಜೀವಚರಗಳು, ಜನಜೀವನ ಒಂದಕ್ಕೊಂದು ಬೆಸೆದುಕೊಂಡಿರುವುದನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಇಂತಹ ಕಾದಂಬರಿಯನ್ನು ರಂಗರೂಪಕ್ಕೆ ತರುವ ಮೂಲಕ ನಮ್ಮ ಯುವ ತಲೆಮಾರಿಗೆ ನಮ್ಮ ಹಿಂದಿನ ಕಾಲಘಟ್ಟದ ಜೀವನ ವಿಧಾನವನ್ನು ತಿಳಿಸುವುದು ಹಾಗೂ ಕನ್ನಡ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸುವುದಾಗಿದೆ.

-ಬಸವಲಿಂಗಯ್ಯ, ರಂಗ ನಿರ್ದೇಶಕ

ದೇಶವನ್ನು ಕಟ್ಟಬೇಕೆಂದು ಹೇಳುವ ನಾವು ಮೊದಲು ಯುವಜನರ ಮನಸುಗಳನ್ನು ಕಟ್ಟುವುದರತ್ತ ಆದ್ಯತೆ ವಹಿಸಬೇಕಾಗಿದೆ. ಕಲೆ, ಸಾಹಿತ್ಯದ ಮೂಲಕ ಯುವ ಜನತೆಗೆ ದೇಶ, ಸಂಸ್ಕೃತಿ, ಪರಿಸರ, ಮಾನವೀಯ ವೌಲ್ಯಗಳು, ಸೌಹಾರ್ದತೆಯ ಪಾಠವನ್ನು ಹೇಳಿಕೊಡಬೇಕಾಗಿದೆ. ಅಂತಹ ಪ್ರಯತ್ನದ ಭಾಗವಾಗಿ ಮಲೆಗಳಲ್ಲಿ ಮದುಮಗಳು ಕಾದಂಬರಿ ನಾಟಕ ರೂಪಕ್ಕೆ ಬಂದಿದೆ. ಕಳೆದ 85ಪ್ರದರ್ಶನಗಳಲ್ಲಿ ಯುವ ಜನತೆಯೇ ಹೆಚ್ಚು ಪಾಲ್ಗೊಂಡು, ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಪುನಃ ಯುವ ಜನತೆಯ ಬೇಡಿಕೆಯ ಮೇರೆಗೆ ಜ.20ರಿಂದ ರಂಗಪ್ರದರ್ಶನಗೊಳ್ಳುತ್ತಿದೆ.

-ಕೆ.ವೈ.ನಾರಾಯಣಸ್ವಾಮಿ, ನಾಟಕಕಾರ

ಮಲೆಗಳಲ್ಲಿ ಮದುಮಗಳು ನಾಟಕ ಪ್ರದರ್ಶನ ಕುರಿತು

-ಜ.20ರಿಂದ ಫೆ.29ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ನಾಟಕ ಪ್ರದರ್ಶನ.

-ರಾತ್ರಿ 8ಗಂಟೆಯಿಂದ ಬೆಳಗ್ಗೆ 6ರವರೆಗೆ ಒಟ್ಟು 9ಗಂಟೆಗಳ ಪ್ರದರ್ಶನ.

-ನಾಟಕದಲ್ಲಿ 80ಕ್ಕೂ ಹೆಚ್ಚು ಪಾತ್ರಧಾರಿಗಳಿಂದ ನಟನೆ

-ನಾಲ್ಕು ರಂಗಸಜ್ಜಿಕೆಯಲ್ಲಿ ನಾಟಕ ಪ್ರದರ್ಶನ

-ಒಂದು ಪ್ರದರ್ಶನಕ್ಕೆ ಒಂದು ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವ ವ್ಯವಸ್ಥೆ -ಟಿಕೆಟ್ ದರ ಒಬ್ಬರಿಗೆ 249 ರೂ., ವಿದ್ಯಾರ್ಥಿಗಳಿಗೆ 150ರೂ. ಆಗಿರುತ್ತದೆ.

-ಟಿಕೆಟ್‌ನ್ನು bookmyshow ನಲ್ಲಿ ಪಡೆಯಬಹುದು.

-ಮಲೆಗಳಲ್ಲಿ ಮದುಮಗಳು ಕಾದಂಬರಿಯ ರಂಗರೂಪವನ್ನು ಕೆ.ವೈ.ನಾರಾಯಣಸ್ವಾಮಿ, ಸಂಗೀತ-ಹಂಸಲೇಖ, ರಂಗ ವಿನ್ಯಾಸ-ಶಶಿಧರ ಅಡಪ ಹಾಗೂ ನಾಟಕದ ನಿರ್ದೇಶನನ್ನು ಸಿ.ಬಸವಲಿಂಗಯ್ಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News