ಸಿಎಎ ವಿರುದ್ಧ ಪ್ರತಿಭಟನೆ : ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಮಧ್ಯಪ್ರದೇಶ ಸಿಎಂ

Update: 2020-01-19 04:00 GMT

ಹೊಸದಿಲ್ಲಿ: ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆ ಮುಗಿಯುವ ಸೂಚನೆ ಕಾಣುತ್ತಿಲ್ಲ. ಈ ಚಳವಳಿ ಇದೀಗ ವಿದ್ಯಾರ್ಥಿಗಳ ಕೈಯಲ್ಲಿದ್ದು, ಅವರು ಕೇಂದ್ರ ಸರ್ಕಾರದ ವಿಭಜನಕಾರಿ ನೀತಿಯ ವಿರುದ್ಧ ಮಾತ್ರವಲ್ಲದೇ ಆರ್ಥಿಕ ಕುಸಿತದ ಬಗ್ಗೆಯೂ ಆಕ್ರೋಶ ಹೊಂದಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್ ಎಚ್ಚರಿಸಿದ್ದಾರೆ.

"ವಿದ್ಯಾರ್ಥಿಗಳ ಹೋರಾಟ ಆರಂಭವಾದರೆ ಚಳವಳಿ ಎಷ್ಟು ದಿನ ಮುಂದುವರಿಯುತ್ತದೆ ಎಂದು ಅಂದಾಜಿಸುವುದು ಕಷ್ಟ. ಪೌರತ್ವ (ತಿದ್ದುಪಡಿ) ಕಾಯ್ದೆ ಅವರ ಆಕ್ರೋಶದ ಒಂದು ಮುಖ ಮಾತ್ರ. ಹೋರಾಟಕ್ಕೆ ಇತರ ಕಾರಣಗಳೂ ಇವೆ; ಅದು ಭವಿಷ್ಯದ ಅಭದ್ರತೆ ಅಥವಾ ಖರೀದಿ ಸಾಮರ್ಥ್ಯ ಕುಸಿದಿರುವುದೂ ಆಗಿರಬಹುದು" ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಆರ್ಥಿಕ ಕುಸಿತದ ಬಗೆಗಿನ ಗಮನವನ್ನು ಬೇರೆಡೆ ತಿರುಗಿಸಲು ವಿಭಜನಕಾರಿ ಸಿಎಎ-ಎನ್‌ಆರ್‌ಸಿಯನ್ನು ಮೋದಿ ಸರ್ಕಾರ ಜಾಣ್ಮೆಯಿಂದ ಜಾರಿಗೊಳಿಸಿದೆ. ಆದರೆ ಈ ಕಾರ್ಯತಂತ್ರ ಜನರ ಆಕ್ರೋಶ ಹೆಚ್ಚಲು ಕಾರಣವಾಯಿತು ಎಂದು ವಿಶ್ಲೇಷಿಸಿದರು.

"ಸಮಾಜವನ್ನು ವಿಭಜಿಸುವ ಸಲುವಾಗಿ ಮತ್ತು ಆರ್ಥಿಕ ಕುಸಿತದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಇದನ್ನು ಜಾರಿಗೊಳಿಸಲಾಗಿದೆ. ಆದರೆ ಭಾರತದ ಜನತೆಗೆ ಬಿಜೆಪಿಯ ದುರುದ್ದೇಶ ಮನವರಿಕೆಯಾಗಿದ್ದು, ಅವರಿಗೆ ಮಂಕುಬೂದಿ ಎರಚಲು ಸಾಧ್ಯವಿಲ್ಲ. ಸರ್ಕಾರ ಕೆಳಹಂತದಲ್ಲಿರುವ ರೈತರ ಬಗ್ಗೆ, ಸಣ್ಣ ವ್ಯಾಪಾರಿಗಳ ಬಗ್ಗೆ ಅಥವಾ ಸಣ್ಣ ವಹಿವಾಟಿನ ಬಗ್ಗೆ ಮಾತನಾಡುತ್ತಿಲ್ಲ" ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News