ಪೌರತ್ವ ಕಾಯ್ದೆಯು ಅನಗತ್ಯ: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ

Update: 2020-01-19 17:47 GMT

ಅಬುಧಾಬಿ (ಯುಎಇ), ಜ. 19: ಭಾರತದ ಪೌರತ್ವ ಕಾನೂನಿಗೆ ಮಾಡಲಾದ ತಿದ್ದುಪಡಿ ಅನಗತ್ಯವಾಗಿತ್ತು ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ಶನಿವಾರ ವರದಿ ಮಾಡಿದೆ. ಇದು ಭಾರತದಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿರುವ ಕಾನೂನಿನ ಬಗ್ಗೆ ಹಸೀನಾ ನೀಡಿರುವ ಮೊದಲ ಹೇಳಿಕೆಯಾಗಿದೆ.

‘‘ಭಾರತ ಸರಕಾರ ಈ ಕಾಯ್ದೆಯನ್ನು ಯಾಕೆ ಜಾರಿಗೆ ತಂದಿದೆ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ’’ ಎಂದು ಅಬುಧಾಬಿಯಲ್ಲಿ ‘ಗಲ್ಫ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

ಪೌರತ್ವ ಕಾನೂನು (ಸಿಎಎ) ಮತ್ತು ಪ್ರಸ್ತಾಪಿತ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)- ಇವೆರಡೂ ಭಾರತದ ಆಂತರಿಕ ವಿಷಯಗಳಾಗಿವೆ. ‘‘ಸಿಎಎ ಮತ್ತು ಎನ್‌ಆರ್‌ಸಿ ಭಾರತದ ಆಂತರಿಕ ವಿಷಯಗಳು ಎಂಬುದಾಗಿ ಬಾಂಗ್ಲಾದೇಶ ಯಾವತ್ತೂ ಪರಿಗಣಿಸಿದೆ’’ ಎಂದರು. ‘‘ಎನ್‌ಆರ್‌ಸಿ ಭಾರತದ ಆಂತರಿಕ ಚಟುವಟಿಕೆ ಎಂಬುದಾಗಿ ಭಾರತ ಸರಕಾರವೂ ಪದೇ ಪದೇ ಹೇಳುತ್ತಾ ಬಂದಿದೆ. ನಾನು ಹೊಸದಿಲ್ಲಿಗೆ 2019 ಅಕ್ಟೋಬರ್‌ನಲ್ಲಿ ಭೇಟಿ ನೀಡಿದ್ದಾಗ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ನನಗೆ ಈ ಭರವಸೆ ನೀಡಿದ್ದಾರೆ’’ ಎಂದು ಬಾಂಗ್ಲಾ ಪ್ರಧಾನಿ ನುಡಿದರು.

ಅಲ್ಪಸಂಖ್ಯಾತ ಸಮುದಾಯಗಳು ಕಿರುಕುಳ ತಾಳಲಾರದೆ ಬಾಂಗ್ಲಾದೇಶವನ್ನು ತೊರೆದಿವೆ ಎಂಬ ಆರೋಪವನ್ನು ಹಸೀನಾ ತಳ್ಳಿಹಾಕಿದ್ದಾರೆ. ಇದು ಭಾರತದ ಗೃಹ ಸಚಿವ ಅಮಿತ್ ಶಾ ಹೇಳಿರುವುದಕ್ಕೆ ವಿರುದ್ಧವಾಗಿದೆ. ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಅಲ್ಪಸಂಖ್ಯಾತರು, ಅದರಲ್ಲೂ ಮುಖ್ಯವಾಗಿ ಹಿಂದೂಗಳು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂಬುದಾಗಿ ಪದೇ ಪದೇ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News