85ನೆ ಕನ್ನಡ ಸಾಹಿತ್ಯ ಸಮ್ಮೇಳನ: ಅಗತ್ಯ ಸಲಹೆ, ಸಹಕಾರಕ್ಕಾಗಿ ಸಾಹಿತಿಗಳಿಗೆ ಜಿಲ್ಲಾಧಿಕಾರಿ ಮನವಿ

Update: 2020-01-19 14:18 GMT

ಕಲಬುರಗಿ, ಜ.19: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆಬ್ರವರಿ 5, 6 ಮತ್ತು 7 ರಂದು ನಡೆಯಲಿರುವ 85ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸುಸೂತ್ರವಾಗಿ ಮತ್ತು ಐತಿಹಾಸಿಕವಾಗಿ ಸಂಘಟಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಸಾಹಿತಿಗಳು ಅಗತ್ಯ ಸಲಹೆ, ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಶರತ್ ಮನವಿ ಮಾಡಿಕೊಂಡರು. 

ನಗರದ ಕನ್ನಡ ಭವನದಲ್ಲಿಂದು 85ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಹಿರಿಯ ಸಾಹಿತಿಗಳ ಸಭೆಯಲ್ಲಿ ಅವರು ಮಾತನಾಡಿದರು. 'ಸ್ಥಳೀಯ ಸಾಹಿತಿಗಳು, ಕಲಾವಿದರು ನುಡಿ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ನಿಮ್ಮ ಸಹಕಾರವೆ ನಮಗೆ ಆನೆ ಬಲ ಇದ್ದಂತೆ. ವೇದಿಕೆ ನಿರ್ಮಾಣ ಸೇರಿದಂತೆ ಇನ್ನಿತರ ಪೂರ್ವ ಸಿದ್ಧತೆಗಳ ಕಾರ್ಯ ನಮ್ಮದಾಗಿದೆ. ಉಳಿದಂತೆ ಕವಿಗೋಷ್ಠಿ, ಇನ್ನಿತರ ಕಾರ್ಯಕ್ರಮಗಳ ಉಸ್ತುವಾರಿ ಕನ್ನಡ ಸಾಹಿತ್ಯ ಪರಿಷತ್ತಿಗೆ ವಹಿಸಲಾಗಿದೆ ಎಂದು ಅವರು ಹೇಳಿದರು.

ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಮಾತನಾಡಿ, ಸಮ್ಮೇಳನಕ್ಕೆ ಆಗಮಿಸುವ ಹಿರಿಯ ನಾಗರಿಕರಿಗೆ ವೇದಿಕೆ ಸಮೀಪಕ್ಕೆ ತೆರಳಲು ವೀಲ್ ಚೇರ್ ವ್ಯವಸ್ಥೆ ಜೊತೆಗೆ ವಿಶೇಷ ಪಾಸ್‌ಗಳನ್ನು ಒದಗಿಸಬೇಕು. 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದಾಗಿರುವುದರಿಂದ 85 ಅಭಿನಂದನಾ ಪುಸ್ತಕಗಳನ್ನು ಮುದ್ರಿಸಿ ಬಿಡುಗಡೆ ಮಾಡಬೇಕು ಎಂದರು.

ಸ್ಮರಣ ಸಂಚಿಕೆ ಮಾದರಿಯಾಗಿರಬೇಕು. ಸಾಹಿತ್ಯ ಪರಿಷತ್ತಿನಿಂದ ಸ್ಥಳೀಯ ಸಾಹಿತಿಗಳು ರಚಿಸಿರುವ 25 ಪುಸ್ತಕಗಳನ್ನು ಪಡೆದು ಒಂದು ಪ್ರತ್ಯೇಕ ಪುಸ್ತಕ ಮಾರಾಟ ಮಳಿಗೆಯನ್ನು ತೆರೆದು ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಾಹಿತಿ ವಿಶಾಲಾಕ್ಷಿ ರೆಡ್ಡಿ ಮಾತನಾಡಿ, ಪ್ರತಿ ಕವಿಗೋಷ್ಠಿಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಬೇಕು. ಸ್ಥಳೀಯ ನಿರೂಪಕರನ್ನು ಸಮ್ಮೇಳನದ ನಿರೂಪಣೆಗೆ ಬಳಸಿಕೊಳ್ಳಬೇಕು ಎಂದರು.

ರೆಡ್‌ಕ್ರಾಸ್ ಸಂಸ್ಥೆಯ ಉಪಸಭಾಪತಿ ಅಪ್ಪಾರಾವ್ ಅಕ್ಕೋಣೆ ಮಾತನಾಡಿ, ಸಾಹಿತ್ಯ ಸಮ್ಮೇಳನದ ಪ್ರಚಾರ ಕಾರ್ಯ ಬೇಗನೆ ಆರಂಭವಾಗಬೇಕು. ಜಿಲ್ಲೆಯಾದ್ಯಂತ ಹೆಚ್ಚಿನ ಪ್ರಚಾರಕ್ಕೆ ಒತ್ತು ನೀಡಬೇಕು. ಪ್ರತಿ ಮನೆಯಲ್ಲಿ ಅಕ್ಷರ ಜಾತ್ರೆಯ ಹಬ್ಬ ಕಾಣುವಂತಾಗಬೇಕು. ಜನನಿಬಿಡ ಪ್ರದೇಶಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ನುಡಿ ಸಮ್ಮೇಳನದ ಪ್ರಚಾರ ಕಾರ್ಯ ಮಾಡಬೇಕು ಎಂದರು.

ಸಾಹಿತಿಗಳ ಸಲಹೆ, ಸೂಚನೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ನನ್ನ ಅಧಿಕಾರದ ವ್ಯಾಪ್ತಿಗೆ ಒಳಪಡುವ ಕೆಲಸಗಳನ್ನು ಶೀಘ್ರವಾಗಿ ಮುಗಿಸಿಕೊಡುವೆ. ಇನ್ನುಳಿದಂತೆ ಸಾಹಿತ್ಯ ಪರಿಷತ್ತಿಗೆ ಒಳಪಡುವ ವಿಷಯಗಳನ್ನು ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಅವರ ಗಮನಕ್ಕೆ ತರುವೆ ಎಂದರು.

ಇದೇ ಸಂದರ್ಭದಲ್ಲಿ ಡಾ.ಸ್ವಾಮಿರಾವ್ ಕುಲಕರ್ಣಿ ಅವರು ಸಮ್ಮೇಳನಕ್ಕೆ ವೈಯಕ್ತಿಕವಾಗಿ 15 ಸಾವಿರ ರೂ.ಗಳ ಚೆಕ್ ಅನ್ನು ಜಿಲ್ಲಾಧಿಕಾರಿಗಳಿಗೆ ದೇಣಿಗೆ ರೂಪದಲ್ಲಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ್ ಬಡಿಗೇರ, ಸಾಹಿತಿಗಳಾದ ಪ್ರೊ.ರವೀಂದ್ರ ಕರ್ಜಗಿ, ಎ.ಕೆ.ರಾಮೇಶ್ವರ, ಡಾ.ಎಚ್.ಟಿ.ಪೋತೆ, ಡಾ.ನಾಗಾಬಾಯಿ ಬುಳ್ಳಾ, ಮಹಿಪಾಲರೆಡ್ಡಿ ಮುನ್ನೂರ, ವಿಜಯಕುಮಾರ ಪಾಟೀಲ, ಶಿವರಂಜನ್ ಸತ್ಯಂಪೇಟ್ ಸೇರಿದಂತೆ ಇನ್ನಿತರ ಸಾಹಿತಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News