‘ಗಡಿ ವಿಚಾರ'ದಲ್ಲಿ ಶಿವಸೇನೆಯ ಸಂಜಯ್ ರಾವತ್‌ಗೆ ಅಶ್ವಥ್ ನಾರಾಯಣ ಸಲಹೆ

Update: 2020-01-19 14:43 GMT

ಬೆಂಗಳೂರು, ಜ. 19: ಗಡಿ ವಿಚಾರ ಮಹಾಜನ್ ವರದಿಯಲ್ಲೇ ಇತ್ಯರ್ಥ ಆಗಿದೆ. ಈ ವಿಚಾರವಾಗಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವುದನ್ನು ಬಿಟ್ಟು ಒಳ್ಳೆಯ ಕೆಲಸ ಮಾಡುವುದು ಸೂಕ್ತ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್‌ಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಸಲಹೆ ಮಾಡಿದ್ದಾರೆ.

ರವಿವಾರ ಮಲ್ಲೇಶ್ವರಂನಲ್ಲಿ ಮಧ್ವಾಚಾರ್ಯರ ಪ್ರತಿಮೆ ಲೋಕಾರ್ಪಣೆ ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರ ಕರ್ನಾಟಕ ಗಡಿ ವಿಚಾರವಾಗಿ ಪದೇ-ಪದೆ ರಾಜಕೀಯ ಪ್ರೇರಿತ ಹೇಳಿಕೆ ನೀಡಿ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಕೆಲಸ ಕೈ ಬಿಡಬೇಕು ಎಂದರು.

ಈ ವಿಚಾರವನ್ನು ಮತ್ತೆ ಮತ್ತೆ ಪ್ರಸ್ತಾಪಿಸುವುದು ಅನಗತ್ಯ. ಇಂಥ ವಿಷಯ ಬಿಟ್ಟು, ಮಾಡಬೇಕಿರುವ ಉತ್ತಮ ಕಾರ್ಯಗಳನ್ನು ಕೈಗೆತ್ತಿಕೊಂಡರೆ ಒಳ್ಳೆಯದು. ರಾವತ್ ತಿಳಿವಳಿಕೆ ಇರುವ ವ್ಯಕ್ತಿ. ಇಂತಹ ಕ್ಷುಲ್ಲಕ ವಿಷಯದಲ್ಲಿ ಹೆಸರು ಹಾಳು ಮಾಡಿಕೊಳ್ಳುವುದು ಸಲ್ಲ ಎಂದು ಆಕ್ಷೇಪಿಸಿದರು.

ಮಾನವೀಯತೆಗೆ, ಒಳ್ಳೆಯ ಕಾರ್ಯಗಳಿಗೆ ಗಡಿ ಇಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರದ ಜನ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ. ಅನಗತ್ಯ ವಿವಾದ ಎಳೆದು ತಂದು ಸಮಾಜದ ಶಾಂತಿ ಹಾಳುಗೆಡವಬಾರದು. ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಉಭಯ ರಾಜ್ಯಗಳು ಒಟ್ಟಿಗೆ ಕೆಲಸ ಮಾಡಬೇಕಿದೆ ಎಂದರು.

ಸಂಪುಟ ವಿಸ್ತರಣೆ: ಸಂಪುಟ ವಿಸ್ತರಣೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಬಿಎಸ್‌ವೈ ಮಾತನಾಡಿದ್ದಾರೆ. ಅವರು ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಾವೋಸ್‌ಗೆ ಪ್ರಯಾಣ ಬೆಳೆಸಿದ್ದು, ಅಲ್ಲಿಂದ ಹಿಂದಿರುಗಿದ ಕೂಡಲೇ ದಿಲ್ಲಿಗೆ ತೆರಳಿ ವರಿಷ್ಠರ ಜತೆ ಚರ್ಚೆ ನಡೆಸುವರು.

ಸಂಪುಟ ವಿಸ್ತರಣೆ ವಿಚಾರವಾಗಿ ಹೆಚ್ಚಿನ ಸ್ಪಷ್ಟತೆಗೆ ಮತ್ತೆ ಚರ್ಚೆ ಮಾಡಬೇಕಾದ ಕಾರಣ ಪ್ರಕ್ರಿಯೆ ಕೊಂಚ ವಿಳಂಬವಾಗಿದೆ. ಸಿಎಂ ಯಡಿಯೂರಪ್ಪ ವಿದೇಶದಿಂದ ವಾಪಾಸ್ ಬಂದ ತಕ್ಷಣ ಸಂಪುಟ ವಿಸ್ತರಣೆ ಆಗುವುದು ಎಂದು ಅಶ್ವಥ್‌ ನಾರಾಯಣ ಭರವಸೆ ನೀಡಿದರು.

ಡಿಸಿಎಂ ವರಿಷ್ಠರ ನಿರ್ಧಾರ: ಉಪಮುಖ್ಯಮಂತ್ರಿ ಸ್ಥಾನ ಕುರಿತು ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಣಯ ಕೈಗೊಳ್ಳಲಿದ್ದಾರೆ. ಪಕ್ಷ ಹಾಗೂ ಸರಕಾರದ ಹಿತದೃಷ್ಟಿಯಿಂದ ವರಿಷ್ಠರು ಸೂಕ್ತ ನಿರ್ಧಾರ ಮಾಡಲಿದ್ದಾರೆ ಎಂದು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News