'ಜಲ್-ಜೀವನ್ ಹರಿಯಾಲಿ' ಅಭಿಯಾನ: 5 ಕೋಟಿ ಮಂದಿಯಿಂದ ಮಾನವ ಸರಪಣಿ !

Update: 2020-01-20 03:42 GMT

ಪಾಟ್ನಾ: ಬಿಹಾರ ರಾಜ್ಯದ 5 ಕೋಟಿಗೂ ಅಧಿಕ ಮಂದಿ 18034 ಕಿಲೋಮೀಟರ್ ಉದ್ದದ ಮಾನವ ಸರಪಣಿ ನಿರ್ಮಿಸಿ ಜಲ ಸಂರಕ್ಷಣೆ ಮತ್ತು ಹಸಿರು ಹೊದಿಕೆ ಹೆಚ್ಚಿಸುವುದು, ಪಾನ ನಿಷೇಧ, ವರದಕ್ಷಿಣೆ ಮತ್ತು ಬಾಲ್ಯವಿವಾಹದ ವಿರುದ್ಧ ಜಾಗೃತಿ ಮೂಡಿಸಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಪ್ರಕಟಿಸಿದ್ದಾರೆ.

ಸರಣಿ ಮಾನವ ಸರಪಣಿಯ ಮೂರನೇ ಕಾರ್ಯಕ್ರಮ ಇದಾಗಿದ್ದು, "ಜಲ ಜೀವನ ಹರಿಯಾಲಿ" ಎಂಬ ಅಭಿಯಾನದಡಿ ಇದನ್ನು ಹಮ್ಮಿಕೊಂಡಿತ್ತು. ಒಂದರಿಂದ ನಾಲ್ಕನೇ ತರಗತಿವರೆಗಿನ 57.76 ಲಕ್ಷ ಶಾಲಾ ಮಕ್ಕಳು ಕೂಡಾ ಈ ಮಾನವ ಸರಪಣಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಮಕ್ಕಳು ತಮ್ಮ ಕ್ಯಾಂಪಸ್‌ಗಳಲ್ಲೇ ಮಾನವ ಸರಪಣಿ ರಚಿಸಿದರು. ಇದರೊಂದಿಗೆ 43,445 ಕೈದಿಗಳು ಕೂಡಾ ಜೈಲು ಆವರಣದೊಳಗೆ ಮಾನವ ಸರಪಣಿ ರಚಿಸಿದರು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಸ್ಪೀಕರ್ ವಿನಯ ಕುಮಾರ್ ಚೌಧರಿ ಮತ್ತು ಜಲವ್ಯಕ್ತಿ ರಾಜೇಂದ್ರ ಸಿಂಗ್ ಜತೆ ಗಾಂಧಿ ಮೈದಾನದಲ್ಲಿ ನಡೆದ ಮಾನವ ಸರಪಣಿಯಲ್ಲಿ ಪಾಲ್ಗೊಂಡರು. ಈ ದಾಖಲೆಯ ಪಾಲ್ಗೊಳ್ಳುವಿಕೆಗಾಗಿ ರಾಜ್ಯದ ಜನರನ್ನು ಅಭಿನಂದಿಸಿದರು. ರಾಜ್ಯಾದ್ಯಂತ 11.30ರಿಂದ 12 ಗಂಟೆ ನಡುವೆ ಮಾನವ ಸರಪಣಿಯನ್ನು ರಾಜ್ಯದಲ್ಲಿ ನಿರ್ಮಿಸಿದರೂ, ಕಾರ್ಯಕ್ರಮ ಆರಂಭವಾಗುವ ಮುನ್ನವೇ ಬೀದಿಗಳಲ್ಲಿ ಜನ ಸಾಲುಗಟ್ಟಿ ನಿಂತಿದ್ದರು.

ಈ ಸಮಾರಂಭವನ್ನು ವೀಕ್ಷಿಸಲು ಏಳು ಹೆಲಿಕಾಪ್ಟರ್ ಹಾಗೂ 100ಕ್ಕೂ ಹೆಚ್ಚು ಡ್ರೋಣ್‌ಗಳನ್ನು ಬಳಸಲಾಗಿತ್ತು. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನ ಪ್ರತಿನಿಧಿಗಳು ಮಾನವ ಸರಪಣಿಯ ಉದ್ದವನ್ನು ಲೆಕ್ಕ ಹಾಕಿದರು. ಇದು ಇಡೀ ವಿಶ್ವದಲ್ಲೇ ಅತಿ ಉದ್ದದ ಮಾನವ ಸರಪಣಿ ಎಂದು ಅವರು ಹೇಳಿದ್ದಾರೆ.

ಗಿನ್ನಿಸ್ ವಿಶ್ವದಾಖಲೆಗಳ ಪ್ರತಿನಿಧಿಗಳನ್ನೂ ಆಹ್ವಾನಿಸಲಾಗಿದ್ದರೂ, ಅವರು ಬರಲು ಅಸಾಧ್ಯ ಎಂದು ಹೇಳಿದ್ದಾಗಿ ಸಿಎಂ ಸಲಹೆಗಾರರಾದ ಅಂಜನಿ ಕುಮಾರ್ ಸಿಂಗ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News