ರಣಜಿ: ಅಶ್ವಿನ್ ಸ್ಪಿನ್ ಮೋಡಿಗೆ ಹಳಿ ತಪ್ಪಿದ ರೆಲ್ವೇಸ್

Update: 2020-01-20 04:19 GMT

ಚೆನ್ನೈ, ಜ.19: ರವಿಚಂದ್ರನ್ ಅಶ್ವಿನ್‌ರ ಅಮೋಘ ಬೌಲಿಂಗ್ ನೆರವಿನಿಂದ ರಣಜಿ ಟ್ರೋಫಿಯ ಆರನೇ ಸುತ್ತಿನ ಪಂದ್ಯದಲ್ಲಿ ತಮಿಳುನಾಡು ತಂಡ ರೈಲ್ವೇಸ್ ತಂಡವನ್ನು ಕೇವಲ 76 ರನ್‌ಗೆ ಆಲೌಟ್ ಮಾಡಿ ಸುಸ್ಥಿತಿಗೆ ತಲುಪಿದೆ.

 ರವಿವಾರ ಇಲ್ಲಿ ಆರಂಭವಾದ ರಣಜಿ ಪಂದ್ಯದಲ್ಲಿ ಆರ್.ಅಶ್ವಿನ್(4-26) ಹಾಗೂ ಎಡಗೈ ಸ್ಪಿನ್ನರ್ ಎಂ.ಸಿದ್ದಾರ್ಥ್(4-32)ರೈಲ್ವೇಸ್ ತಂಡವನ್ನು ಹಳಿ ತಪ್ಪಿಸಲು ಪ್ರಮುಖ ಪಾತ್ರವಹಿಸಿದರು. ಒಟ್ಟು 14 ಓವರ್‌ಗಳ ಬೌಲಿಂಗ್ ಮಾಡಿದ ಅಶ್ವಿನ್ ಅವರು ಸೌರಭ್ ಸಿಂಗ್, ಎಂ.ಎನ್.ರಾವ್, ಹರೀಶ್ ತ್ಯಾಗಿ ಹಾಗೂ ಅವಿನಾಶ್ ಯಾದವ್ ವಿಕೆಟ್‌ಗಳನ್ನು ಉರುಳಿಸಿದರು. ರೈಲ್ವೇಸ್ ಪರ ಆಶೀಷ್ ಸೆಹ್ರಾವತ್(15), ಸೌರಭ್ ಸಿಂಗ್(22) ಹಾಗೂ ಶಿವೇಂದ್ರ ಸಿಂಗ್(10)ಎರಡಂಕೆ ಸ್ಕೋರ್ ದಾಟಲು ಸಫಲರಾದರು. ಈಗ ನಡೆಯುತ್ತಿರುವ ರಣಜಿಯಲ್ಲಿ ಮೊದಲ ಬಾರಿ ಒಗ್ಗಟ್ಟಿನ ಪ್ರದರ್ಶನ ನೀಡಿದ ತಮಿಳುನಾಡಿನ ಪರ 100ನೇ ರಣಜಿ ಪಂದ್ಯ ಆಡಿದ ಓಪನರ್ ಅಭಿನವ್ ಮುಕುಂದ್ ಕ್ಷಿಪ್ರವಾಗಿ 100 ರನ್ ಕಲೆ ಹಾಕಿ ಆತಿಥೇಯ ತಂಡ ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 236 ರನ್ ಗಳಿಸಲು ನೆರವಾದರು. 107 ಎಸೆತಗಳಲ್ಲಿ 30ನೇ ಪ್ರಥಮ ದರ್ಜೆ ಶತಕ ಸಿಡಿಸಿದ ಅಭಿನವ್ ಇನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್‌ಗಳಿದ್ದವು. ಸೂರ್ಯಪ್ರಕಾಶ್(50)ಜೊತೆಗೆ ಮೊದಲ ವಿಕೆಟ್‌ಗೆ 156 ರನ್ ಜೊತೆಯಾಟ ನಡೆಸಿದರು. ಔಟಾಗದೆ 57 ರನ್(55 ಎಸೆತ)ಗಳಿಸಿದ ದಿನೇಶ್ ಕಾರ್ತಿಕ್ ತಮಿಳುನಾಡು ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 160 ರನ್ ಮುನ್ನಡೆ ಪಡೆಯುವುದಕ್ಕೆ ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News