ಅನುತ್ಪಾದಕ ಸಾಲಗಳು: ಮಾರ್ಚ್ 31ರ ಬಳಿಕ ಭಾರತದ ಬ್ಯಾಂಕ್ ಗಳ 'ವಾಸ್ತವ ಸ್ಥಿತಿ' ಅನಾವರಣ

Update: 2020-01-20 08:51 GMT

ಹೊಸದಿಲ್ಲಿ: ಭಾರತದ ಬ್ಯಾಂಕುಗಳು ಭಾರೀ ಎನ್‍ ಪಿಎ ಅಥವಾ ಅನುತ್ಪಾದಕ ಸಾಲಗಳ ಆತಂಕವನ್ನು ಎದುರಿಸುತ್ತಿದ್ದು, ಈಗ ಅಂದಾಜಿಸಲಾಗಿರುವ ಎನ್‍ ಪಿಎ ಪ್ರಮಾಣವಾದ 9.5 ಲಕ್ಷ ಕೋಟಿ ರೂ.ಗಿಂತಲೂ ಬ್ಯಾಂಕುಗಳ ಅನುತ್ಪಾದಕ ಸಾಲಗಳ ಪ್ರಮಾಣ ಅಧಿಕವಾಗಿರಬಹುದು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಅನುತ್ಪಾದಕ ಸಾಲಗಳನ್ನೂ ಎನ್‍ ಪಿಎಗಳೆಂದು ಘೋಷಿಸುವುದಕ್ಕಿದ್ದ ನಿರ್ಬಂಧ ಮಾರ್ಚ್ 31ರಂದು ತೆರವುಗೊಳ್ಳುವುದರೊಂದಿಗೆ ವಾಸ್ತವ ಸ್ಥಿತಿ ಅನಾವರಣಗೊಳ್ಳಬಹುದು ಎಂದು deccanherald.com ವರದಿ ಮಾಡಿದೆ.

ಮುದ್ರಾ ಸಾಲಗಳ ಎನ್‍ ಪಿಎಗಳು ಪ್ರತಿ ತ್ರೈಮಾಸಿಕ ಏರುತ್ತಲೇ ಇವೆ. ಜತೆಗೆ ರಾಜ್ಯ ವಿದ್ಯುತ್ ವಿತರಣಾ ಕಂಪೆನಿಗಳ ಸಾಲಗಳು, ಮಾರ್ಚ್ ವೇಳೆಗೆ 80,000 ಕೋಟಿ ರೂ.ಗಳಾಗುವ ಸಾಧ್ಯತೆಯಿದೆ. ಇದರ ಜತೆಗೆ ಟೆಲಿಕಾಂ ಕಂಪೆನಿಗಳ 92,000 ಕೋಟಿ ರೂ. ಸಾಲಗಳೂ ಸೇರಿವೆ. ಈಗಾಗಲೇ ಸುಪ್ರೀಂ ಕೋರ್ಟ್ ಜನವರಿ ಅಂತ್ಯದೊಳಗೆ ಟೆಲಿಕಾಂ ಕಂಪೆನಿಗಳಿಗೆ ಬಾಕಿ ತೀರಿಸುವಂತೆ ಹೇಳಿದೆ. ಬಾಕಿ ಕೃಷಿ ಸಾಲಗಳೂ ದೊಡ್ಡ ಹೊರೆಯಾಗುವ ಸಾಧ್ಯತೆಯಿದೆ.

ಸಾರ್ವಜನಿಕ ರಂಗದ ಬ್ಯಾಂಕುಗಳು ಏರುತ್ತಿರುವ ಎನ್‍ ಪಿಎಯಿಂದಾಗಿ ಅತಿ ಹೆಚ್ಚು ಬಾಧಿತವಾಗುವ ಸಾಧ್ಯತೆಯಿದೆ. ಎಂಎಸ್‍ಎಂಇಗಳ ಅನುತ್ಪಾದಕ ಸಾಲಗಳನ್ನು ತಮ್ಮ ಎನ್‍ ಪಿಎಗಳಿಂದ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಈ ಬ್ಯಾಂಕುಗಳು ಹೊರಗಿಟ್ಟಿರುವುದೇ ಇದಕ್ಕೆ ಕಾರಣ. ಸುಲಭದ ನಿಯಮಗಳ ಆಧಾರದಲ್ಲಿ ಸಾಲ ನೀಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕ್ರಮ ಘೋಷಿಸಿದಂದಿನಿಂದ ಎಂಎಸ್‍ಎಂಇ ಬಾಕಿ ಸಾಲಗಳನ್ನು ಎನ್‍ಪಿಎ ಪ್ರಮಾಣದಿಂದ ಹೊರಗಿಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಮುದ್ರಾ ಯೋಜನೆ ಆರಂಭಗೊಂಡ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ 17,000 ಕೋಟಿ ರೂ. ಸಾಲ ಬಾಕಿಯಿದೆ.

ಕಳೆದ ವರ್ಷದ ಮಧ್ಯಭಾಗದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಬ್ಯಾಂಕುಗಳಿಂದ ನೀಡಲಾದ ಒಟ್ಟು ರೂ 9.42 ಲಕ್ಷದ ಪೈಕಿ ರೂ 1.04 ಲಕ್ಷ ಕೋಟಿ ಅನುತ್ಪಾದಕ ಸಾಲವೆಂದು ಪರಿಗಣಿಸಲಾಗಿದೆ.

ಈ ವರ್ಷದ ಸೆಪ್ಟೆಂಬರ್ ವೇಳೆಗೆ ಬ್ಯಾಂಕುಗಳ ಅನುತ್ಪಾದಕ ಸಾಲ ಪ್ರಮಾಣ ಅವುಗಳು ನೀಡಿರುವ ಒಟ್ಟು ಸಾಲದ ಈಗಿನ ಶೇ 9.3ರಿಂದ ಶೇ 9.9ಕ್ಕೆ ಏರಿಕೆಯಾಗಬಹುದು ಎಂದು ಆರ್‍ ಬಿಐ ಬಿಡುಗಡೆಗೊಳಿಸಿರುವ ಇತ್ತೀಚಿಗಿನ ಆರ್ಥಿಕ ಸುಸ್ಥಿರತೆ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News