ಮಂಗಳೂರು ವಿಮಾನ ನಿಲ್ದಾಣದ ಭದ್ರತಾ ವೈಫಲ್ಯವನ್ನು ತೆರೆದಿಟ್ಟ ನಿಗೂಢ ಸ್ಫೋಟಕ

Update: 2020-01-21 10:31 GMT

ರಾಜ್ಯದಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯ ಕಿಚ್ಚು ವ್ಯಾಪಕವಾಗುತ್ತಿದ್ದಂತೆಯೇ ಅದನ್ನು ಮುಚ್ಚಿ ಹಾಕಲು ವ್ಯವಸ್ಥೆ ಬೇರೆ ಬೇರೆ ತಂತ್ರಗಳನ್ನು ಅನುಸರಿಸುತ್ತಿದೆ. ಲಾಠಿ, ಕೋವಿಯ ಬಲದಿಂದಲೂ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದಾಗ ರಾಜ್ಯದೊಳಗೆ ಏಕಾಏಕಿ ‘ಮಾಧ್ಯಮಗಳು ಸೃಷ್ಟಿಸಿರುವ ಉಗ್ರರು’ ಓಡಾಡತೊಡಗಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ‘ಉಗ್ರರ ಕುರಿತ ಕಪೋಲಕಲ್ಪಿತ ಕತೆ’ಗಳು ಪುಂಖಾನುಪುಂಖವಾಗಿ ಹರಿದು ಬರುತ್ತಿವೆ. ಇಂತಹ ಸಂದರ್ಭದಲ್ಲಿ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸುವುದು, ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಹರಡಿದರೆ ಅವರಿಗೆ ಎಚ್ಚರಿಕೆ ನೀಡುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ. ಆದರೆ ಪೊಲೀಸ್ ಇಲಾಖೆಯೂ ವೌನ ಧರಿಸುವ ಮೂಲಕ ಆ ವರದಿಗಳನ್ನು ಸಮರ್ಥಿಸಿಕೊಳ್ಳುತ್ತಿವೆ. ಇದೇ ಸಂದರ್ಭದಲ್ಲಿ ಇಪ್ಪತ್ತು ದಿನಗಳ ಹಿಂದೆ ಓರ್ವ ಆರೆಸ್ಸೆಸ್ ಕಾರ್ಯಕರ್ತನಿಗೆ ಚೂರಿಯಿಂದ ಇರಿತ ನಡೆಸಿದ ಆರೋಪದಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೀಗೆ ಬಂಧನವಾದ ಕೆಲವೇ ಗಂಟೆಗಳಲ್ಲಿ ‘ಅವರು ಇಬ್ಬರು ಬಿಜೆಪಿ ಮುಖಂಡರನ್ನು ಹತ್ಯೆಗೈಯಲು ಸಂಚು ಹೂಡಿದ್ದರು’ ಎಂದು ಕೆಲವು ಮಾಧ್ಯಮಗಳು ಸುದ್ದಿಗಳನ್ನು ಹರಡಿದವು. ಈ ಬಗ್ಗೆಯೂ ಪೊಲೀಸ್ ಇಲಾಖೆ ಅಸ್ಪಷ್ಟ ಹೇಳಿಕೆಗಳನ್ನು ನೀಡುತ್ತಾ ಜನರಲ್ಲಿ ಆತಂಕ ಉಳಿಯುವ ಹಾಗೆ ನೋಡಿಕೊಂಡಿತು. ಅವರನ್ನು ಹತ್ಯೆಗೈಯಲು ಸಂಚು ನಡೆಸಿದ ಬಗ್ಗೆ ಯಾವ ಪೊಲೀಸ್ ಠಾಣೆಯಲ್ಲೂ ಎಫ್‌ಐಆರ್ ದಾಖಲಾಗಿಲ್ಲ. ರಾಜಕಾರಣಿಗಳ ಜೊತೆಗೆ ಪೊಲೀಸರೂ ಪರೋಕ್ಷವಾಗಿ ಕೈ ಜೋಡಿಸಿ ಸಮಾಜವನ್ನು ಆತಂಕಕ್ಕೆ ತಳ್ಳುವ ಪ್ರಯತ್ನವೊಂದು ನಡೆಯುತ್ತಿರುವುದೇ ಕಳವಳಕಾರಿ ಸಂಗತಿಯಾಗಿದೆ.

ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರನ್ನು ಸಮರ್ಥಿಸಿಕೊಳ್ಳಲು ಪೊಲೀಸ್ ಇಲಾಖೆ ಸುಳ್ಳಿನ ಮೇಲೆ ಸುಳ್ಳಿನ ಕತೆಗಳನ್ನು ಕಟ್ಟಲು ಹೊರಟು ಇನ್ನಷ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದಕೊಂಡಿದ್ದಾರೆ. ಕೇರಳದಿಂದ 2 ಸಾವಿರಕ್ಕೂ ಅಧಿಕ ಮಂದಿ ದುಷ್ಕರ್ಮಿಗಳು ಆಗಮಿಸಿ ದಾಂಧಲೆ ನಡೆಸಿದ್ದರಿಂದ ಗೋಲಿಬಾರ್ ನಡೆಸಬೇಕಾಯಿತು ಎನ್ನುವ ತಮ್ಮ ಸುಳ್ಳನ್ನು ನಿಜ ಮಾಡಲು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ. ಕೇರಳದಿಂದ ಬೇರೆ ಬೇರೆ ಕಾರ್ಯನಿಮಿತ್ತವಾಗಿ ಬಂದಿರುವ ನೂರಾರು ಜನರಿಗೆ ಮೊಬೈಲ್ ಟವರ್‌ನ್ನು ಬಳಸಿಕೊಂಡು ನೋಟಿಸ್ ಕಳುಹಿಸುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಬೀಡಿ ಕಟ್ಟಿ ಜೀವನ ಸಾಗಿಸುವ ಮಹಿಳೆಯರ ಮೇಲೂ ದಾಂಧಲೆಯಲ್ಲಿ ಭಾಗವಹಿಸಿದ ಆರೋಪ ಹೊರಿಸಿ ನೋಟಿಸ್ ಕಳುಹಿಸಲಾಗಿದೆ. ಆ ಮೂಲಕ ಇಡೀ ಕೇರಳದ ಜನರನ್ನೇ ಕರ್ನಾಟಕದ ಪೊಲೀಸರು ಅನುಮಾನಿಸಲು ಹೊರಟಿದ್ದಾರೆ. ಎನ್‌ಆರ್‌ಸಿಯಲ್ಲಿ ಪೌರತ್ವವನ್ನು ಸಾಬೀತು ಪಡಿಸುವಂತೆಯೇ ನೋಟಿಸ್ ದೊರಕಿದವರು ತಾವು ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎನ್ನುವುದನ್ನು ಸಾಬೀತು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮಗಳಲ್ಲಿ ಪೊಲೀಸರ ಕೃತ್ಯ ಬೆಳಕಿಗೆ ಬಂದಂತೆಯೇ ‘ನೋಟಿಸ್ ಕಳುಹಿಸಿಯೇ ಇಲ್ಲ’ ಎಂದು ಸ್ಪಷ್ಟೀಕರಣ ನೀಡುತ್ತಿದ್ದಾರೆ. ಹಾಗಾದರೆ ಕಾಸರಗೋಡು, ಕೇರಳದ ಜನರಿಗೆ ನೋಟಿಸ್ ಕಳುಹಿಸಿದವರು ಯಾರು? ಈ ಬಗ್ಗೆ ಪೊಲೀಸ್ ಇಲಾಖೆಯ ಬಳಿ ಉತ್ತರವಿಲ್ಲ.

ಇದೀಗ ಏರ್‌ಪೋರ್ಟ್‌ನಲ್ಲಿ ಶಂಕಿತ ಸ್ಫೋಟಕವೊಂದು ಪತ್ತೆಯಾಗಿ ಮಂಗಳೂರು ಮತ್ತೆ ಸುದ್ದಿಯಲ್ಲಿದೆ. ಸಾಧಾರಣವಾಗಿ ಮಂಗಳೂರಿನ ಸಣ್ಣ ಪುಟ್ಟ ಮಾಲ್‌ಗಳಲ್ಲೂ ಒಳಗೆ ಹೋಗುವಾಗಲೂ ಬ್ಯಾಗ್‌ಗಳನ್ನು ತಪಾಸಣೆ ಮಾಡಲಾಗುತ್ತದೆ. ಸ್ಫೋಟಕದಂತಹ ವಸ್ತುಗಳಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಏರ್‌ಪೋರ್ಟ್ ಎನ್ನುವುದು ಅತ್ಯಂತ ಬಿಗಿ ಭದ್ರತೆಯನ್ನು ಹೊಂದಿರುವ ಸ್ಥಳ ಎಂದು ನಾವೆಲ್ಲ ನಂಬಿದ್ದೇವೆ. ಹೀಗಿರುವಾಗ ಎಲ್ಲ ಸಿಸಿ ಕ್ಯಾಮರಾಗಳಿಗೆ ವಂಚಿಸಿ, ತಪಾಸಣೆಗಾರರನ್ನು ದಾಟಿ ದುಷ್ಕರ್ಮಿ ಹೇಗೆ ಕೌಂಟರ್‌ಗಳಿರುವ ಜಾಗದಲ್ಲಿ ಸ್ಫೋಟಕವನ್ನು ತಂದಿಟ್ಟ? ಎನ್ನುವ ಪ್ರಶ್ನೆ ಎದುರಾಗಿದೆ. ಕೆಲವು ಭಾಗದ ಸಿಸಿ ಕ್ಯಾಮರಾಗಳು ಕೆಟ್ಟಿವೆ ಎನ್ನುವಂತಹ ಬೇಜವಾಬ್ದಾರಿ ಉತ್ತರಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಇಷ್ಟಾದರೂ ಸ್ಫೋಟಕ ತಂದಿಟ್ಟ ವ್ಯಕ್ತಿಯ ಮುಖ ಚಹರೆ ಭಾಗಶಃ ಪತ್ತೆಯಾಗಿದೆ. ರಿಕ್ಷಾವನ್ನೂ ಗುರುತಿಸಲಾಗಿದೆ. ನಗರದ ಬೇರೆ ಬೇರೆ ದಿಕ್ಕಿನಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರೀಕ್ಷಿಸಿದರೆ ಶಂಕಿತನನ್ನು ಬಂಧಿಸುವುದು ಕಷ್ಟವೇನೂ ಅಲ್ಲ.

ವಿಶೇಷವೆಂದರೆ ಆತ ತಂದಿರುವ ವಸ್ತು ಬಾಂಬ್ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸ್ಫೋಟಕದಂತಹ ವಸ್ತು ಎಂದೇ ಪೊಲೀಸರು ಪದೇ ಪದೇ ಹೇಳಿದ್ದಾರೆ ಮತ್ತು ಅದನ್ನು ಸ್ಫೋಟಿಸಿ ನಾಶ ಪಡಿಸುವುದಕ್ಕೆ ಪೊಲೀಸರೇ ಹರಸಾಹಸಗೈದಿದ್ದಾರೆ. ಒಂದಂತೂ ಸ್ಪಷ್ಟವಾಗಿದೆ. ಶಂಕಿತ ಸ್ಫೋಟಕವನ್ನು ತಂದಿಟ್ಟವನ ಉದ್ದೇಶ ವಿಮಾನ ನಿಲ್ದಾಣ ಸ್ಫೋಟಿಸುವುದಂತೂ ಖಂಡಿತ ಅಲ್ಲ. ಯಾಕೆಂದರೆ ಯಾವುದೋ ರಿಮೋಟ್‌ನಿಂದ ಅಥವಾ ಬಟನ್‌ನಿಂದ ಸ್ಫೋಟಿಸುವ ಸ್ವಯಂಚಾಲಿತವಾದ ಸ್ಫೋಟಕ ಅದು ಆಗಿರಲಿಲ್ಲ. ಅವನ ಉದ್ದೇಶ ಜನರಲ್ಲಿ ಆತಂಕವನ್ನು ಸೃಷ್ಟಿಸುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಮಂಗಳೂರು ನಗರ ಒಳಗೊಳಗೆ ಆತಂಕ, ಭಯದಿಂದ ಬೇಯುತ್ತಿದೆ. ಇದಕ್ಕೆ ಇನ್ನಷ್ಟು ಎಣ್ಣೆ ಸುರಿಯುವುದಕ್ಕಾಗಿಯೇ ದುಷ್ಕರ್ಮಿ ಅದನ್ನು ತಂದಿರಿಸುವ ಸಾಧ್ಯತೆಗಳಿವೆ. ಪೊಲೀಸರಂತೂ ಆ ಸಣ್ಣ ಸ್ಫೋಟಕವನ್ನು ನಾಶ ಮಾಡಲು ಮಾಧ್ಯಮಗಳ ಮೂಲಕ ಬೃಹತ್ ಕಾರ್ಯಾಚರಣೆಯನ್ನೇ ಮಾಡಿದರು. ಅದನ್ನು ವರ್ಣರಂಜಿತವಾಗಿ ಟಿವಿಗಳು ಪ್ರಸಾರ ಮಾಡಿ ಪೊಲೀಸರ ಶೌರ್ಯವನ್ನೂ ರಾಜ್ಯದ ಉದ್ದಗಲಕ್ಕೆ ಹರಡಿದರು. ಆ ಸ್ಫೋಟಕವನ್ನು ಪೊಲೀಸರು ನಾಶ ಮಾಡಿದಾಗ ಉಂಟಾದ ಸದ್ದು, ಪುತ್ತೂರು ಜಾತ್ರೆಯ ಗರ್ನಾಲ್‌ನ ಸದ್ದಿನಷ್ಟೂ ಇರಲಿಲ್ಲ. ಆ ಸ್ಫೋಟದ ಸದ್ದಿಗಿಂತ ಕೆಲವು ಟಿವಿ ಚಾನೆಲ್‌ಗಳೇ ಹೆಚ್ಚು ಸದ್ದು ಮಾಡಿದವು. ನಾಡಿನ ಜನರು ಆ ಚಾನೆಲ್‌ಗಳ ಸದ್ದಿಗೇ ಹೆಚ್ಚು ಕಂಗೆಟ್ಟಂತಿತ್ತು.

ಈ ಸಣ್ಣ ಸ್ಫೋಟಕದ ಸದ್ದನ್ನು ಮುಂದಿಟ್ಟು ಗೋಲಿಬಾರ್‌ನಲ್ಲಿ ಸಿಡಿಸಲ್ಪಟ್ಟ ಗುಂಡಿನ ಸದ್ದನ್ನು ಮುಚ್ಚಿ ಹಾಕುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಆದುದರಿಂದ ಈ ಸ್ಫೋಟಕ ವಿಮಾನ ನಿಲ್ದಾಣದಲ್ಲಿ ಹೇಗೆ ಪತ್ತೆಯಾಯಿತು ಎನ್ನುವುದು ಶೀಘ್ರವಾಗಿ ತನಿಖೆ ನಡೆಸಬೇಕಾಗಿದೆ. ವಿಮಾನ ನಿಲ್ದಾಣದ ಭದ್ರತಾ ವೈಫಲ್ಯ ಇದರಿಂದ ಬಯಲಾಗಿದೆ. ಆದುದರಿಂದ, ಮೊತ್ತ ಮೊದಲು ಆ ವೈಫಲ್ಯದ ಹಿಂದಿರುವವರನ್ನು ಗುರುತಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇದು ನಿಜಕ್ಕೂ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯನ್ನು ಹೊತ್ತವರ ವೈಫಲ್ಯ. ಅದಕ್ಕಾಗಿ ಅವರು ಖಂಡಿತ ಶಿಕ್ಷೆಗೆ ಅರ್ಹರು. ಇದೇ ಸಂದರ್ಭದಲ್ಲಿ ಸಿಸಿ ಕ್ಯಾಮರಾದ ದೃಶ್ಯಗಳನ್ನು ಆಧರಿಸಿ ತನಿಖೆಯನ್ನು ಚುರುಕುಗೊಳಿಸಬೇಕು. ಶಂಕಿತನನ್ನು ಬಂಧಿಸಿ ಆತನನ್ನು ಆ ಕೃತ್ಯಕ್ಕೆ ಪ್ರೇರೇಪಿಸಿದವರು ಯಾರು? ಅವರ ಉದ್ದೇಶಗಳೇನು ಎನ್ನುವುದು ಬಯಲಾಗಬೇಕು. ಮಂಗಳೂರು ರಾಷ್ಟ್ರಮಟ್ಟದಲ್ಲಿ ಉದ್ಯಮಿಗಳನ್ನು ಆಕರ್ಷಿಸುತ್ತಿರುವ ನಗರ. ಅಭಿವೃದ್ಧಿಯೆಡೆಗೆ ಮುನ್ನಡೆಯುತ್ತಿರುವ ಶಹರವೂ ಹೌದು. ಇಂತಹ ಆತಂಕ ಸೃಷ್ಟಿಸುವ ಘಟನೆಗಳು ಮಂಗಳೂರಿನ ವರ್ಚಸ್ಸಿಗೆ ಸರಿಪಡಿಸಲಾಗದಷ್ಟು ಹಾನಿಯನ್ನು ಉಂಟು ಮಾಡಬಹುದು. ಈ ಹಿನ್ನೆಲೆಯಲ್ಲಿ ನಿಗೂಢ ಸ್ಫೋಟಕದ ರಹಸ್ಯವನ್ನು ಶೀಘ್ರವಾಗಿ ಪೊಲೀಸರು ಬಯಲಿಗೆಳೆಯ್ಚಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News