ಭಾರತದ ಆರ್ಥಿಕ ನಿಧಾನಗತಿಯೇ ಜಾಗತಿಕ ಬೆಳವಣಿಗೆಯ ಇಳಿಕೆಗೆ ಕಾರಣ: ಐಎಂಎಫ್ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್

Update: 2020-01-21 14:52 GMT
Photo: twitter.com/gitagopinath

ದಾವೋಸ್,ಜ.21: ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯು ಭಾರತ ಮತ್ತು ಇತರ ಉದಯೋನ್ಮುಖ ಆರ್ಥಿಕತೆಗಳಲ್ಲಿನ ತೀವ್ರ ಆರ್ಥಿಕ ಮಂದಗತಿಯಿಂದಾಗಿ ಜಾಗತಿಕ ಬೆಳವಣಿಗೆ ದರದ ಅಂದಾಜನ್ನು ಕಡಿತಗೊಳಿಸಿದೆ. ತನ್ಮಧ್ಯೆ ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು, ಜಾಗತಿಕ ಬೆಳವಣಿಗೆ ಮುನ್ನಂದಾಜನ್ನು ಕಡಿತಗೊಳಿಸಲು ಭಾರತವು ಮುಖ್ಯ ಕಾರಣವಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (ಡಬ್ಲುಇಎಫ್)ಯ 50ನೇ ಶೃಂಗಸಭೆಯ ನೇಪಥ್ಯದಲ್ಲಿ ಮಾತನಾಡಿದ ಅವರು,‘ಜಾಗತಿಕ ಬೆಳವಣಿಗೆ ದರವನ್ನು 2019ನೇ ಸಾಲಿಗೆ ಶೇ.2.9 ಮತ್ತು 2020ನೇ ಸಾಲಿಗೆ ಶೇ.3.3 ಎಂದು ಅಂದಾಜಿಸಲಾಗಿದ್ದು,ಇದು ಅಕ್ಟೋಬರ್‌ನಲ್ಲಿ ಅಂದಾಜಿಸಿದ್ದಕ್ಕಿಂತ ಶೇ.0.1ರಷ್ಟು ಕಡಿಮೆಯಾಗಿದೆ. ನಾವು ಭಾರತದ ಬೆಳವಣಿಗೆ ದರವನ್ನು ಕಡಿಮೆಗೊಳಿಸಿದ್ದು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ’ಎಂದರು.

ಭಾರತದ ಆರ್ಥಿಕ ಹಿಂಜರಿತವು ಜಾಗತಿಕ ಬೆಳವಣಿಗೆ ಮುನ್ನೋಟದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬ ಪ್ರಶ್ನೆಗೆ ಗೀತಾ ಗೋಪಿನಾಥ್, ಸರಳ ಲೆಕ್ಕಾಚಾರದಂತೆ ಅದು ಶೇ.80ಕ್ಕೂ ಅಧಿಕವಾಗಿದೆ ಎಂದು ಉತ್ತರಿಸಿದರು.

ಐಎಂಎಫ್ ಸೋಮವಾರ ಬ್ಯಾಂಕೇತರ ಹಣಕಾಸು ಕ್ಷೇತ್ರದಲ್ಲಿ ಒತ್ತಡ ಮತ್ತು ದುರ್ಬಲ ಗ್ರಾಮೀಣ ಆದಾಯ ವೃದ್ಧಿಯ ಕಾರಣಗಳನ್ನು ನೀಡಿ 2019-20ನೇ ಹಣಕಾಸು ವರ್ಷಕ್ಕೆ ಭಾರತದ ಪ್ರಗತಿ ದರದ ಅಂದಾಜನ್ನು ಶೇ.4.8ಕ್ಕೆ ಇಳಿಸಿದೆ.

ಭಾರತದ ಪ್ರಗತಿ ದರ ಅಂದಾಜು ಕಡಿತ ಕುರಿತು ಪ್ರಶ್ನೆಗೆ ಅವರು,‘ಮೊದಲ ಎರಡು ತ್ರೈಮಾಸಿಕಗಳಲ್ಲಿ ಜಿಡಿಪಿ ನಮ್ಮ ಮುನ್ನಂದಾಜಿಗಿಂತ ಕಡಿಮೆಯಾಗಿದೆ. ಬ್ಯಾಂಕೇತರ ಹಣಕಾಸು ಕ್ಷೇತ್ರದಲ್ಲಿ ಹೆಚ್ಚಿನ ಒತ್ತಡವಿದೆ. ಸಾಲಗಳಿಗೆ ಬೇಡಿಕೆ ತೀವ್ರವಾಗಿ ಕುಸಿದಿದೆ ಮತ್ತು ಉದ್ಯಮ ಕ್ಷೇತ್ರದಲ್ಲಿ ನಿರುತ್ಸಾಹವನ್ನು ನಾವು ಕಂಡಿದ್ದೇವೆ. ಈ ಎಲ್ಲ ಕಾರಣಗಳು ಭಾರತದ ಪ್ರಗತಿ ದರ ಅಂದಾಜನ್ನು ಪರಿಷ್ಕರಿಸುವುದನ್ನು ಅಗತ್ಯವಾಗಿಸಿದ್ದವು ’ಎಂದು ಉತ್ತರಿಸಿದರು.

ಮುಂದಿನೆರಡು ವರ್ಷಗಳಲ್ಲಿ ಆರ್ಥಿಕತೆಯು ಚೇತರಿಸಿಕೊಳ್ಳಲಿದ್ದು, ಭಾರತವು 2020-21ರಲ್ಲಿ ಶೇ.5.8ರಷ್ಟು ಮತ್ತು 2021-22ರಲ್ಲಿ ಶೇ.6.5ರಷ್ಟು ಪ್ರಗತಿ ದರವನ್ನು ಸಾಧಿಸಲಿದೆ ಎಂದೂ ಐಎಂಎಫ್ ಮುನ್ನಂದಾಜಿಸಿದೆ.

ಭಾರತದ ಆರ್ಥಿಕತೆಯು ಹಳಿಗೆ ಮರಳುವ ಕುರಿತು ಮಾತನಾಡಿದ ಗೀತಾ ಗೋಪಿನಾಥ್, ಭಾರತವು ಚೇತರಿಸಿಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮುಂದಿನ ಹಣಕಾಸು ವರ್ಷದಲ್ಲಿ ಮಹತ್ವದ ಚೇತರಿಕೆ ಕಂಡು ಬರಲಿದೆ. ಹಲವಾರು ಉತ್ತೇಜಕ ಕ್ರಮಗಳ ಜೊತೆಗೆ ಕಾರ್ಪೊರೇಟ್ ತೆರಿಗೆಗಳನ್ನೂ ಕಡಿತಗೊಳಿಸಲಾಗಿದೆ. ಇವೆಲ್ಲ ಪ್ರಗತಿ ದರ ಚೇತರಿಕೆಗೆ ನೆರವಾಗಲಿವೆ ಎಂದರು.

ಎನ್‌ಪಿಎ ಸಮಸ್ಯೆ ಇನ್ನಷ್ಟು ಉಲ್ಬಣಿಸಲು ಅವಕಾಶ ನೀಡದೆ ಸಾಲಗಳ ಬೆಳವಣಿಗೆಗೆ ಒತ್ತು ನೀಡುವದು ಸರಕಾರದ ಮುಂದಿರುವ ಸವಾಲಿನ ಕಾರ್ಯವಾಗಿದೆ ಮತ್ತು ಅದಕ್ಕಾಗಿ ಅಗತ್ಯ ನೀತಿಯನ್ನು ಹೊಂದುವುದು ಮೊದಲ ಹೆಜ್ಜೆಯಾಗಿದೆ. ಬ್ಯಾಂಕುಗಳ ಮರುಬಂಡವಾಳೀಕರಣವು ತ್ವರಿತವಾಗಿ ನಡೆಯಬೇಕಿದೆ ಎಂದೂ ಗೀತಾ ಗೋಪಿನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News