ರೈತರಿಂದ ಕೃಷಿ ಸಾಲ ವಸೂಲಿಗೆ ಮುಂದಾದ ರಾಜ್ಯ ಸರಕಾರ

Update: 2020-01-21 18:11 GMT

ಬೆಂಗಳೂರು, ಜ.21: ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಸಹಕಾರ ಸಂಘಗಳ ಮೂಲಕ ರೈತರಿಗೆ ಈ ಹಿಂದೆ ನೀಡಿದ್ದ ಕೃಷಿ ಸಾಲವನ್ನು ರೈತರಿಂದ ವಸೂಲಿ ರಾಜ್ಯ ಸರಕಾರ ಮುಂದಾಗಿದೆ. ಆದರೆ, ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಸರಕಾರಕ್ಕೆ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. 

2016-17ನೇ ಸಾಲಿನಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಕೃಷಿಗೆ ನೀಡಿದ್ದ ಸುಸ್ತಿ ಸಾಲ ವಸೂಲಿ ಮಾಡದಂತೆ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸುತ್ತೋಲೆಯನ್ನು ರಾಜ್ಯ ಸರಕಾರ ರದ್ದುಪಡಿಸಿದೆ.

ರಾಜ್ಯದಲ್ಲಿ ಒಂದು ಕಡೆ ನೆರೆ ಮತ್ತೊಂದು ಕಡೆ ಬರ ಪರಿಸ್ಥಿತಿ ಇದ್ದು, ರೈತರಿಂದ ರಾಜ್ಯ ಸರಕಾರ ಬಲವಂತದಿಂದ ಸಾಲ ವಸೂಲಿ ಮಾಡುವುದನ್ನು ನಿಲ್ಲಿಸಬೇಕೆಂಬ ಆಗ್ರಹಿಸಿ ಕೇಳಿಬಂದಿದೆ. ಸುಸ್ತಿ ಸಾಲ ವಸೂಲಾತಿ ಸಂಬಂಧ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸೆ.4ರಂದು ವಿಶೇಷ ಸಭೆ ನಡೆದಿದ್ದು, ಧೀರ್ಘಾವಧಿ ಸಾಲಗಳ ವಸೂಲಾತಿ ಬಗ್ಗೆ ಸರಕಾರವು ವಿಧಿಸಿರುವ ನಿರ್ಬಂಧ ಹಿಂಪಡೆಯುವ ಕುರಿತು ಚರ್ಚಿಸಲಾಯಿತು.

ಈ ವೇಳೆ ಆರ್ಥಿಕ ಇಲಾಖೆಯು ಪರಿಶೀಲನೆ ನಡೆಸಿತು. ಮುಖ್ಯಮಂತ್ರಿ ಸಾಲ ವಸೂಲಾತಿ ಮಾಡಬಾರದು ಎಂದು ಸೂಚಿಸಿದ್ದರು. ಆದರೆ, ಅದಕ್ಕೆ ಹಣಕಾಸು ಇಲಾಖೆಯು ಒಪ್ಪಿಗೆ ನೀಡಿರಲಿಲ್ಲ. ಸಾಲ ವಸೂಲಾತಿ ಮಾಡದಿರುವುದಕ್ಕೆ ಕಾಸಾರ್ಡ್ ಬ್ಯಾಂಕ್ ಮತ್ತು ಆಡಳಿತ ಇಲಾಖೆಯು ನೀಡಿರುವ ಕಾರಣ ಒಪ್ಪುವಂತಹದ್ದಲ್ಲ ಎಂದು ಹಣಕಾಸು ಇಲಾಖೆ ಅಭಿಪ್ರಾಯ ನೀಡಿತ್ತು. ಹೀಗಾಗಿ ಇದೀಗ ರಾಜ್ಯ ಸರಕಾರ ರೈತರಿಂದ ಸುಸ್ತಿ ಸಾಲ ವಸೂಲಿಗೆ ಮುಂದಾಗಿರುವುದು ವಿಪಕ್ಷಗಳು ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News