ಜೀವಪರ ಜಗತ್ತನ್ನು ಕಟ್ಟಿಕೊಡುವ ‘ಹೊರಳು ನೋಟ’

Update: 2020-01-21 18:26 GMT

ಪತ್ರಿಕೋದ್ಯಮ ಮಂಜುನಾಥ ಅದ್ದೆಯವರಿಗೆ ಒಂದು ವೃತ್ತಿಯಾಗಿರಲಿಲ್ಲ. ಜೀವಪರ ಸಮಾಜಕ್ಕಾಗಿ ಮಿಡಿಯುವ ಅವಕಾಶವಾಗಿ ಅವರು ಅದನ್ನು ಬಳಸಿಕೊಂಡು ಬಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರು ತಮ್ಮ ಬರಹದ ಕ್ಷೇತ್ರವನ್ನು ಕೇವಲ ರಾಜಕೀಯ ವಿಶ್ಲೇಷಣೆಗೆ, ಸಂಶೋಧನಾ ವರದಿಗೆ ಸೀಮಿತವಾಗಿಸಲಿಲ್ಲ. ನಾಡಿನ ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೂ ಅವರು ಮಿಡಿಯುತ್ತಾ ಬಂದವರು. ವರ್ತಮಾನದ ವಿಕಾರಗಳಿಗೆ ಅಷ್ಟೇ ನಿಷ್ಠುರವಾದ ಪ್ರತಿಕ್ರಿಯೆಗಳನ್ನು ನೀಡುವುದಕ್ಕೂ ಅವರು ಹಿಂಜರಿಯುತ್ತಿರಲಿಲ್ಲ. ಅಗ್ನಿ ಪತ್ರಿಕೆಯಲ್ಲಿ ಅವರು ಸಮಾಜದ ವಿವಿಧ ಕ್ಷೇತ್ರಗಳಿಗೆ ತಮ್ಮ ಲೇಖನಿಯ ಮೂಲಕ ನೀಡಿದ ಕೊಡುಗೆಗಳು ಹಲವು. ಇವರು ಅಗ್ನಿ ಪತ್ರಿಕೆಗಾಗಿ ಬರೆದ ಅಂಕಣಗಳ ಸಂಗ್ರಹ ‘ಹೊರಳು ನೋಟ’ ಇದೀಗ ಕೃತಿ ರೂಪ ಪಡೆದಿದೆ.

ಕರ್ನಾಟಕದಲ್ಲಿ ಎಪ್ಪತ್ತರ ದಶಕದಿಂದ ಈವರೆಗೆ ದುಡಿಯುವ ಜನರ ಪರವಾಗಿ ಹೋರಾಡಿದವರು, ಬರೆದವರು, ಧ್ವನಿ ಮಾಡಿದವರು ಬಹಳಷ್ಟು ಜನರಿದ್ದಾರೆ. ಅನೇಕರು ತಮ್ಮ ಬದುಕು ಬರಹಗಳಿಂದ ಸಕಾರಾತ್ಮಕ ಶಕ್ತಿಯನ್ನು ಸಾಮುದಾಯಿಕವಾಗಿ ಹೆಚ್ಚಿಸಲು ಶ್ರಮಿಸಿದ್ದಾರೆ. ಆ ಮೂಲಕ ಪ್ರಜಾಸತ್ತಾತ್ಮಕ ವೌಲ್ಯಗಳನ್ನು ದೃಢಗೊಳಿಸಲು ವೈಯಕ್ತಿಕ ಆಕಾಂಕ್ಷೆಗಳಲ್ಲಿ ಅನೇಕವನ್ನು ಬಿಟ್ಟುಕೊಟ್ಟಿದ್ದಾರೆ. ಇಂತಹ ವ್ಯಕ್ತಿಗಳ ಪರಿಯವನ್ನು ಮಾಡುವ ಉದ್ದೇಶವನ್ನು ಈ ಕೃತಿ ಹೊಂದಿದೆ. ಬೆನ್ನುಡಿಯಲ್ಲಿ ಹೇಳುವಂತೆ ‘‘ಬರಹಗಳು ಸಾಂಸ್ಕೃತಿಕ ಲೋಕದ ವ್ಯಕ್ತಿಗಳ ಪರಿಚಯಾತ್ಮಕ ಬರಹಗಳಂತೆ ಕಂಡರೂ ಅದರಾಚೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿ, ರಾಜಕಾರಣದ ಜೊತೆಗೆ ಕನ್ನಡದ ಸಾಮಾಜಿಕ ಬದುಕನ್ನು ಪ್ರಭಾವಿಸಿದ ಬಗೆಯನ್ನು ವಿವರಿಸುತ್ತವೆ’’. ಕೃತಿಯಲ್ಲಿ ಒಟ್ಟು 55 ವ್ಯಕ್ತಿತ್ವಗಳನ್ನು ಅದ್ದೆ ಮೊಗೆದು ಕೊಡುತ್ತಾರೆ. ಅದು ಕೇವಲ ಒಬ್ಬ ವ್ಯಕ್ತಿಯ ಪರಿಚಯವಷ್ಟೇ ಅಲ್ಲ. ಆ ಜನರ ಮೂಲಕ ಇಡೀ ಕರ್ನಾಟಕವನ್ನು ನೋಡುವ ಪ್ರಯತ್ನವನ್ನೂ ಅವರು ಮಾಡುತ್ತಾರೆ. ಹೆಬ್ಬಂಡೆ ಮೇಲಿನ ಹೆಮ್ಮರ ದೇವನೂರ ಮಹಾದೇವ, ನರುಜು ನೆಲದ ಪ್ರತಿಭಟನೆ ನಟರಾಜ್, ಸಾಮಾನ್ಯರ ಸಂಗಾತಿ ರಹಮತ್, ಕಡಲ ಕಿನಾರೆಯ ತಣ್ಣಗಿನ ಕುದಿ ಬಿಂದು ಅನುಪಮಾ, ಕುಪ್ಪೂರಿನ ವಟವೃಕ್ಷ ಕೆವೈಎನ್, ಇರುವೆ ಸಾಲಿನ ಕನಸುಗಾರ ರಾಮಯ್ಯ, ವಿಜ್ಞಾನದ ನಾಡಿ ಹಿಡಿದ ನಾಗೇಶ್ ಹೆಗಡೆ, ತಾರಿಣಿಯ ಮನೋಗಾನ...ಒಬ್ಬೊಬ್ಬ ವ್ಯಕ್ತಿಯನ್ನು ಪರಿಚಯಿಸುವಾಗಲೂ ಅವರ ವ್ಯಕ್ತಿತ್ವವನ್ನು ಪರಿಸರದೊಂದಿಗೆ ಜೋಡಿಸುತ್ತಾ ಹೋಗುತ್ತಾರೆ. ಪರಿಚಯಿಸಲು ತಾವು ಆರಿಸಿಕೊಂಡಿರುವ ವ್ಯಕ್ತಿತ್ವಗಳೇ ಅದ್ದೆಯವರ ಬರವಣಿಗೆಯ ಜೀವಪರ ನಿಲುವುಗಳನ್ನು ಎತ್ತಿ ಹಿಡಿಯುತ್ತದೆ.

ಸಿರಿವರ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಪುಟಗಳು 272. ಮುಖಬೆಲೆ 270. ಆಸಕ್ತರು 94484 65233 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News