ದವೀಂದರ್ ಮನೆ ಮೇಲೆ ಎನ್‌ಐಎ ದಾಳಿ

Update: 2020-01-22 18:33 GMT

ಶ್ರೀನಗರ, ಜ. 22: ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಮಾಜಿ ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್ ಪಾತ್ರದ ಬಗ್ಗೆ ತನಿಖೆ ಮುಂದುವರಿಯುತ್ತಿರುವಂತೆ ಬುಧವಾರ ದವೀಂದರ್ ಸಿಂಗ್ ಮನೆ ಮೇಲೆ ಎನ್‌ಐಎ ದಾಳಿ ನಡೆಸಿದೆ. ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಪ್ರಯಾಣಿಸುತ್ತಿರುವಾಗ 57ರ ಹರೆಯದ ದವೀಂದರ್ ಸಿಂಗ್ ಬಂಧಿತನಾದ ಒಂದು ವಾರಗಳ ಬಳಿಕ ಶ್ರೀನಗರದ ಇಂದಿರಾನಗರದಲ್ಲಿರುವ ಆತನ ಮನೆ ಮೇಲೆ ಎನ್‌ಐಎ ದಾಳಿ ನಡೆಸಿದೆ.

ದವೀಂದರ್ ಸಿಂಗ್‌ನನ್ನು ಬಂಧಿಸಿದ ಕೂಡಲೇ ಜಮ್ಮು ಹಾಗೂ ಕಾಶ್ಮೀರ ಪೊಲೀಸ್ ಇಲಾಖೆಯಿಂದ ಆತನನ್ನು ವಜಾಗೊಳಿಸಲಾಗಿತ್ತು. 2018ರಲ್ಲಿ ಆತನಿಗೆ ನೀಡಲಾಗಿದ್ದ ಶೌರ್ಯ ಪ್ರಶಸ್ತಿಯನ್ನು ಹಿಂದೆ ತೆಗೆದುಕೊಳ್ಳಲಾಗಿತ್ತು. ದಾಳಿ ನಡೆಸಿದ ಬಳಿಕ ಎನ್‌ಐಎಯ ಕೆಲವು ಹಿರಿಯ ಅಧಿಕಾರಿಗಳು ಹೊಸದಿಲ್ಲಿಗೆ ಹಿಂದಿರುಗಿದ್ದಾರೆ. ಆದರೆ, ತನಿಖೆ ಮುಂದುವರಿಸಲು ಐವರು ಸದಸ್ಯರ ಎನ್‌ಐಎ ತಂಡ ಅಲ್ಲೇ ಉಳಿದುಕೊಂಡಿದೆ.

ದವೀಂದರ್ ಸಿಂಗ್ ಹಾಗೂ ಭಯೋತ್ಪಾದಕ ಸಂಘಟನೆಗಳಾದ ಹಿಜ್ಬುಲ್ ಮುಜಾಹಿದ್ದೀನ್, ಪಾಕಿಸ್ತಾನ ಮೂಲದ ಜೈಶೆ ಮುಹಮ್ಮದ್ ನಡುವಿನ ನಂಟು ಹಾಗೂ ಆತ ಪಾಕಿಸ್ತಾನದ ಬೇಹುಗಾರಿಗೆ ಸಂಸ್ಥೆ ಐಎಸ್‌ಐಯೊಂದಿಗೆ ಸಂಬಂಧ ಇರಿಸಿಕೊಂಡಿರುವ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News