ಹೆತ್ತವರ ಜನನ ಸ್ಥಳ, ದಿನಾಂಕ ಗೊತ್ತಿಲ್ಲದಿದ್ದಲ್ಲಿ ಪ್ರಶ್ನೆ 'ಕೈಬಿಡಲಾಗಿದೆ ಎಂದು ಪರಿಗಣಿಸಲಾಗುವುದು': ಕೇಂದ್ರ ಸರಕಾರ

Update: 2020-01-23 06:14 GMT
ಪ್ರಕಾಶ್ ಜಾವಡೇಕರ್

ಹೊಸದಿಲ್ಲಿ : ಈ ವರ್ಷ ನಡೆಯಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್) ಪ್ರಕ್ರಿಯೆ ವೇಳೆ ಜನರು ತಮ್ಮ ಹೆತ್ತವರ ಜನನ ದಿನಾಂಕ ಹಾಗೂ ಜನನ ಸ್ಥಳದ ಮಾಹಿತಿಯನ್ನು ನೀಡುವುದು ಐಚ್ಛಿಕ ಆಗಿರುವುದರಿಂದ ಅವರು ಈ ಬಗ್ಗೆ ಮಾಹಿತಿ ನೀಡದೇ ಇದ್ದರೆ ಆ ಪ್ರಶ್ನೆಗಳನ್ನು ''ಕೈಬಿಡಲಾಗಿದೆ ಎಂದು ಪರಿಗಣಿಸಲಾಗುವುದು'' ಎಂದು ಕೇಂದ್ರ ಸರಕಾರ ಹೇಳಿದೆ.

''ಎನ್‍ಪಿಆರ್ ಪ್ರಶ್ನಾವಳಿಯಲ್ಲಿ ಹಲವಾರು ಪ್ರಶ್ನೆಗಳು ಐಚ್ಛಿಕ ಎಂದು ಈಗಾಗಲೇ ಹೇಳಿದ್ದೇನೆ, ಜನರಿಗೆ ತಮ್ಮ ಹೆತ್ತವರ ಜನನ ಸ್ಥಳ ಮತ್ತು ದಿನಾಂಕ ನೆನಪಿದ್ದರೆ ನೀಡಬಹುದು, ನೆನಪಿಲ್ಲದೇ ಇದ್ದರೆ ನೀಡುವುದು ಅಗತ್ಯವಿಲ್ಲ'' ಎಂದು ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದ ಜತೆ ಮಾತನಾಡುತ್ತಾ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

ಹೆತ್ತವರ ಜನನ ಸ್ಥಳ ಹಾಗೂ ದಿನಾಂಕ ಕುರಿತಾದ ಪ್ರಶ್ನೆಗಳನ್ನು ಕೈಬಿಡಬೇಕೆಂಬ ಬೇಡಿಕೆಯನ್ನು ಸರಕಾರ ಪರಿಗಣಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಮಿತ್ರ ಪಕ್ಷ ಲೋಕ್ ಜನಶಕ್ತಿಯ ನಾಯಕ ರಾಮ್ ವಿಲಾಸ್  ಪಾಸ್ವಾನ್ ಅವರು ಹೇಳಿರುವ ಕುರಿತಾದ ವರದಿಗಳಿಗೆ ಪ್ರತಿಕ್ರಿಯಿಸಿದ ಸಚಿವ ''ಇಲ್ಲ, ಅದು ಹಾಗಲ್ಲ,  ಮಾಹಿತಿ ನೀಡಲು ಇಚ್ಛೆಯಿದ್ದವರು ಮಾತ್ರ ನೀಡಬೇಕಾದುದರಿಂದ  ಪ್ರಶ್ನೆಯನ್ನು  ಕೈಬಿಡಲಾಗಿದೆ ಎಂದು  ತಿಳಿದುಕೊಳ್ಳಲಾಗುವುದು'' ಎಂದರು.

''ಹಿಂದಿನ ಕಾಂಗ್ರೆಸ್ ಸರಕಾರ ಎನ್‍ಪಿಆರ್ 2010ರಲ್ಲಿ ಜಾರಿಗೆ ತಂದಾಗ ಅದನ್ನು ಸ್ವಾಗತಿಸಲಾಗಿತ್ತು. ಆಗ ಎಲ್ಲರೂ ಮಾಹಿತಿ ನೀಡಿದ್ದರು. ಅವರು ಅದನ್ನು ಜಾರಿಗೆ ತಂದರೆ ಒಳ್ಳೆಯದು ನಾವು ತಂದರೆ ಸರಿಯಲ್ಲ ಎಂಬಂತಾಗಿದೆ,'' ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News