ವಂಚನೆ ಆರೋಪ: ಮಾಜಿ ಕ್ರಿಕೆಟಿಗ ಅಝರುದ್ದೀನ್ ಸೇರಿ ಮೂವರ ವಿರುದ್ಧ ದೂರು ದಾಖಲು

Update: 2020-01-23 06:23 GMT

ಹೈದರಾಬಾದ್ , ಜ.23: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಸೇರಿದಂತೆ ಮೂವರು 20.96 ಲಕ್ಷ ವಂಚನೆ ಮಾಡಿರುವುದಾಗಿ ಆರೋಪಿಸಿ ಔರಂಗಾಬಾದ್ ನ ಟ್ರಾವೆಲ್ ಏಜೆಂಟ್  ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

"ಭಾರತದ ಮಾಜಿ ಕ್ರಿಕೆಟಿಗ ಅಝರುದ್ದೀನ್ ಮತ್ತು ಇತರ ಇಬ್ಬರು ಟ್ರಾವೆಲ್ ಏಜೆಂಟ್ ಗೆ ವಂಚಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಒಂದು ವೇಳೆ ನ್ಯಾಯಾಲಯದಲ್ಲಿ ಅವರು ಹಣ ಪಾವತಿಸಿದರೆ ಅವರಿಗೆ ಬಂಧನದಿಂದ  ಪಾರಾಗಲು ಸಾಧ್ಯ. ಇಲ್ಲದಿದ್ದರೆ ಮೂವರನ್ನು ಬಂಧಿಸಲಾಗುವುದು" ಎಂದು ಪಿಎಸ್‌ಐ ಅಮರನಾಥ್ ಡಿ ನಾಗ್ರೆ  ತಿಳಿಸಿದ್ದಾರೆ

ಅಝರುದ್ದೀನ್ ಅವರು ಟ್ರಾವೆಲ್ ಏಜೆಂಟರ ಆರೋಪವನ್ನು ನಿರಾಕರಿಸಿದ್ದಾರೆ. ಔರಂಗಾಬಾದ್ ನಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದೆ. ನಾನು ನನ್ನ ಕಾನೂನು ತಂಡವನ್ನು ಸಂಪರ್ಕಿಸುತ್ತಿದ್ದೇನೆ ಮತ್ತು ಅಗತ್ಯದ ಕ್ರಮ ಕೈಗೊಳ್ಳುವುದಾಗಿ ಅಝರ್  ಹೇಳಿದರು.

ಕಳೆದ ನವೆಂಬರ್‌ನಲ್ಲಿ ಭಾರತದ ಮಾಜಿ ನಾಯಕ ಅಝರುದ್ದೀನ್ ಆಪ್ತ ಸಹಾಯಕ ಮುಜೀಬ್ ಖಾನ್ ಅವರ ಕೋರಿಕೆಯ ಮೇರೆಗೆ ಅಝರುದ್ದೀನ್ ಮತ್ತು ಇನ್ನಿಬ್ಬರಿಗೆ 20.96 ಲಕ್ಷ ರೂ.ಗಳ ವಿವಿಧ ಅಂತರ್ ರಾಷ್ಟ್ರೀಯ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿತ್ತು. ಆನ್‌ಲೈನ್‌ನಲ್ಲಿ  ಹಣ ಪಾವತಿ ಮಾಡುವುದಾಗಿ ಪದೇ ಪದೇ ಭರವಸೆ ನೀಡಲಾಗಿದ್ದರೂ, ಅವರು ಈ ತನಕ ಟಿಕೆಟ್ ದರವನ್ನು ಪಾವತಿಸಿಲ್ಲ ಎಂದು ದೂರುದಾರ ಮಹಾರಾಷ್ಟ್ರದ ಔರಂಗಾಬಾದ್ ನಗರದ ಡ್ಯಾನಿಶ್ ಟೂರ್ಸ್ ಮತ್ತು ಟ್ರಾವೆಲ್ಸ್ ಏಜೆನ್ಸಿಯ ಮಾಲಕ ಶಹಾಬ್ ಮುಹಮ್ಮದ್ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News