'ಆಝಾದಿ' ಘೋಷಣೆ ಕೂಗುವವರ ವಿರುದ್ಧ ದೇಶದ್ರೋಹ ಪ್ರಕರಣ: ಆದಿತ್ಯನಾಥ್ ಎಚ್ಚರಿಕೆ

Update: 2020-01-23 06:47 GMT

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಿಗೆ ಎಚ್ಚರಿಕೆ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, 'ಆಝಾದಿ' ಘೋಷಣೆಗಳನ್ನು ಕೂಗುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗುವುದು ಹಾಗೂ ಸರಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಎಂದು ಹೇಳಿದ್ದಾರೆ.

ಕಾನ್ಪುರ್ ನಲ್ಲಿ ಸಿಎಎ ಪರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ''ಪ್ರತಿಭಟನೆಯ ನೆಪದಲ್ಲಿ ಕಾಶ್ಮೀರದಲ್ಲಿ ನಡೆದಂತೆ ಇಲ್ಲಿಯೂ ಆಝಾದಿ ಪರ ಘೋಷಣೆಗಳನ್ನು ಕೂಗಿದರೆ ಅದನ್ನು ದೇಶದ್ರೋಹವೆಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು,'' ಎಂದು ಎಚ್ಚರಿಕೆ ನೀಡಿದ್ದಾರೆ. ''ಭಾರತದಲ್ಲಿದ್ದುಕೊಂಡು ದೇಶದ ವಿರುದ್ಧ ಸಂಚು ಹೂಡಲು ಯಾರಿಗೂ ಅನುಮತಿಸಲಾಗುವುದಿಲ್ಲ,'' ಎಂದು ಅವರು ಹೇಳಿದರು.

ಪುರುಷರು ಮನೆಯಲ್ಲಿ ಆರಾಮವಾಗಿ ಉಳಿದುಕೊಂಡು ಮಹಿಳೆಯರು ಹಾಗೂ ಮಕ್ಕಳನ್ನು ಪ್ರತಿಭಟನೆ ನಡೆಸಲು ಬೀದಿಗೆ ಕಳುಹಿಸಿರುವುದು ನಾಚಿಕೆಗೇಡು ಎಂದು ಅವರು ಹೇಳಿದರು.

''ಈ ಜನರಿಗೆ ತಾವಾಗಿಯೇ ಪ್ರತಿಭಟನೆ ನಡೆಸಲು ಧೈರ್ಯವಿಲ್ಲ. ಅವರು ದಾಂಧಲೆಯಲ್ಲಿ ತೊಡಗಿದರೆ ಅವರ ಆಸ್ತಿ ವಶಪಡಿಸಿಕೊಳ್ಳಲಾಗುವುದು. ಅದಕ್ಕೆ ಅವರೀಗ ಏನು ಮಾಡಿದ್ದಾರೆ ? ಮಹಿಳೆಯರನ್ನು ರಸ್ತೆಗಳಲ್ಲಿ ಪ್ರತಿಭಟಿಸುವಂತೆ ಮಾಡಿದ್ದಾರೆ. ಪುರುಷರು ಮನೆಯಲ್ಲಿ ಆರಾಮವಾಗಿ ಹೊದಿಕೆ ಹೊದ್ದುಕೊಂಡು ಮಲಗಿ ಮಹಿಳೆಯರನ್ನು ರಸ್ತೆಯಲ್ಲಿ ಕೂರಿಸುವುದು ಅಪರಾಧ. ನಾಚಿಕೆಗೇಡು,'' ಎಂದು ಆದಿತ್ಯನಾಥ್ ಹೇಳಿದರು.

''ವಿಪಕ್ಷಗಳು ಸಿಎಎ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ, ಅವರಿಗೆ ದೇಶ ಮುಖ್ಯವಲ್ಲ, ಹಿಂದೂಗಳು, ಸಿಖ್, ಬೌದ್ಧ ಧರ್ಮೀಯರು, ಜೈನರು ಹಾಗೂ ಪಾರ್ಸಿಗಳು ಮುಖ್ಯವಲ್ಲ, ಕಾಂಗ್ರೆಸ್ಸಿಗೆ ಕ್ರೈಸ್ತರೂ ಮುಖ್ಯವಲ್ಲ. ಐಎಸ್‍ಐ ಏಜಂಟರಿಗೆ ಭಾರತಕ್ಕೆ ಪ್ರವೇಶ ನೀಡುವ ತನಕ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಅವರು ಹೇಳಿದ್ದಾರೆ''ಎಂದು ಆದಿತ್ಯನಾಥ್ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News