ಕಲುಷಿತ ನೀರು ಕುಡಿದು ವಿದ್ಯಾರ್ಥಿನಿಯರು ಅಸ್ವಸ್ಥ: ಜಿ.ಪಂ ಸದಸ್ಯರು ಹಾಸ್ಟೆಲ್ ಗೆ ಭೇಟಿ

Update: 2020-01-23 12:04 GMT

ಚಿಕ್ಕಮಗಳೂರು, ಜ.23: ಕಲುಷಿತ ನೀರು ಕುಡಿದು ಹಾಸ್ಟೆಲ್‍ನಲ್ಲಿ ಕೆಲ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಗುರುವಾರ ನಗರದ ರಾಮನಹಳ್ಳಿ ಬಿಸಿಎಂ ಹಾಸ್ಟೆಲ್‍ಗೆ ತಾಪಂ ಅಧ್ಯಕ್ಷ ಹಾಗೂ ಜಿಪಂ ಸದಸ್ಯರು ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ತಾಲೂಕು ಪಂಚಾಯತ್ ಅಧ್ಯಕ್ಷ ನೆಟ್ಟಕೆರೆಹಳ್ಳಿ ಜಯ್ಯಣ್ಣ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ, ಜಿಪಂ ಸದಸ್ಯರಾದ ಬಿ.ಜೆ.ಸೋಮಶೇಖರ್ ಹಾಗೂ ಅಧಿಕಾರಿಗಳ ತಂಡ ಗುರುವಾರ ಹಾಸ್ಟೆಲ್‍ಗೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ ಬಳಿಕ ಹಾಸ್ಟೆಲ್‍ನಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಪರಿಶೀಲಿಸಿದರು.

ಈ ವೇಳೆ ಜಿಲ್ಲಾ ಪಂಚಾಯತ್ ಸದಸ್ಯ ಬಿ.ಜೆ.ಸೋಮಸೇಖರ್ ಮಾತನಾಡಿ, ನಗರದಲ್ಲಿ ಅಮೃತ್ ಯೋಜನೆ ಕಾಮಗಾರಿ ನಡೆಯುವ ಸಂದರ್ಭ ಯುಜಿಡಿ ಪೈಪ್‍ಲೈನ್‍ಗೆ ಹಾನಿಯಾಗಿ ಹಾಸ್ಟೆಲ್‍ಗೆ ಬರುವ ಕುಡಿಯುವ ನೀರಿನ ಪೈಪ್‍ಲೈನ್ ಒಡೆದು ನೀರು ಕಲುಷಿತವಾಗಿತ್ತು. ಅದನ್ನು ಕುಡಿದು ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಈ ಸಂಬಂಧ ಹಾಸ್ಟೆಲ್‍ಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಹಾಸ್ಟೆಲ್‍ನ ಎಲ್ಲಾ ವಿದ್ಯಾರ್ಥಿನಿಯರು ನೀರು ಕುಡಿದಿದ್ದರೂ 15-20 ವಿದ್ಯಾರ್ಥಿನಿಯರು ಮಾತ್ರ ಅಸ್ವಸ್ಥರಾಗಿದ್ದಾರೆ. ಕೂಡಲೇ ಅಧಿಕಾರಿಗಳು ಬಂದು ಸ್ಪಂದಿಸಿದ್ದಾರೆ. ತಾತ್ಕಾಲಿಕವಾಗಿ ಚಿಕಿತ್ಸಾ ಕೊಠಡಿ ತೆರೆದು ಚಿಕಿತ್ಸೆ ಕೊಡಿಸಿದ್ದಾರೆ. ಈಗ ವಿದ್ಯಾರ್ಥಿನಿಯರು ಆರೋಗ್ಯವಾಗಿದ್ದು, ಒಂದೆರಡು ಮಕ್ಕಳಿಗೆ ಡ್ರಿಪ್ಸ್ ಹಾಕಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಎಲ್ಲ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ ಎಂದರು.

ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ ನಗರಸಭೆ ಹಾಸ್ಟೆಲ್‍ಗೆ ಪೂರೈಸಿರುವ ನೀರನ್ನು ಬದಲಿಸಿ ಟ್ಯಾಂಕರ್ ಮೂಲಕ ಶುದ್ಧ ನೀರನ್ನು ಪೂರೈಕೆ ಮಾಡಲು ಕ್ರಮವಹಿಸಿದೆ. ಫಿಲ್ಟರ್ ನೀರು ನಿಲ್ಲಿಸಿ ಶುದ್ಧ ಗಂಗಾ ನೀರನ್ನು ಹಾಸ್ಟೆಲ್‍ಗೆ ಪೂರೈಕೆ ಮಾಡಲಾಗುತ್ತಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಅಧಿಕಾರಿಗಳು ಸಮರ್ಪಕವಾಗಿ ಎಲ್ಲವನ್ನೂ ನಿಭಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಲು ಸ್ಥಾಯಿಸಮಿತಿ ಅಧ್ಯಕ್ಷ ಹಿರಿಗಯ್ಯ ಎಲ್ಲ ತಾಪಂ, ಜಿಪಂ ಸದಸ್ಯರು ಸೂಚಿಸಿದ್ದೇವೆ ಎಂದರು.

ತಾಪಂ ಅಧ್ಯಕ್ಷ ನೆಟ್ಟಕೆರೆಹಳ್ಳಿ ಜಯ್ಯಣ್ಣ ಮಾತನಾಡಿ, ಬಿಸಿಎಂ ಇಲಾಖೆ ಹಾಸ್ಟೆಲ್‍ನಲ್ಲಿ ಕಲುಷಿತ ನೀರಿನ ಕುರಿತು ಅಧಿಕಾರಿಗಳು ಗಮನಕ್ಕೆ ತಂದಾಗ ನಗರಸಭೆ ಆಯುಕ್ತರಿಗೆ ಹೇಳಿ ಪರಿಶೀಲಿಸುವಂತೆ ಸೂಚಿಸಲಾಗಿತ್ತು. ಈ ಸಂಬಂಧ ಅವರು ಭೇಟಿ ನೀಡಿದ್ದರು. ಪೈಪ್ ಲೈನ್ ಕೆಲಸ ಮಾಡುವ ಸಂದರ್ಭ ಈ ಅಚಾತುರ್ಯ ನಡೆದಿದೆ. ನೀರಿನ ಸಂಪ್‍ನಲ್ಲಿದ್ದ ನೀರನ್ನು ತೆರವು ಗೊಳಿಸಿ ಸ್ವಚ್ಛ ಮಾಡಲಾಗಿದೆ. ಪ್ರತ್ಯೇಕ ಶುದ್ಧ ನೀರನ್ನು ಪೂರೈಸಲಾಗುತ್ತಿದೆ. ಶುದ್ಧ ನೀರನ್ನು ಆಹಾರ ತಯಾರಿಕೆಗೆ ಉಪಯೋಗಿಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಕುಡಿಯಲು ಬಿಸಿನೀರು ಪೂರೈಕೆ ಮಾಡುವಂತೆ ಹೇಳಲಾಗಿದೆ. ಹಾಸ್ಟೆಲ್‍ನ ಎಲ್ಲ ಮಕ್ಕಳು ಆರೋಗ್ಯವಾಗಿದ್ದು, ಎಎನ್‍ಎಂ ಮತ್ತು ಆಶಾ ಕಾರ್ಯಕರ್ತರು ಸ್ಥಳದಲ್ಲಿಯೇ ಇದ್ದು ಕೆಲ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಎಂದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ, ಸದಸ್ಯ ರಮೇಶ್, ಬಿಜೆಪಿ ಮುಖಂಡ ಸತ್ಯಮೂರ್ತಿ, ಜಿಲ್ಲಾ ಬಿಸಿಎಂ ಅಧಿಕಾರಿ ಚೆನ್ನಪ್ಪ ಇಂಗಳಿ, ತಾಲೂಕು ವಿಸ್ತರಣಾಧಿಕಾರಿ ಬಡಿಗೇರ್ ಹಾಗೂ ಹಾಸ್ಟೆಲ್ ವಾರ್ಡನ್ ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News