"ಈ ರ‍್ಯಾಸ್ಕಲ್, ನೀಚ ಸಿಜೆಐ ಹುದ್ದೆಗೇರಿದ"

Update: 2020-01-23 12:57 GMT
ರಂಜನ್ ಗೊಗೊಯಿ, ಮಾರ್ಕಾಂಡೇಯ ಕಾಟ್ಜು

ಹೊಸದಿಲ್ಲಿ: ಮಾಜಿ ಸಿಜೆಐ ರಂಜನ್ ಗೊಗೊಯಿ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಮಹಿಳೆಯನ್ನು ಮತ್ತೆ ಹಿಂದಿನ ಹುದ್ದೆಯಲ್ಲಿಯೇ ಸುಪ್ರೀಂ ಕೋರ್ಟ್ ಮರುನೇಮಕ ಮಾಡಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮಾರ್ಕಾಂಡೇಯ ಕಾಟ್ಜು, ಫೇಸ್ ಬುಕ್ ಪೋಸ್ಟ್ ಒಂದನ್ನು ಮಾಡಿ ಅದರಲ್ಲಿ ಗೊಗೊಯಿ ಒಬ್ಬ 'ಫಟಿಂಗ ಹಾಗೂ ನೀಚ' (ರ‍್ಯಾಸ್ಕಲ್ ಎಂಡ್ ರೋಗ್) ಎಂದು ಆರೋಪಿಸಿದ್ದಾರೆ.

"ಕೊನೆಗೂ ಸಿಜೆಐ ಗೊಗೊಯಿ ಅವರಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಹಾಗೂ ತನ್ನ ಕುಟುಂಬದೊಂದಿಗೆ ಬಲಿಪಶುವಾಗಿದ್ದ ಮಹಿಳಾ ಉದ್ಯೋಗಿಯನ್ನು ಮರುನೇಮಕಗೊಳಿಸಲಾಗಿದೆ. ರಂಜನ್ ಗೊಗೊಯಿ ಅವರಲ್ಲಿಲ್ಲದ ವ್ಯಸನಗಳಿರಲಿಲ್ಲ. ಆದರೂ ಈ ಫಟಿಂಗ ಹಾಗೂ ನೀಚ ಸಿಜೆಐ ಹುದ್ದೆಗೇರಿದರು. ಇದು ನಮ್ಮ ನ್ಯಾಯಾಂಗದ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ಹರಿ ಓಂ,'' ಎಂದು ಪೋಸ್ಟ್ ಮಾಡಿದ್ದಾರೆ.

ದೂರುದಾರೆಯನ್ನು ರಕ್ಷಿಸುವ ಬದಲು ಗೊಗೊಯಿಯನ್ನು ರಕ್ಷಿಸಿದ ಸುಪ್ರೀಂ ಕೋರ್ಟಿನ 'ಸೋದರ ಹಾಗೂ ಸೋದರಿ ನ್ಯಾಯಾಧೀಶರ' ವಿರುದ್ಧವೂ ಕಾಟ್ಜು ಕಿಡಿಕಾರಿದ್ದಾರೆ.

ತಾವು ಹೊಂದಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ದುರ್ಬಳಕೆ ಮಾಡಿ ಗೊಗೊಯಿ ಮಹಿಳೆಯ ಕುಟುಂಬಕ್ಕೆ ಕಿರುಕುಳ ನೀಡಿದ್ದರು ಎಂದು ಕಾಟ್ಜು ಆರೋಪಿಸಿದ್ದಾರೆ.

ಬುಧವಾರ ಇನ್ನೊಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಕಾಟ್ಜು ಹೀಗೆ ಬರೆದಿದ್ದಾರೆ. "ಈ ರ‍್ಯಾಸ್ಕಲ್ ರಂಜನ್ ಗೊಗೊಯಿ ಎಷ್ಟು ನೀಚ ವ್ಯಕ್ತಿಯೆಂಬುದು ಆತ ತಾನು ಲೈಂಗಿಕ ಕಿರುಕುಳ ನೀಡಿದ ಮಹಿಳೆಯನ್ನು ಆಕೆ ದೂರು ನೀಡಿದ್ದಾಳೆಂದು ಸೇವೆಯಿಂದಲೇ ವಜಾಗೊಳಿಸಿದ್ದಲ್ಲದೆ ಆಕೆಯ ಇಡೀ ಕುಟುಂಬದ ಹಿಂದೆ ಬಿದ್ದು ತನ್ನ ಸಿಜೆಐ ಹುದ್ದೆಯನ್ನು ದುರ್ಬಳಕೆ ಮಾಡಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ನಂತರ ಅವರ ಸೋದರ/ಸೋದರಿ ನ್ಯಾಯಾಧೀಶರ ಬಗ್ಗೆ ಏನು ಹೇಳಬೇಕು ? ಅವರು ಗೊಗೊಯಿಗೆ ರಾಜೀನಾಮೆ ನೀಡಬೇಕೆಂದು ಹೇಳಬೇಕಿತ್ತು, ಆದರೆ ಅವರಲ್ಲಿ ಹಲವರು ಆ ಬಡ ಮಹಿಳೆ ಮತ್ತಾಕೆಯ ಸಂಬಂಧಿಕರನ್ನು ರಕ್ಷಿಸುವ ಬದಲು ಗೊಗೊಯಿಯನ್ನು ರಕ್ಷಿಸಿದರು. ನಾಚಿಕೆಗೇಡು.'' ಎಂದು ಪೋಸ್ಟ್ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News