'ಆದಿತ್ಯ ರಾವ್ ಮಾನಸಿಕ ಅಸ್ವಸ್ಥ' ಎಂಬ ಗೃಹ ಸಚಿವರ ಹೇಳಿಕೆಯನ್ನು ಸಮರ್ಥಿಸುತ್ತೇನೆ: ಸಚಿವ ಆರ್.ಅಶೋಕ್

Update: 2020-01-23 13:05 GMT

ಬೆಂಗಳೂರು, ಜ.23: ಮಂಗಳೂರು ಬಾಂಬ್ ಪ್ರಕರಣದ ಆರೋಪಿ ಆದಿತ್ಯ ರಾವ್ ಅಲ್ಪಸಂಖ್ಯಾತ ಸಮುದಾಯದವನಲ್ಲ. ಅಪರಾಧಕ್ಕೆ ಯಾವುದೇ ಧರ್ಮ ಇಲ್ಲ. ಅಪರಾಧಿಗಳು ಯಾವುದೇ ಧರ್ಮದವರಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಗುರುವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿಯೊಂದು ಪ್ರಕರಣದ ತನಿಖೆಯನ್ನು ಅಗತ್ಯಕ್ಕಿಂತ ಹೆಚ್ಚು ಜಾಗರೂಕತೆಯಿಂದ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಪಸಂಖ್ಯಾತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ, ತನಿಖೆ ನಡೆಸಿದರೆ ಅದನ್ನು ನಾಟಕ, ಅಣುಕು ಪ್ರದರ್ಶನ ಎನ್ನುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಿನಿಮಾಗಳಲ್ಲಿ ಪೊಲೀಸರನ್ನು ವ್ಯಂಗ್ಯವಾಗಿ ಬಿಂಬಿಸಲಾಗುತ್ತದೆ. ಈಗ ಸಿನಿಮಾ ನಿರ್ಮಾಪಕರಾದ ಎಚ್.ಡಿ.ಕುಮಾರಸ್ವಾಮಿ, ಪೊಲೀಸ್ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸಕ್ಕೆ ಅವರು ಕೈ ಹಾಕಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಪೊಲೀಸರು ಬೇಕಾಗಿದ್ದರು. ಆದರೆ, ಈಗ ಅಧಿಕಾರದಿಂದ ಕೆಳಗಿಳಿದ ತಕ್ಷಣ ಅವರಿಗೆ ಪೊಲೀಸರು ಖಳನಾಯಕರಂತೆ ಕಾಣುತ್ತಿದ್ದಾರೆ ಎಂದು ಅಶೋಕ್ ಹೇಳಿದರು.

ದೇಶಕ್ಕೆ ದ್ರೋಹ ಬಗೆಯುವವರು, ಪಾಕಿಸ್ತಾನದ ಪರವಾಗಿರುವವರನ್ನು ಗುಂಡಿಟ್ಟು ಕೊಲ್ಲಬೇಕು. ಕಾನೂನು ಎಲ್ಲರಿಗೂ ಒಂದೇ. ಕಳ್ಳ ಕಳ್ಳನೇ, ಆತ ಯಾವ ಧರ್ಮದವನೇ ಆಗಿರಲಿ. ಪಾಕಿಸ್ತಾನದ ಪ್ರೇರಣೆಯಿಂದ ಉಗ್ರವಾದ ಮಾಡುವ ಹಿಂದೂವೇ ಆಗಿದ್ದರೂ ಆತನನ್ನು ಅದೇ ರೀತಿ ನಾವು ಕಾಣುತ್ತೇವೆ ಎಂದು ಅವರು ಹೇಳಿದರು.

ನಮ್ಮ ದೇಶದ ಸೈನಿಕರನ್ನು ಕೊಲ್ಲುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನದ ಧ್ವಜ ಕಂಡರೆ ನಮಗೆ ಸಿಟ್ಟು ಬರುತ್ತದೆ. ಪಾಕಿಸ್ತಾನದ ಪರವಾಗಿ ಹಿಂದೂ, ಮುಸ್ಲಿಮ್, ಕ್ರೈಸ್ತ ಯಾರೇ ನಿಂತಿದ್ದರೂ ನಾವು ಅವರನ್ನು ಕ್ಷಮಿಸಲ್ಲ. ನಮ್ಮ ದೇಶವನ್ನು ನಾಶ ಮಾಡಲು ನಿರಂತರವಾಗಿ ಶ್ರಮಿಸುತ್ತಿರುವ ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರ ಎಂದು ಅಶೋಕ್ ತಿಳಿಸಿದರು.

ವಿಮಾನ ನಿಲ್ದಾಣಕ್ಕೆ ಪದೇ ಪದೇ ಬೆದರಿಕೆ ಕರೆ ಹಾಕುವ ಆದಿತ್ಯರಾವ್‌ಗೆ ಖಾಯಂ ಆಗಿ ಶಿಕ್ಷೆ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆತ ಮಾನಸಿಕ ಅಸ್ವಸ್ಥ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ. ಆತನ ಮಾನಸಿಕ ಸ್ಥಿತಿ ಬಗ್ಗೆ ವೈದ್ಯರು ದೃಢೀಕರಿಸಬೇಕು ಎಂದು ಅವರು ಹೇಳಿದರು.

ಆರೋಪಿಯ ಹೇಳಿಕೆಗಳನ್ನು ಗಮನಿಸಿದರೆ ಆತ ಮಾನಸಿಕ ಅಸ್ವಸ್ಥನೇ ಇರಬೇಕು ಎಂದು ಅನಿಸುತ್ತಿದೆ. ಆತನನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಗೃಹ ಸಚಿವರಿಗೆ ಆತನ ಬಗ್ಗೆ ಮಾಹಿತಿ ಇದೆ, ಅದಕ್ಕಾಗಿಯೇ ಅವರು ಈ ರೀತಿ ಹೇಳಿಕೆ ನೀಡಿರಬಹುದು ಎಂದು ಅಶೋಕ್ ತಿಳಿಸಿದರು.

ನೇತಾಜಿ ಅಪ್ರತಿಮ ಸೇನಾನಿ

ನೇಜಾತಿ ಸುಭಾಷ್ ಚಂದ್ರ ಬೋಸ್ ದೇಶದ ಸ್ವಾತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಅವರ ಧೈರ್ಯ, ಹೋರಾಟದ ಬದುಕು ನಮ್ಮೆಲ್ಲರಿಗೂ ಪ್ರೇರಣೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News