ಹಿಂದು ಮಹಾಸಭಾದ ವಿಭಜನಾತ್ಮಕ ರಾಜಕೀಯವನ್ನು ನೇತಾಜಿ ವಿರೋಧಿಸಿದ್ದರು: ಮಮತಾ ಬ್ಯಾನರ್ಜಿ

Update: 2020-01-23 13:32 GMT

ಕೋಲ್ಕತಾ, ಜ.23: ನೇತಾಜಿ ಸುಭಾಶ್ಚಂದ್ರ ಬೋಸ್ ಹಿಂದು ಮಹಾಸಭಾದ ವಿಭಜನಾತ್ಮಕ ರಾಜಕೀಯವನ್ನು ವಿರೋಧಿಸಿದ್ದರು ಹಾಗೂ ಜಾತ್ಯಾತೀತ ಮತ್ತು ಸಂಯುಕ್ತ ಭಾರತಕ್ಕಾಗಿ ಹೋರಾಟ ಮಾಡಿದ್ದರು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 1940ರ ಮೇ 12ರಂದು ಬೋಸ್ ಮಾಡಿದ್ದ ಭಾಷಣದಲ್ಲಿ ಸಂಯುಕ್ತ ಭಾರತದ ಅಗತ್ಯವನ್ನು ಒತ್ತಿಹೇಳಿದ್ದರು ಮತ್ತು ಹಿಂದೂ ಮಹಾಸಭಾದ ವಿಭಜನಾತ್ಮಕ ರಾಜಕೀಯವನ್ನು ಕಟುವಾಗಿ ವಿರೋಧಿಸಿದ್ದರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನೇತಾಜಿ ಸುಭಾಶ್ಚಂದ್ರ ಬೋಸ್‌ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲಾ ಧರ್ಮವನ್ನೂ ಗೌರವಿಸಬೇಕೆಂಬ ಸಂದೇಶವನ್ನು ನೇತಾಜಿಯವರು ತಮ್ಮ ಹೋರಾಟದ ಮೂಲಕ ನೀಡಿದ್ದು ಅವರ ಜನ್ಮದಿನದಂದು ರಾಷ್ಟ್ರೀಯ ರಜೆ ಘೋಷಿಸಬೇಕು . ಸಂಘಟಿತ, ಸಂಯುಕ್ತ ರಾಷ್ಟ್ರಕ್ಕಾಗಿ ಹೋರಾಟ ನಡೆಸುವ ಮೂಲಕ ನಾವು ನೇತಾಜಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ಬ್ಯಾನರ್ಜಿ ಹೇಳಿದರು.

ಜಾತ್ಯಾತೀತ ಭಾರತಕ್ಕಾಗಿ ನೇತಾಜಿ ಹೋರಾಟ ನಡೆಸಿದ್ದರು. ಆದರೆ ಈಗ ಜಾತ್ಯಾತೀತ ನಿಲುವಿನ ಪ್ರತಿಪಾದಕರನ್ನು ದೇಶದಿಂದ ಹೊರಗಟ್ಟಲು ಪ್ರಯತ್ನಿಸಲಾಗುತ್ತಿದೆ. ನೇತಾಜಿಯವರು ನಾಪತ್ತೆಯಾದ ಪ್ರಕರಣದ ನಿಗೂಢತೆ ಬಯಲಿಗೆಳೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಗಂಭೀರ ಪ್ರಯತ್ನ ನಡೆಸದೆ ಕೆಲವೊಂದು ಫೈಲುಗಳ ಮಾಹಿತಿ ಬಹಿರಂಗಗೊಳಿಸಿ ಕೈತೊಳೆದುಕೊಂಡಿದೆ. ನೇತಾಜಿಯವರಿಗೆ ಏನಾಯಿತು ಎಂಬುದು 70 ವರ್ಷದ ಬಳಿಕವೂ ನಿಗೂಢವಾಗಿಯೇ ಉಳಿದಿರುವುದು ನಾಚಿಕೆಗೇಡು ಎಂದು ಮಮತಾ ಬ್ಯಾನರ್ಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News