ಜನವರಿ 23ರಿಂದ ರಾಷ್ಟ್ರೀಯ ನಿರುದ್ಯೋಗ ನೋಂದಣಿ: ಯುವಕಾಂಗ್ರೆಸ್ ನಿರ್ಧಾರ

Update: 2020-01-23 13:38 GMT
Photo: twitter.com/_IYCIndia

ಹೊಸದಿಲ್ಲಿ, ಜ.23: ರಾಷ್ಟ್ರೀಯ ಜನಸಂಖ್ಯೆ ನೋಂದಣಿ(ಎನ್‌ಪಿಆರ್) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯ ಬಗ್ಗೆ ವಿವರಿಸಲು ಬಿಜೆಪಿ ರಾಷ್ಟ್ರದಾದ್ಯಂತ ಹಮ್ಮಿಕೊಂಡಿರುವ ಅಭಿಯಾನಕ್ಕೆ ಪ್ರತಿಯಾಗಿ ರಾಷ್ಟ್ರೀಯ ನಿರುದ್ಯೋಗ ನೋಂದಣಿ ಅಭಿಯಾನ ಆರಂಭಿಸುವುದಾಗಿ ಯುವಕಾಂಗ್ರೆಸ್ ಘೋಷಿಸಿದೆ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿರುವುದನ್ನು ಎತ್ತಿತೋರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರುದ್ಯೋಗ ನೋಂದಣಿ ಸಿದ್ಧಗೊಳಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಲು ಈ ಅಭಿಯಾನ ನಡೆಯಲಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಹೇಳಿದ್ದಾರೆ.

ಭಾರತದ ಯುವಜನರ ಸಮಸ್ಯೆಗೆ ಧ್ವನಿಯಾಗುವ ಉದ್ದೇಶದಿಂದ ರಾಷ್ಟ್ರದಾದ್ಯಂತ ನಡೆಯುವ ಈ ಅಭಿಯಾನಕ್ಕೆ ಜನವರಿ 23ರಂದು ಚಾಲನೆ ದೊರಕಲಿದೆ. ಮಿಸ್ಡ್ ಕಾಲ್ ನೀಡುವ ಮೂಲಕ ಅಥವಾ ಟೋಲ್‌ಪ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಪ್ರತಿಯೊಬ್ಬ ನಿರುದ್ಯೋಗಿ ಭಾರತೀಯರೂ ರಾಷ್ಟ್ರೀಯ ನಿರುದ್ಯೋಗ ನೋಂದಣಿಗೆ ಜತೆ ನೀಡಬಹುದು ಎಂದವರು ಹೇಳಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜನವರಿ 28ರಂದು ಈ ಅಭಿಯಾನದ ಜೊತೆ ಕೈಜೋಡಿಸಲಿದ್ದಾರೆ. ಅಭಿಯಾನದ ಅಂಗವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತೀ ಮನೆಗೆ ತೆರಳಿ ನಿರುದ್ಯೋಗದ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಕೃಷ್ಣ ಅರಾವಲು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News