ಕಂದಾಯ ಇಲಾಖೆ ಅಧಿಕಾರಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಪಾಳಮೋಕ್ಷ ?: ವಿಡಿಯೋ ವೈರಲ್

Update: 2020-01-23 14:42 GMT

ಚಿಕ್ಕಮಗಳೂರು, ಜ.23: ಅತಿವೃಷ್ಟಿ ಪರಿಹಾರ ಧನ ವಿತರಣೆಯಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆನ್ನಲಾದ ಕಂದಾಯ ಇಲಾಖೆಯ ಸಿಬ್ಬಂದಿಯೊಬ್ಬರಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕಳಸ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಭೂಕುಸಿತ, ನೆರೆ ಸಂಭವಿಸಿತ್ತು. ಈ ಸಂಬಂಧ ಸಾರ್ವಜನಿಕರು ಸಂತ್ರಸ್ತರಿಗೆ ನೆರವು ಒದಗಿಸುವ ಸಲುವಾಗಿ ಹಣ ಸಂಗ್ರಹಿಸಿ, ಅದನ್ನು ಕಳಸ ನಾಡಕಚೇರಿಯ ಆರ್‌ಐ ಅಜ್ಜೇಗೌಡ ಎಂಬವರ ಮೂಲಕ ಜಿಲ್ಲಾಡಳಿತಕ್ಕೆ ನೀಡಿದ್ದರು. ಆದರೆ ಈ ಹಣವನ್ನು ಅಜ್ಜೇಗೌಡ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸದೇ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರೆಂದು ತಿಳಿದು ಬಂದಿದೆ. 

ಈ ದೂರಿನ ಮೇರೆಗೆ ಬುಧವಾರ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಮೂಡಿಗೆರೆ ತಹಶೀಲ್ದಾರ್, ತಾಪಂ ಇಒ ಹಾಗೂ ಕಂದಾಯಾಧಿಕಾರಿಗಳೊಂದಿಗೆ ಕಳಸ ಸಮೀಪದ ಹಿರೇಬೈಲು ಗ್ರಾಮಕ್ಕೆ ತೆರಳಿದ್ದು, ಬಗಾದಿ ಗೌತಮ್ ಅವರು ಕಳಸ ಆರ್‌ಐ ಅಜ್ಜೇಗೌಡ ಹಾಗೂ ಕಂದಾಯಾಧಿಕಾರಿಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿ ರಸ್ತೆಯಲ್ಲೇ ನಿಂತು ಈ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಆರ್‌ಐ ಅಜ್ಜೇಗೌಡ ಅವರು ಪರಿಹಾರಧನ ವಿತರಣೆ ಸಂಬಂಧ ಸಮರ್ಪಕವಾದ ದಾಖಲೆ, ಮಾಹಿತಿ ನೀಡದೇ ಹಾರಿಕೆ ಉತ್ತರ ನೀಡಿದ್ದಾರೆಂದು ತಿಳಿದು ಬಂದಿದ್ದು, ಇದರಿಂದ ಆಕ್ರೋಶಿತರಾದ ಜಿಲ್ಲಾಧಿಕಾರಿ ಅವರು ಆರ್‌ಐ ಅಜ್ಜೇಗೌಡ ಅವರ ಕೆನ್ನೆಗೆ ಬಾರಿಸಿದ್ದಾರೆಂದು ತಿಳಿದು ಬಂದಿದೆ. 

ಘಟನೆಯ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳ ನಡೆಯುತ್ತಿದೆ. ಕೆಲವರು ಜಿಲ್ಲಾಧಿಕಾರಿಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿದರೆ ಇನ್ನೂ ಕೆಲವರು ಆರ್‌ಐ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವುದನ್ನು ಬಿಟ್ಟು ಸಾರ್ವಜನಿಕರ ಎದುರು ಕಪಾಳ ಮೋಕ್ಷ ಮಾಡಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಹಲ್ಲೆ ಮಾಡಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದು, ತಾನು ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದು ಹೇಳಿದ್ದಾರೆ.

ಪ್ರಕೃತಿ ವಿಕೋಪದಿಂದ ಹಾನಿಗೊಂಡ ಮನೆಗಳ ಪುನರ್ವಸತಿ ಪ್ರಗತಿಯನ್ನು ಪರಿಶೀಲಿಸಲು ಮೂಡಿಗೆರೆ ತಾಲೂಕಿ ಹಿರೇಬೈಲು ಗ್ರಾಮಕ್ಕೆ ಗುರುವಾರ ತೆರಳಿದ್ದು, ಪ್ರಕೃತಿ ವಿಕೋಪ ಪರಿಸ್ಥಿತಿ ನಿಭಾಯಿಸುವ ವಿಚಾರದಲ್ಲಿ ಪರಿಹಾರ ಹಣ ಪಾವತಿಸುವಲ್ಲಿ ವಿಳಂಬ ಮಾಡಿರುವ ವಿಚಾರವು ತನ್ನ ಗಮನಕ್ಕೆ ಬಂದಿತ್ತು. ಈ ಬಗ್ಗೆ ಸಂಬಂಧಿಸಿದ ಕಂದಾಯ ನಿರೀಕ್ಷಕರು ಹಾಗೂ ಪಿಡಿಒ ಅವರಲ್ಲಿ ಮಾಹಿತಿ ಕೇಳಲಾಗಿದ್ದು, ಸಂಬಂಧಿಸಿದ ದಾಖಲೆಯನ್ನು ಪರಿಶೀಲಿಸಲಾಗಿದೆ. ಆದರೆ ಈ ವೇಳೆ ಅಧಿಕಾರಿಗಳಿಗೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ. ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಕಳಸದ ಕಂದಾಯಾಧಿಕಾರಿಯೂ ಸ್ಪಷ್ಟನೆ ನೀಡಿದ್ದು, ಹಲ್ಲೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ತಾಲೂಕಿನ ತಹಶೀಲ್ದಾರ್, ತಾಪಂ ಇಒ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಪಂ ಪಿಡಿಒ ಕೂಡ ಸ್ಥಳದಲ್ಲಿದ್ದು, ಹಲ್ಲೆ ವಿಚಾರವನ್ನು ಅವರು ಅಲ್ಲಗಳೆದಿದ್ದಾರೆ. ಹಲ್ಲೆ ಘಟನೆ ನಡೆದಿರುವುದಕ್ಕೆ ಯಾವುದೇ ರೀತಿಯ ಪೂರಕ ಸಾಕ್ಷ್ಯಧಾರಗಳಿಲ್ಲ ಮತ್ತು ಮೇಲ್ನೋಟಕ್ಕೆ ಘಟನೆಯನ್ನು ದೃಢಪಡಿಸುವಂತಹ ಆಧಾರಗಳು ಇರುವುದಿಲ್ಲ. ದೃಶ್ಯ ಮಾದ್ಯಮಗಳು ಪ್ರಸಾರ ಮಾಡಿದ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಪತ್ರಿಕಾ ಪ್ರಕಟನೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News