ಪ್ರಚಾರಕ್ಕಷ್ಟೇ ರೈತ ಪರ, ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆ ವಿನಾಯಿತಿ: ಕೋಡಿಹಳ್ಳಿ ಚಂದ್ರಶೇಖರ್

Update: 2020-01-23 18:36 GMT

ಬೆಂಗಳೂರು, ಜ.23: ಕಾರ್ಪೊರೇಟ್ ಕಂಪನಿಗಳಿಗೆ ಲಕ್ಷಾಂತರ ರೂ. ತೆರಿಗೆ ವಿನಾಯಿತಿ ನೀಡುತ್ತಿರುವ ಮಾಹಿತಿಯನ್ನು ಗೌಪ್ಯವಾಗಿರಿಸಿ, ರೈತರಿಗೆ ತಲಾ ಎರಡು ಸಾವಿರ ಅಕೌಂಟ್‌ಗೆ ಜಮೆ ಮಾಡುವುದನ್ನು ಸಮಾವೇಶದ ಮೂಲಕ ಘೋಷಣೆ ಮಾಡಿ ರೈತಪರ ಸರಕಾರ ಎಂದು ಪ್ರಚಾರ ಪಡೆದುಕೊಳ್ಳುತ್ತಿರುವ ಕೇಂದ್ರ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕೇಂದ್ರದ ವಿರುದ್ಧ ಕಿಡಿಕಾರಿದರು. 

ಗುರುವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಬಂದು ರೈತ ಸಮಾವೇಶ ಮಾಡಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತ ರೈತರಿಗೆ ಪರಿಹಾರ ಘೋಷಿಸುವ ನಿರೀಕ್ಷೆಯಿತ್ತು. ಆದರೆ, ಈ ಬಗ್ಗೆ ತುಟಿ ಬಿಚ್ಚದ ಮೋದಿ, ಕೇವಲ ರಾಜಕೀಯ ಕಾರಣಕ್ಕೆ ತಮ್ಮ ವೇದಿಕೆಯನ್ನು ಬಳಸಿಕೊಂಡರು ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 44 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಮುಂದುವರೆದಿದ್ದು, 22 ಜಿಲ್ಲೆಗಳು ನೆರೆಗೆ ತುತ್ತಾಗಿವೆ. ಹೀಗಿರುವ ಪರಿಸ್ಥಿತಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಫಲವಾಗುತ್ತಿದೆ. ನೆರೆಯಿಂದ ಹಾನಿಗೊಳಗಾದ ಪ್ರದೇಶಗಳ ಮರು ನಿರ್ಮಾಣಕ್ಕೆ ಮುಂದಾಗದೇ ಸರಕಾರ ಕಾಲಹರಣ ಮಾಡುತ್ತಿದೆ. ರಾಜ್ಯದ ನೆರೆಯಿಂದಾಗಿ ಒಟ್ಟು 35 ಸಾವಿರ ಕೋಟಿ ರೂ. ಹಾನಿ ಉಂಟಾಗಿದ್ದು, ಈವರೆಗೆ ಕೇಂದ್ರ ಸರಕಾರದಿಂದ ಕೇವಲ 1,030 ಕೋಟಿ ರೂ. ಪರಿಹಾರ ನೀಡಲಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಮುಖಂಡರು ಮೌನ ವಹಿಸಿರುವುದು ಖಂಡನೀಯ ಎಂದರು.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸಮ್ಮಿಶ್ರ ಸರಕಾರ ರಚನೆಗೂ ಮುನ್ನ ಮೂರು ದಿನಗಳ ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಒಂದು ಲಕ್ಷ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು, ಆದರೆ, ಈ ಬಗ್ಗೆ ಈವರೆಗೆ ಚಕಾರ ಎತ್ತುತ್ತಿಲ್ಲ. ರೈತರ ಸಾಲಮನ್ನಾ ಬಗ್ಗೆ ಸರಕಾರದ ನಿಲುವನ್ನು ಸ್ಪಷ್ಟಗೊಳಿಸಬೇಕು. ಸಾಲಮನ್ನಾ ಮಾಡುವುದಾದರೆ ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆಯಂತೆ ಸಾಲ ಮಾಡಲಾಗುತ್ತಾ? ಅಥವಾ ಈ ಹಿಂದೆ ಯಡಿಯೂರಪ್ಪ ಘೋಷಣೆ ಮಾಡಿದಂತೆ ತಲಾ ಒಂದು ಲಕ್ಷ ಸಾಲಮನ್ನಾ ಮಾಡಲಾಗುತ್ತದೆಯಾ? ಎಂಬುದನ್ನು ಸ್ಪಷ್ಟಪಡಿಸಬೇಕು. ಸಾಲಮನ್ನಾ ಮಾಡುವುದಿಲ್ಲ ಎಂಬುದಾದರೆ ಸರಕಾರ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ನೆರೆ ಹಾಗೂ ಬರ ರೈತರ ಜೀವನ ಅತಂತ್ರಕ್ಕೆ ಸಿಲುಕಿಸಿವೆ. ಹೀಗಿದ್ದರೂ, ಸಾಲ ವಸೂಲಿ ಕಾರ್ಯ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ, ರೈತರಿಂದ ಅಪಸ್ವರ ಕೇಳಿಬಂದ ಕೂಡಲೆ ಸುತ್ತೋಲೆಯನ್ನು ಹಿಂಪಡೆಯುವ ಸರಕಾರದ ನಡೆಯನ್ನು ಸ್ಪಷ್ಟಪಡಿಸಬೇಕು. ರೈತರ ಕೆಂಗಣ್ಣಿಗೆ ಗುರಿಯಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News