ಬಿಜೆಪಿ ಸರ್ಕಾರ ಜಾತಿ, ಅಸಮಾನತೆಯ ತಿಪ್ಪೆಗುಂಡಿ: ಜ್ಞಾನಪ್ರಕಾಶ ಸ್ವಾಮೀಜಿ

Update: 2020-01-23 19:03 GMT

ಹನೂರು: ಬ್ರಿಟಿಷರ, ಪೇಶ್ವೆಗಳ ದೌರ್ಜನ್ಯಗಳನ್ನು ಸಹಿಸಲಾರದೆ 1818ರಲ್ಲಿ ಭೀಮ ಕೋರೆಗಾಂವ್ ಜಾಗದಲ್ಲಿ 500 ಜನ ಮಾರ್ಸ್ ಸೈನಿಕರು 30 ಸಾವಿರ ಪೇಶ್ವಗಳ ತಲೆ ಕಡಿದು ವಿಜಯೋತ್ಸವ ಆಚರಿಸುವಾಗ ಜೈಭೀಮ್ ಘೋಷಣೆ ಪ್ರಾರಂಭವಾದುದ್ದು ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.

ಗುರುವಾರ ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣ ಮೈದಾನದಲ್ಲಿ ಸಿಎಎ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಕಾನೂನು ನಮ್ಮನ್ನು ಆಳುತ್ತದೆ. ನರೇಂದ್ರ ಮೋದಿಯಾಗಲಿ, ಯಡಿಯೂರಪ್ಪರವರಾಗಲಿ ನಮ್ಮನ್ನು ಆಳುವುದಿಲ್ಲ. ಪೊಲೀಸರು ಯಾವುದೇ ಪಕ್ಷದ ಗುಲಾಮರಲ್ಲ, ಇದು ಪೊಲೀಸ್ ಇಲಾಖೆಗೆ ಗೊತ್ತಾಗಬೇಕು. ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು ಎಂದರು.

ಭಾರತ ಬಂದೂಕುಗಳ ಭಾರತವಾಗಬಾರದು, ಪೆನ್‍ಗಳ ಭಾರತವಾಗಬೇಕು. ಜಾತಿ, ಧರ್ಮ ಹೆಸರಿನಲ್ಲಿ ರಾಷ್ಟ್ರ ಕಟ್ಟುತ್ತೇವೆ ಎನ್ನುವುದು ದೇಶದ್ರೋಹಿಗಳ ಹುನ್ನಾರ. ಬಿಜೆಪಿ ಸರ್ಕಾರ ಜಾತಿ, ಅಸಮಾನತೆಯ ತಿಪ್ಪೆಗುಂಡಿಯಾಗಿದೆ ಎಂಬುದನ್ನು ಅರಿತುಕೊಳ್ಳಬೇಕು. ದಲಿತರು, ಮುಸ್ಲಿಮರು, ಓಬಿಸಿಗಳು ಓಟಿನ ಮಹತ್ವ ತಿಳಿದುಕೊಂಡರೆ ಮೋದಿ, ಶಾ ಬಿಕಾರಿಗಳಾಗಬೇಕಾಗುತ್ತದೆ ಎಂದ ಅವರು, ಪಾರ್ಲಿಮೆಂಟ್‍ಗೆ ಮತ್ತು ಸಂವಿಧಾನಕ್ಕೆ ನಮಸ್ಕಾರ ಮಾಡಿ, ಜನರಿಂದ ಮನ್ನಣೆ ಪಡೆದ ಮೋದಿ, ದೆಹಲಿಯ ಜಂತರ್ ಮಂತರ್ ನಲ್ಲಿ ಹಾಡಹಗಲೆ ಸಂವಿಧಾನ ಸುಟ್ಟವರಿಗೆ ಏನು ಶಿಕ್ಷೆ ನೀಡಿದ್ದಾರೆ ? ಎಂದು ಪ್ರಶ್ನಿಸಿದರು.

ದೇಶ ರಕ್ಷಣೆಗಾಗಿ 61 ಸಾವಿರ ಮುಸ್ಲಿಮರು, 10 ಸಾವಿರ ದಲಿತರು ತಮ್ಮ ರಕ್ತ ಸುರಿಸಿ ಪ್ರಾಣ ಬಿಟ್ಟಿದ್ಧಾರೆ. ಇಲ್ಲಿಯವರೆಗೆ ಬ್ರಾಹ್ಮಣರ ಮನೆಯ ಒಂದು ನಾಯಿಯು ಸಹ ಸಾಯಲಿಲ್ಲ. ದೇಶ ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ರೈತರು ಪ್ರವಾಹದಿಂದ ಭೂಮಿ, ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನಿರುದ್ಯೋಗ ತಾಂಡವಾಡುತ್ತಿದೆ. ಬೆಲೆಗಳು ಗಗನಕ್ಕೇರಿ ಸಾರ್ವಜನಿಕರು ಆತಂಕದಲ್ಲಿ ಇದ್ಧಾರೆ. ಇದನ್ನೆಲ್ಲಾ ಸರಿಪಡಿಸಬೇಕಾದ ಪ್ರಧಾನಿ ತಮ್ಮ ಸ್ವಾರ್ಥಕ್ಕಾಗಿ 41 ಲಕ್ಷ ಹಿಂದೂಗಳು, 4 ಲಕ್ಷ ಮುಸ್ಲಿಮರನ್ನು ಹೊರದೇಶದಿಂದ ಕರೆತಂದು ಪೌರತ್ವ ಕೊಡುತ್ತಾರೆ. ಇವರೆಲ್ಲರನ್ನು ಯಾವ ಜಾತಿಗೆ ಸೇರಿಸುತ್ತಾರೆ ಎಂದು ಲೇವಡಿ ಮಾಡಿದರು.

ಸಿಎಎ, ಎನ್‍ಸಿಆರ್ ಜಾರಿ ಮಾಡುವುದು ಯಾರ ಸ್ವಾರ್ಥಕ್ಕಾಗಿ, ಇದನ್ನು ಬಿಟ್ಟು ಸಂವಿಧಾನದ ಆಶಯದಂತೆ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧರೆಲ್ಲರನ್ನು ಭಾರತೀಯರು ಎಂಬ ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸಿ ಎಂದು ಸಲಹೆ ನೀಡಿದರು.

ಬೆಂಗಳೂರಿನ ಆರ್ಯುವೇದಿಕ್ ವೈದ್ಯೆ ಕುಮಾರಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಡಾ. ನಗ್ಮಾ ಮಾತನಾಡಿದರು.

ಇದೇ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ರವೀಂದ್ರ, ಸಿದ್ದರಾಜು, ಬಂಡಳ್ಳಿ ನಿಂಗರಾಜು, ಮುಳ್ಳೂರು ಶಿವಮಲ್ಲು, ಡಿಎಸ್‍ಎಸ್ ಸಿದ್ದರಾಜು, ಹನೂರು ಮುಸ್ಲಿಂ ಸಂಘದ ಅಧ್ಯಕ್ಷ ವಜೀರ್ ಪಾಷ, ಕಾರ್ಯದರ್ಶಿ ಶಮಿಉಲ್ಲಾ, ತಾಪಂ ಸದಸ್ಯ ಜವಾದ್‍ ಅಹಮದ್, ಕಣ್ಣೂರು ಬಿಜೆಪಿ ಮುಖಂಡ ಅಫ್ರಜ್‍ ಖಾನ್, ಸೈಯದ್ ಜತ್ತೀಉಲ್ಲಾ, ಎಸ್‍ಡಿಪಿಐ ನಾಯಕ ನೂರುಲ್ಲಾ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಸಂಘಟನೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News