ವಾಷಿಂಗ್ಟನ್: ಗರ್ಭಿಣಿಯರಿಗೆ ವೀಸಾ ನೀಡದಂತೆ ಟ್ರಂಪ್ ನಿರ್ಬಂಧ

Update: 2020-01-24 06:23 GMT

ವಾಷಿಂಗ್ಟನ್: ವಲಸಿಗರ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಸವ ಪ್ರವಾಸೋದ್ಯಮ ಎನ್ನಲಾದ ದಂಧೆಯಡಿ ದೇಶಕ್ಕೆ ಪ್ರವೇಶ ಬಯಸುವ ಗರ್ಭಿಣಿಯರಿಗೆ ವೀಸಾ ನೀಡದಂತೆ ನಿರ್ಬಂಧ ವಿಧಿಸಿದ್ದಾರೆ.

"ಅಮೆರಿಕದ ನೆಲದಲ್ಲಿ ಹುಟ್ಟುವ ಮಕ್ಕಳು ಅಮೆರಿಕದ ಪೌರತ್ವವನ್ನು ಸಹಜವಾಗಿಯೇ ಪಡೆಯುವಂತಾಗಲು ವಿದೇಶಿಯರು ಇಂಥ ವೀಸಾವನ್ನು ಬಳಸಿಕೊಳ್ಳುತ್ತಿದ್ದಾರೆ" ಎಂದು ಶ್ವೇತಭವನ ಅಭಿಪ್ರಾಯಪಟ್ಟಿದೆ.

ಅಮೆರಿಕ ಪ್ರಜೆಗಳ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು ಎಂದು ಶ್ವೇತಭವನದ ವಕ್ತಾರ ಸ್ಟೀಫನ್ ಗ್ರಿಶಮ್ ಹೇಳಿಕೆ ನೀಡಿದ್ದಾರೆ. ಪ್ರಸವ ಪ್ರವಾಸೋದ್ಯಮಕ್ಕಾಗಿ ದೇಶಕ್ಕೆ ಪ್ರವೇಶ ಬಯಸುವ ಗರ್ಭಿಣಿಯರಿಗೆ ತಾತ್ಕಾಲಿಕ ಬಿ-1 ಮತ್ತು ಬಿ-2 ಪ್ರವಾಸಿ ವೀಸಾಗಳನ್ನು ಇನ್ನು ನೀಡಲಾಗುವುದಿಲ್ಲ ಎಂದು ಶ್ವೇತಭವನದ ಪ್ರಕಟಣೆ ಹೇಳಿದೆ.

ಇದನ್ನು ವಲಸೆ ನೀತಿಯ ಗಂಭೀರ ಲೋಪ ಎಂದು ಬಣ್ಣಿಸಿರುವ ಶ್ವೇತಭವನ, ಇದು ಪ್ರಸವ ಪ್ರವಾಸೋದ್ಯಮದ ಮೇಲಿನ ದೊಡ್ಡ ಪ್ರಹಾರ. ಸಾರ್ವಜನಿಕ ಸುರಕ್ಷೆ ಮತ್ತು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಮತ್ತು ನಮ್ಮ ವಲಸೆ ವ್ಯವಸ್ಥೆಯ ಸಮಗ್ರತೆ ಕಾಪಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಸವ ಪ್ರವಾಸೋದ್ಯಮವು ಅಮೂಲ್ಯ ಆಸ್ಪತ್ರೆ ಸಂಪನ್ಮೂಲಗಳಿಗೆ ಹೊರೆಯಾಗುತ್ತಿದೆ ಹಾಗೂ ಅಪರಾಧ ಕೃತ್ಯಗಳು ಬೆಳೆಯಲು ಕಾರಣವಾಗುತ್ತಿದೆ. ಈ ಘೋರ ಲೋಪವನ್ನು ಮುಚ್ಚುವ ಸಲುವಾಗಿ ಹಾಗೂ ಅಂತಿಮವಾಗಿ ರಾಷ್ಟ್ರೀಯ ಭದ್ರತಾ ಅಪಾಯ ಸಾಧ್ಯತೆ ನಿವಾರಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ವೇತಭವನ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News