ಕಾಂಚಿಪುರಂನಲ್ಲಿ ಪೆರಿಯಾರ್ ಪ್ರತಿಮೆಗೆ ದುಶ್ಕರ್ಮಿಗಳಿಂದ ಹಾನಿ

Update: 2020-01-24 15:59 GMT

ಚೆನ್ನೈ.ಜ.24: ತಮಿಳುನಾಡಿನ ವಿಚಾರವಾದಿ ನಾಯಕ ಇ.ವಿ. ರಾಮಸ್ವಾಮಿ ‘ಪೆರಿಯಾರ್’ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿರುವ ಘಟನೆ ಕಾಂಚಿಪುರಂ ಜಿಲ್ಲೆಯಲ್ಲಿ ಶುಕ್ರವಾರ ವರದಿಯಾಗಿದೆ. ಪೆರಿಯಾರ್‌ಪ್ರತಿಮೆಗೆ ಹಾನಿಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.

 ಸಲ್ವಕ್ಕಮ್ ಪಟ್ಟಣದಲ್ಲಿನ ಪೆರಿಯಾರ್ ಪ್ರತಿಮೆಗೆ ಹಾನಿಯಾಗಿರುವುದು ಶುಕ್ರವಾರ ಬೆಳಗ್ಗೆ ಪತ್ತೆಯಾದ ಕೂಡಲೇ, ಪರಿಸರದಲ್ಲಿ ಉದ್ವಿಗ್ನ ವಾತಾವರಣ ತಲೆದೋರಿತೆಂದು ಪೊಲೀಸರು ತಿಳಿಸಿದ್ದಾರೆ. ಪೆರಿಯಾರ್ ಮತ್ತಿತರ ನಾಯಕರ ಪ್ರತಿಮೆಗಳಿಗೆ ಹಾನಿಯೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಮಿಳುನಾಡು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

   ದ್ರಾವಿಡ ಚಳವಳಿಯ ಮುಂಚೂಣಿಯ ನಾಯಕರಾಗಿದ್ದ ರಾಮಸ್ವಾಮಿ ಪೆರಿಯಾರ್ ಅವರು 1971ರಲ್ಲಿ ನಡೆಸಿದ ರ್ಯಾಲಿಯಲ್ಲಿ ಶ್ರೀರಾಮ ಹಾಗೂ ಸೀತಾದೇವಿಯ ಚಿತ್ರಗಳಿಗೆ ಚಪ್ಪಲಿಮಾಲೆಯನ್ನು ಹಾಕಲಾಗಿತ್ತೆಂದು ಖ್ಯಾತ ಸಿನೆಮಾನಟ ರಜನಿಕಾಂತ್ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ, ತಮಿಳುನಾಡಿನಲ್ಲಿ ಪೆರಿಯಾರ್ ಕುರಿತ ಚರ್ಚೆಯು ಮರುಜೀವ ಪಡೆದುಕೊಂಡಿದೆ.

ರಜನಿಯ ವಿವಾದಾತ್ಮಕ ಹೇಳಿಕೆಯನ್ನು ಆಡಳಿತಾರೂಢ ಎಡಿಎಂಕೆ ಹಾಗೂ ಡಿಎಂಕೆ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿದ್ದವು ಹಾಗೂ ರಜನಿಕಾಂತ್ ಕ್ಷಮೆಯಾಚನೆಗೆ ಆಗ್ರಹಿಸಿದ್ದವು. ಆದಾಗ್ಯೂ ರಜನಿಕಾಂತ್ ಕ್ಷಮೆಯಾಚಿಸುವುದಿಲ್ಲವೆಂದು ತಿಳಿಸಿದ್ದರು ಹಾಗೂ ತಾನು ಹೇಳಿದ್ದುದು ವಾಸ್ತವಿಕ ವಿಷಯವಾಗಿದೆಯೆಂದವರು ತಿಳಿಸಿದ್ದರು.

 ಪೆರಿಯಾರ್ ಪ್ರತಿಮೆಗೆ ದುಷ್ಕರ್ಮಿಗಳು ಹಾನಿ ಮಾಡಿರುವುದನ್ನು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ದಾರೆ. ತಮಿಳರು ಹಾಗೂ ತಮಿಳುನಾಡಿನ ಜನತೆಗೆ ಶ್ರಮಪಟ್ಟ ಹೋರಾಡಿದ ಪೆರಿಯಾರ್ ಅವರ ಪ್ರತಿಮೆ ಮೇಲೆ ನಡೆದ ದಾಳಿಯು ನಾಚಿಕೆಗೇಡಿನದ್ದಾಗಿದೆ ಹಾಗೂ ವಿಷಾದಕರವಾಗಿದೆ ಎಂದರು.

 ಪಾಟ್ಟಾಳಿ ಮಕ್ಕಳ್ ಕಚ್ಚಿ ಪಕ್ಷದ ನಾಯಕ ಎಸ್.ರಾಮದಾಸ್ ಕೂಡಾ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಹಾಗೂ ಇದರಿಂದ ಜನಸಾಮಾನ್ಯರ ಶಾಂತಿಗೆ ಭಂಗವುಂಟಾಗಲಿದೆಯೆಂದು ಹೇಳಿದ್ದಾರೆ. ಈ ಘಟನೆಯ ಹಿಂದಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News