ಕೊರೊನಾವೈರಸ್: ಮುಂಬೈನಲ್ಲಿ ಇಬ್ಬರ ಮೇಲೆ ತೀವ್ರ ನಿಗಾ, ವಿಶೇಷ ವಾರ್ಡ್ ಸ್ಥಾಪನೆ

Update: 2020-01-24 08:09 GMT

ಮುಂಬೈ, ಜ.24: ಚೀನಾ ದೇಶದಲ್ಲಿ ಸಾಕಷ್ಟು ಸಂಖ್ಯೆಯ ಜನರನ್ನು ಬಾಧಿಸಿರುವ ಕೊರೊನಾವೈರಸ್ ಭಾರತದಲ್ಲಿ ವ್ಯಾಪಿಸದಂತೆ ಮುನ್ನಚ್ಚರಿಕಾ ಕ್ರಮವಾಗಿ ಚೀನಾದಿಂದ ಮುಂಬೈಗೆ ವಾಪಸಾಗಿರುವ ಇಬ್ಬರು ವ್ಯಕ್ತಿಗಳ ಮೇಲೆ ವೈದ್ಯಕೀಯ ನಿಗಾ ಇಡಲಾಗಿದೆ ಎಂದು ಬಿಎಂಸಿ ಆರೋಗ್ಯಾಧಿಕಾರಿ ಶುಕ್ರವಾರ ತಿಳಿಸಿದ್ದಾರೆ.

ಚೀನಾದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಿಂಚ್‌ಪೊಕಾಲಿಯಲ್ಲಿರುವ ಕಸ್ತೂರ್ಬ ಆಸ್ಪತ್ರೆಯಲ್ಲಿ ಬೃಹನ್‌ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಪ್ರತ್ಯೇಕ ವಾರ್ಡ್‌ನ್ನು ತೆರೆದಿದೆ.

‘‘ಶಂಕಿತ ಕೊರೊನಾ ವೈರಸ್ ಬಾಧಿತ ವ್ಯಕ್ತಿಯ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ’’ ಎಂದು ಬಿಎಂಸಿ ಆರೋಗ್ಯಾಧಿಕಾರಿ ಡಾ.ಪದ್ಮಜಾ ಕೇಸ್ಕರ್ ಹೇಳಿದ್ದಾರೆ.

ಮುಂಬೈ ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಚೀನಾದಿಂದ ಆಗಮಿಸುವವರಲ್ಲಿ ಕೊರೊನಾ ವೈರಸ್‌ನ ಯಾವುದೆ ಲಕ್ಷಣವಿದ್ದರೆ ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಿಸುವಂತೆ ವೈದ್ಯರುಗಳಿಗೆ ತಿಳಿಸಿದ್ದೇವೆ. ಸ್ವಲ್ಪ ಕಫ ಹಾಗೂ ಶೀತ ಸಂಬಂಧಿ ಸಮಸ್ಯೆಯಿದ್ದ ಚೀನಾದಿಂದ ಬಂದಿರುವ ಇಬ್ಬರು ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಪದ್ಮಜಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News