ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

Update: 2020-01-24 13:59 GMT

ಬೆಂಗಳೂರು, ಜ.24: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕನ ವಿರುದ್ಧ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಝ್ವಾನ್ ಅರ್ಶದ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿಕೊಳ್ಳಲು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಝ್ವಾನ್ ಅರ್ಶದ್ ನಕಲಿ ಮತದಾರರ ಚೀಟಿ ಮುದ್ರಿಸಿ ಹಂಚುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಟ್ವೀಟ್ ಮಾಡಿತ್ತು. ಅಲ್ಲದೇ, ಈ ಸಂಬಂಧ ತನಿಖೆ ಪೂರ್ಣಗೊಳ್ಳುವವರೆಗೆ ರಿಝ್ವಾನ್ ಅರ್ಶದ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ಆಗ್ರಹಿಸಿತ್ತು.

'ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಇಬ್ರಾಹಿಮ್ ಖಲೀಲುಲ್ಲಾ ನಕಲಿ ಮತದಾರರ ಗುರುತಿನ ಚೀಟಿಗಳನ್ನು ಹಂಚುವ ವೇಳೆ ಸಿಕ್ಕಿ ಹಾಕಿಕೊಂಡಿದ್ದಾರೆ. ಒಟ್ಟು 18 ಮಂದಿ ಈ ನಕಲಿ ಗುರುತಿನ ಚೀಟಿಗಳ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಾಲದ ಹಿಂದಿದ್ದಾರೆ' ಎಂದು ಆರೋಪಿಸಿ ಬಿಜೆಪಿ ಟ್ವಿಟ್ ಮಾಡಿತ್ತು.

ಈ ಸಂಬಂಧ ರಿಝ್ವಾನ್ ಅರ್ಶದ್ ಬಿಜೆಪಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅದರಂತೆ, ಇಂದು ಜನಪ್ರತಿನಿಧಿಗಳ ನ್ಯಾಯಾಲಯವು, ನಳಿನ್‌ ಕುಮಾರ್ ಕಟೀಲು ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕನಿಗೆ ಸಮನ್ಸ್ ಜಾರಿ ಮಾಡಿದೆ.

ರಿಝ್ವಾನ್ ಅರ್ಶದ್ ಪರ ವಕೀಲರಾದ ಎಸ್.ಎ.ಅಹಮದ್, ಸಂಜಯ್ ಯಾದವ್ ಹಾಗೂ ಸೂರ್ಯ ಮುಕುಂದರಾಜ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News