ಪ್ರವಾದಿ‌ ನಿಂದನೆ ಆರೋಪ: ರಾಜ್ಯ ಸರಕಾರ, ಸುವರ್ಣ ನ್ಯೂಸ್ ನಿರೂಪಕ ಅಜಿತ್ ಗೆ ಸುಪ್ರೀಂ ನೋಟಿಸ್

Update: 2020-01-24 14:54 GMT

ಬೆಂಗಳೂರು, ಜ.24: ಇಸ್ಲಾಂ ಧರ್ಮದ ಬಗ್ಗೆ ಮತ್ತು ಪ್ರವಾದಿ (ಸ.ಅ) ರವರ ಬಗ್ಗೆ ಬಹಿರಂಗವಾಗಿ ನಿಂದಿಸಿ, ಅವಹೇಳನ ಮಾಡಿದ ಆರೋಪದ ಮೇಲೆ ಸುವರ್ಣ ನ್ಯೂಸ್ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಸಲ್ಲಿಕೆಯಾಗಿದ್ದ ಅಪೀಲನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದ್ದು, ರಾಜ್ಯ ಸರಕಾರ ಹಾಗೂ ಅಜಿತ್ ಹನುಮಕ್ಕನವರ್ ಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ದಾಖಲೆ ನೀಡುವಂತೆ ಅರ್ಜಿದಾರರಿಗೆ ಅನುಮತಿಯನ್ನು ನೀಡಿದೆ.

2018ರ ಡಿಸೆಂಬರ್‌ನಲ್ಲಿ ಸುವರ್ಣ ನ್ಯೂಸ್ ಕಾರ್ಯಕ್ರಮದಲ್ಲಿ ನಿರೂಪಕ ಇಸ್ಲಾಂ ಧರ್ಮದ ಬಗ್ಗೆ ಮತ್ತು ಪ್ರವಾದಿಯವರ ಬಗ್ಗೆ ಬಹಿರಂಗವಾಗಿ ನಿಂದಿಸಿ, ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಎಸ್ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಮಹಮ್ಮದ್ ಶರೀಫ್ ಎಂಬವರು ಸುವರ್ಣ ಟಿವಿಯ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ದೂರು‌ ದಾಖಲಿಸಿದ್ದರು. ಮಂಗಳೂರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡಾ ದಾಖಲಾಗಿತ್ತು. ಮಾತ್ರವಲ್ಲದೇ ನಿಂದನೆ ಪ್ರಕರಣದ ವಿರುದ್ಧ ರಾಜ್ಯದೆಲ್ಲೆಡೆ ಹಲವಾರು ಪ್ರತಿಭಟನೆಗಳು ನಡೆದು, ವಿವಿಧ ಠಾಣೆಗಳಲ್ಲಿ ಸುಮಾರು 800ಕ್ಕೂ ಅಧಿಕ ದೂರುಗಳು ನೀಡಲಾಗಿತ್ತು. ಆದರೆ ಪಾಂಡೇಶ್ವರ ಮತ್ತು ಶಿವಮೊಗ್ಗದ ತುಂಗಾ ನಗರ ಠಾಣೆಯಲ್ಲಿ ಮಾತ್ರ ಎಫ್ಐಆರ್ ದಾಖಲಾಗಿತ್ತು.

ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣವನ್ನು ರಾಜ್ಯ ಹೈಕೋರ್ಟ್ ನಲ್ಲಿ ರದ್ದು ಕೋರಿ ಆರೋಪಿ ಅಜಿತ್ ಹನುಮಕ್ಕನವರ್ ಅರ್ಜಿ ಸಲ್ಲಿಸಿದ್ದು, ಅದನ್ನು ಹೈಕೋರ್ಟ್ ಪುರಸ್ಕರಿಸಿತ್ತು. ಆದರೆ ಎಸ್ಡಿಪಿಐ ಸುಪ್ರೀಂ ಕೋರ್ಟಿನಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದು, ಇಂದು ಸುಪ್ರೀಂ ಕೋರ್ಟ್ ಎಸ್ಡಿಪಿಐ ಸಲ್ಲಿಸಿದ್ದ ಅಪೀಲನ್ನು ಪುರಸ್ಕರಿಸಿ, ಕರ್ನಾಟಕ ರಾಜ್ಯ ಸರಕಾರಕ್ಕೆ ಮತ್ತು ಆರೋಪಿ ಅಜಿತ್ ಗೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ದಾಖಲೆ ನೀಡುವಂತೆ ಅರ್ಜಿದಾರರಿಗೆ ಅನುಮತಿಯನ್ನು ನೀಡಿದೆ.

ಎಸ್ಡಿಪಿಐಯ ಮಹಮ್ಮದ್ ಶರೀಫ್ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಹಿರಿಯ ನ್ಯಾಯವಾದಿ ಕಾಮಿನಿ ಜೈಸ್ವಾಲ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News