ಸಿಎಎ ವಿರುದ್ಧ ಪ್ರತಿಭಟನೆ : ಎನ್‌ಎಸ್‌ಎ ಹೇರಿಕೆಯನ್ನು ಪ್ರಶ್ನಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ

Update: 2020-01-24 14:44 GMT

ಹೊಸದಿಲ್ಲಿ,ಜ.24: ಸಿಎಎ ವಿರುದ್ಧ ಪ್ರತಿಭಟನೆಗಳ ನಡುವೆ ಕೆಲವು ರಾಜ್ಯಗಳು ಮತ್ತು ದಿಲ್ಲಿಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯನ್ನು ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ.

ಎನ್‌ಎಸ್‌ಎ ಹೇರಿಕೆಗೆ ಸಂಬಂಧಿಸಿದಂತೆ ಸರ್ವಾನ್ವಯ ಆದೇಶವನ್ನು ತಾನು ಹೊರಡಿಸುವಂತಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳಾದ ಅರುಣ ಮಿಶ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರ ಪೀಠವು, ಅರ್ಜಿಯನ್ನು ಹಿಂದೆಗೆದುಕೊಳ್ಳುವಂತೆ ನ್ಯಾಯವಾದಿ ಎಂ.ಎಲ್.ಶರ್ಮಾ ಅವರಿಗೆ ಸೂಚಿಸಿತು.

 ಸಿಎಎ ಕುರಿತು ಬಾಕಿಯಿರುವ ಪ್ರಕರಣಗಳಲ್ಲಿ ಎನ್‌ಎಸ್‌ಎ ಉಲ್ಲಂಘನೆಗಳ ನಿರ್ದಿಷ್ಟ ವಿವರಗಳೊಂದಿಗೆ ಹೊಸ ಅರ್ಜಿ ಅಥವಾ ಮಧ್ಯಂತರ ಅರ್ಜಿಯನ್ನು ಸಲ್ಲಿಸುವಂತೆ ಪೀಠವು ಶರ್ಮಾಗೆ ತಿಳಿಸಿತು.

ಎನ್‌ಎಸ್‌ಎ ಹೇರಿಕೆಯನ್ನು ಪ್ರಶ್ನಿಸಿದ್ದ ಶರ್ಮಾ,ಸಿಎಎ,ಎನ್‌ಪಿಆರ್ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಹತ್ತಿಕ್ಕಲು ಮತ್ತು ಅವರ ಮೇಲೆ ಒತ್ತಡ ಹೇರಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.

ಎನ್‌ಎಸ್‌ಎ ಯಾವುದೇ ವ್ಯಕ್ತಿಯನ್ನು ವಿಚಾರಣೆಯಿಲ್ಲದೆ 12 ತಿಂಗಳ ಕಾಲ ಬಂಧನದಲ್ಲಿರಿಸಲು ಪೊಲೀಸರಿಗೆ ಅಧಿಕಾರವನ್ನು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News