ಅವಹೇಳನಕಾರಿ ಹೇಳಿಕೆಗೆ ಖಂಡನೆ: ಶಾಸಕ ರೇಣುಕಾಚಾರ್ಯ ವಿರುದ್ಧ ಬೀದಿಗಿಳಿದ ಜನತೆ

Update: 2020-01-24 15:07 GMT

ಹೊನ್ನಾಳಿ: ಶಾಸಕ ರೇಣುಕಾಚಾರ್ಯ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಸಾವಿರಾರು ಮಂದಿ ಬೃಹತ್ ಪ್ರತಿಭಟನೆ ನಡೆಸಿದರು.

ದೇವನಾಯ್ಕನಹಳ್ಳಿ ದರ್ಗಾದಿಂದ ಬೃಹತ್ ಮೆರವಣಿಗೆ ಮೂಲಕ ಪ್ರತಿಕೃತಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ತಹಶೀಲ್ದಾರ್ ತುಷಾರ್ ಬಿ ಹೊಸೂರು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮೌಲವಿ ಮಹಮ್ಮದ್ ಇಸ್ಮಾಯಿಲ್, ಇಸ್ಲಾಂ ಎಂದರೆ ಶಾಂತಿ ಸಾರುವ ಧರ್ಮವಾಗಿದ್ದು, ಮಸೀದಿಗಳಲ್ಲಿ ಭಕ್ತಿ ಮತ್ತು ಪ್ರೀತಿಗಳನ್ನು ಇಟ್ಟಿದ್ದಾರೆಯೇ ಹೊರತು ರೇಣುಕಾಚಾರ್ಯ ಹೇಳುವ ಹಾಗೆ ಮದ್ದುಗುಂಡುಗಳಲ್ಲ ಎಂದು ಹೇಳಿದರು.

ಯುವ ಮುಖಂಡ ದರ್ಶನ್ ಬಳ್ಳೇಶ್ವರ ಮಾತನಾಡಿ, ಬಾಂಬ್ ಪತ್ತೆ ಪ್ರಕರಣದಲ್ಲಿ ಖಾನ್ ಸಿಕ್ಕಿದ್ದರೆ ಅವನಿಗೆ ಉಗ್ರನ ಪಟ್ಟ ಕಟ್ಟುತ್ತಿದ್ದರು. ಆದರೆ , ಮಂಗಳೂರು ಬಾಂಬ್ ಪ್ರಕರಣದಲ್ಲಿ ರಾವ್ ಸಿಕ್ಕಿಬಿದ್ದಿದ್ದರಿಂದ ಆತ ಮಾನಸಿಕ ಅಸ್ವಸ್ಥ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.

ದಲಿತ ಮುಖಂಡ ಜಿ.ಎಚ್. ತಮ್ಮಣ್ಣ ಮಾತನಾಡಿ, ರೇಣುಕಾಚಾರ್ಯ ಶತ ದಡ್ಡ ರಾಜಕಾರಣಿ. ಇವರಿಂದಾಗಿ ಇಡೀ ಕ್ಷೇತ್ರ ಅಪಮಾನಗಳಿಂದ ತಲೆತಗ್ಗಿಸುವಂತಾಗಿದೆ. ಇವರು ಒಬ್ಬ ಜನಪ್ರತಿನಿಧಿಯಾಗಿ ಪ್ರಮಾಣವಚನ ಸ್ವೀಕರಿಸಿ ಸಂವಿಧಾನದ ವಿರುದ್ಧವೇ ವರ್ತಿಸುತ್ತಿದ್ದಾರೆ. ಹಿಂದು -ಮುಸ್ಲಿಮರು ಈ ದೇಶದ ಎರಡು ಕಣ್ಣುಗಳಿದ್ದಂತೆ. ಇಂತಹ ಕಣ್ಣುಗಳನ್ನೇ ನಾಶಮಾಡಲು ಬಿಜೆಪಿಯವರು ಹೊರಟಿದ್ದಾರೆ. ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದು ಜನರೇ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. 

ಮುಸ್ಲಿಂ ಮುಖಂಡ ಚೀಲೂರು ವಾಜೀದ್, ಅಬೀದ್ ಆಲಿ ಖಾನ್ ಮಾತನಾಡಿದರು. ವಕೀಲ ಮಹಮ್ಮದ್ ಗೌಸ್, ಅಝರ್ ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್: ಪ್ರತಿಭಟನೆ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಡಿವೈಎಸ್ಪಿ ಮಂಜುನಾಥ್‍ ಗಂಗಲ್, ಪ್ರಶಾಂತ್ ಮನೋಳಿ ನೇತೃತ್ವದಲ್ಲಿ ಮಾಡಲಾಗಿತ್ತು.

ಹೊನ್ನಾಳಿ ತಾಲೂಕಿನಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಅಣ್ಣ-ತಮ್ಮಂದಿರಂತೆ ಇದುವರೆಗೂ ಜೀವನ ನಡೆಸುತ್ತಿದ್ದರು.ಶಾಸಕ ರೇಣುಕಾಚಾರ್ಯ ತಮ್ಮ ಹೇಳಿಕೆಯಿಂದ ಮುಸ್ಲಿಮರು ಮತ್ತು ಹಿಂದೂಗಳು ಪರಸ್ಪರ ಮುಖವನ್ನು ನೋಡಿಕೊಳ್ಳದ ರೀತಿ ಮಾಡಿದ್ದಾರೆ. ಮುಸ್ಲಿಂ ಕೇರಿಗಳಿಗೆ ಅನುದಾನ ಕೊಡುವುದಿಲ್ಲ ಎನ್ನುವುದಕ್ಕೆ ನೀವು ದುಡಿದಿರುವ ಹಣವಲ್ಲ. ಅದು ಸರಕಾರದ ಹಣ. ನಿಮ್ಮ ಮನೆಯ ಹಣ ನಮಗೆ ಬೇಕಾಗಿಲ್ಲ.

-ಅಬೀದ್ ಅಲಿ ಖಾನ್, ತಾ.ಪಂ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News