ಬದಲಾವಣೆಯತ್ತ ಸರಕಾರ ಚಿಂತನೆ: 'ಜಿಲ್ಲಾಧಿಕಾರಿ' ಇನ್ನು ಮುಂದೆ 'ಕಲೆಕ್ಟರ್' !

Update: 2020-01-24 16:38 GMT

ಬೆಂಗಳೂರು, ಜ. 24: ಜ್ಯೋತಿಷ್ಯ ‘ವಿಜ್ಞಾನ’ ಎಂದು ಸಾಬೀತಾಗಿರುವುದರಿಂದ ಸರಕಾರ ಅದನ್ನು ಯಾವುದೇ ಕಾರಣಕ್ಕೂ ನಿಷೇಧಿಸುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಸಚಿವಾಲಯದ ಅಧಿಕಾರಿಗಳು ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು.

ಜ್ಯೋತಿಷ್ಯದ ಹೆಸರಿನಲ್ಲಿ ನಕಲಿ ಜ್ಯೋತಿಷಿಗಳು, ವಂಚಿಸಿ ಹಣ ವಸೂಲಿ ಮಾಡುವವರು, ಜನರನ್ನು ತಪ್ಪುದಾರಿಗೆ ಎಳೆಯುವವರರ ಬಗ್ಗೆ ದೂರುಗಳಿವೆ. ಈ ಬಗ್ಗೆ ಪೊಲೀಸರು ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಶೋಕ್ ತಿಳಿಸಿದರು.

ನಿಪುಣರು: ಜ್ಯೋತಿಷ್ಯ ಕೇಳುವುದರಲ್ಲಿ ಜೆಡಿಎಸ್, ಕಾಂಗ್ರೆಸ್ ಮುಖಂಡರೇ ನಿಪುಣರು. ಜ್ಯೋತಿಷಿಗಳ ಮನೆ ಬಾಗಿಲಿಗೆ ನಿರಂತರವಾಗಿ ಹೋಗುವವರು ಆ ಪಕ್ಷಗಳ ನಾಯಕರೇ. ಹೀಗಾಗಿ ಜ್ಯೋತಿಷ್ಯ ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಎಲ್ಲ ಧರ್ಮಗಳಲ್ಲಿರುವ ಮೌಢ್ಯಗಳು ನಿಷೇಧ ಆಗಬೇಕು. ಜನರಿಗೆ ಹಿಂಸೆ ನೀಡುವಂತಹ ವೌಢ್ಯಗಳು ಯಾವುದೇ ಧರ್ಮದಲ್ಲಿದ್ದರೂ ಆಚರಿಸಲು ಅವಕಾಶವಿಲ್ಲ. ಮಕ್ಕಳನ್ನು ಮುಳ್ಳಿನ ಮೇಲೆ ಎಸೆಯುವಂತ ಅನಿಷ್ಟ ಪದ್ಧತಿಗಳನ್ನು ನಿಷೇಧಿಸಬೇಕು ಎಂದು ಅವರು ಪ್ರತಿಪಾದಿಸಿದರು.

ಇನ್ನು ಕಲೆಕ್ಟರ್: ‘ಜಿಲ್ಲಾಧಿಕಾರಿ’ ಹೆಸರನ್ನು ಇನ್ನು ಮುಂದೆ ಕಲೆಕ್ಟರ್ ಎಂದು ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅಶೋಕ್ ಇದೇ ವೇಳೆ ತಿಳಿಸಿದರು.

ಭೂ ಪರಿವರ್ತನೆಯಾಗದ, ಯೋಜನಾ ಮಂಜೂರಾತಿ ಇಲ್ಲದ ಕಂದಾಯ ನಿವೇಶನಗಳ ನೋಂದಣಿ ನಿಲ್ಲಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಲಾಖೆಯ ಕಾವೇರಿ ತಂತ್ರಾಂಶದಲ್ಲಿ ಭೂ ಪರಿವರ್ತನೆಯಾಗದ, ಯೋಜನಾ ಮಂಜೂರಾತಿ ಇಲ್ಲದ ಕಂದಾಯ ನಿವೇಶನಗಳ ನೋಂದಣಿಗೆ ಅವಕಾಶವಿಲ್ಲ. ಕೆಲವು ಕಡೆ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡುವ ಪ್ರಯತ್ನಗಳು ನಡೆದಿವೆ ಎಂದು ದೂರಿದರು.

ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

‘ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರಿಂದ ಯಾವುದೇ ತೊಂದರೆ ಇಲ್ಲ. ಒಪ್ಪಂದ ಆಗಿರುವಂತೆ ಸಚಿವರನ್ನಾಗಿ ಮಾಡಲಾಗುವುದು. ನಾನೂ ಮುಖ್ಯಮಂತ್ರಿ ಜತೆ ಚರ್ಚಿಸಲಿದ್ದೇನೆ. ಸಿಎಂ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ’
-ಆರ್.ಅಶೋಕ್ ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News