ವಿದೇಶಿ ಪ್ರವಾಸ ಮುಗಿಸಿ ಬಂದ ಬಿಎಸ್‌ವೈಗೆ ಕಾಂಗ್ರೆಸ್ ನಿಂದ ಪ್ರಶ್ನೆಗಳ ಸುರಿಮಳೆ

Update: 2020-01-24 17:01 GMT

ಬೆಂಗಳೂರು, ಜ. 24: ಸಿಎಂ ಯಡಿಯೂರಪ್ಪ ಅವರೆ, ಸಂವಿಧಾನ ಬದ್ಧ ಸಮ್ಮಿಶ್ರ ಸರಕಾರವನ್ನು ವಾಮ ಮಾರ್ಗದಿಂದ ಕೆಡವಿ ಅಧಿಕಾರ ಹಿಡಿದಿರಿ, ಭೀಕರ ನೆರೆ ಹಾವಳಿಯಿದ್ದರೂ 1 ತಿಂಗಳು ಸಂಪುಟ ರಚಿಸಲು ವಿಫಲವಾದಿರಿ, 180 ದಿನ ಕಳೆದರೂ ಪೂರ್ಣ ಮಂತ್ರಿಮಂಡಲ ರಚನೆಗೆ ಹೆಣಗುತ್ತಿರುವಿರಿ, 6 ತಿಂಗಳ ಶೂನ್ಯ ಸಾಧನೆ, ರಾಜ್ಯಕ್ಕೆ ಮಾಡಿದ ದ್ರೋಹವಲ್ಲವೇ?’ ಎಂದು ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ದ್ವೇಷಕ್ಕೆ ಜನತೆ ಬಲಿಯಾಗಬೇಕೇ?

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಯಡಿಯೂರಪ್ಪ ಅವರೆ, ಸಿದ್ದರಾಮಯ್ಯ ಸರಕಾರದ ಜನಪ್ರಿಯ ಯೋಜನೆಗಳಾದ, ಇಂದಿರಾ ಕ್ಯಾಂಟೀನ್ ಮುಚ್ಚುವ ಯತ್ನ, ಅನ್ನಭಾಗ್ಯ ಯೋಜನೆಯಲ್ಲಿ ಗೊಂದಲ ಸೃಷ್ಟಿ, ವಿದ್ಯಾರ್ಥಿ ವೇತನ ಕಡಿತ, ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡದಿರುವುದು, ನಿಮ್ಮ ದ್ವೇಷ ರಾಜಕಾರಣಕ್ಕೆ ರಾಜ್ಯದ ಜನತೆ ಬಲಿಯಾಗಬೇಕೆ?’ ಎಂದು ಪ್ರಶ್ನಿಸಿದೆ.

‘ಬಿಎಸ್‌ವೈ ಅವರೆ, 6 ತಿಂಗಳ ಆಡಳಿತದಲ್ಲಿ ರಾಜ್ಯಕ್ಕೆ ಬಿಜೆಪಿಯ ಕೊಡುಗೆ ಏನು? ಆಪರೇಷನ್ ಕಮಲ? ವರ್ಗಾವಣೆ ದಂಧೆ? ಜನಪರ ಯೋಜನೆಗಳ ಸ್ಥಗಿತ? ವಿದ್ಯಾರ್ಥಿ ವೇತನ ನೀಡದಿರುವುದು? ಇಂದಿರಾ ಕ್ಯಾಂಟೀನ್ ಮುಚ್ಚುವ ಯತ್ನ? ರೈತರಿಂದ ಬಲವಂತದ ಸಾಲ ವಸೂಲಿ? ಅಂಗಲಾಚಿದರೂ ದೊರೆಯದ ಕೇಂದ್ರದ ಅನುದಾನ? ಗೋಲಿಬಾರ್?’ ಎಂದು ಪ್ರಶ್ನೆಗಳ ಸುರಿಮಳೆಗೈದಿದೆ.

‘ರಾಜ್ಯದ ಭೀಕರ ಪ್ರವಾಹ ನಿರ್ವಹಣೆಯಲ್ಲಿ ಬಿಎಸ್‌ವೈ ಸರಕಾರ ಸಂಪೂರ್ಣ ವಿಫಲ. ಪ್ರವಾಹದಿಂದ 35,500 ಕೋಟಿ ರೂ.ಗೂ ಅಧಿಕ ನಷ್ಟ, ರಾಜ್ಯ ಸರಕಾರದಿಂದಲೇ ನಷ್ಟದ ವರದಿ. ಆದಾಗ್ಯೂ, ಕೇವಲ 1,869 ಕೋಟಿ ರೂ.ಪರಿಹಾರ ನೀಡಿದೆ ಕೇಂದ್ರದ ಮೋದಿ ಸರಕಾರ. ಇಂದಿಗೂ ನೆರೆ ಸಂತ್ರಸ್ತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ’ ಎಂದು ಕಾಂಗ್ರೆಸ್ ಸರಕಾರದ ಗಮನ ಸೆಳೆದಿದೆ.

‘ಬಿಎಸ್‌ವೈ ಅವರೆ, ಕೇಂದ್ರದಿಂದ ಹಣ ಬಿಡುಗಡೆ ಆಗುತ್ತಿಲ್ಲವೇಕೆ? 5,600 ಕೋಟಿ ರೂ.ಜಿಎಸ್ಟಿ ಬಾಕಿ 2,700 ಕೋಟಿ ರೂ.ಕುಡಿಯುವ ನೀರಿನ ಬಾಕಿ ಭಾಗ್ಯ ಲಕ್ಷ್ಮಿ ಯೋಜನೆಯ 309 ಕೋಟಿ ರೂ., 26 ಯೋಜನೆಗಳ ಅನುದಾನ ಬಾಕಿ ಎರಡೂ ಕಡೆ ಬಿಜೆಪಿ ಸರಕಾರವಿದ್ದು ಅನುದಾನ ತಡೆದು ಅಭಿವೃದ್ಧಿ ಸ್ಥಗಿತ ಗೊಳಿಸಿರುವುದೇಕೆ?’ ಎಂದು ಕಾಂಗ್ರೆಸ್ ಟೀಕಿಸಿದೆ.

‘ಯಡಿಯೂರಪ್ಪ ಅವರೆ, ಮಹದಾಯಿ ವಿವಾದಕ್ಕೆ ಸಂಬಂಧಿಸಿ ಚುನಾವಣೆಗೂ ಮೊದಲು ನೀವು ಹಾಗು ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸೇರಿ ಆಡಿದ ಬೃಹನ್ನಾಟಕವನ್ನು ಏಕೆ ಮರೆತಿರಿ? ರಾಜ್ಯ, ಕೇಂದ್ರದಲ್ಲಿ ನಿಮ್ಮದೇ ಸರಕಾರವಿದ್ದರೂ 6 ತಿಂಗಳಾದರೂ ವಿವಾದ ಏಕೆ ಬಗೆಹರಿದಿಲ್ಲ? ರಾಜ್ಯದ ಸಮಸ್ಯೆ ಬಗ್ಗೆ ಏಕಿಷ್ಟು ತಾತ್ಸಾರ?’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

‘ಅಶ್ವಥ್ ನಾರಾಯಣರವರೇ..ಜನ ನಿಮ್ಮನ್ನ ಅಸ್ವಸ್ಥ ನಾರಾಯಣ ಎಂದು ಕರೆಯುತ್ತಿದ್ದಾರೆ...!! ಉಪಮುಖ್ಯಮಂತ್ರಿ ಹುದ್ದೆಯ ಘನತೆಯನ್ನ ಕಾಪಾಡುವುದು ಬಹಳ ಮುಖ್ಯ, ಹಾಗಾಗಿ ನಿಮ್ಮ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಕಾಳಜಿ ವಹಿಸಿ ಎಂದು ವಿನಂತಿಸಿಕೊಳ್ಳುತ್ತೇವೆ’

-ಕೆಪಿಸಿಸಿ (ಟ್ವೀಟ್)

‘ಯಡಿಯೂರಪ್ಪ ಸ್ವಹಿತಕ್ಕಾಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು, ರಾಜ್ಯದ ಅಭಿವೃದ್ಧಿಗಾಗಿ ಅಲ್ಲ. ರಾಜ್ಯದಲ್ಲಿ ನೆರೆ-ಬರ ಪರಿಸ್ಥಿತಿ ಇದ್ದರೂ, ಸಚಿವ ಸಂಪುಟ ವಿಸ್ತರಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಸಮಾಜದಲ್ಲಿ ಅಶಾಂತಿ, ಆಪರೇಷನ್ ಕಮಲ ಹೀಗೆ ಈ ಪಟ್ಟಿ ಬೆಳೆಯುತ್ತಿದೆ. ಇದೇ ಬಿಜೆಪಿ ಸರಕಾರದ 180 ದಿನಗಳ ಸಾಧನೆ’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News