ವಲಸೆ ಕಾರ್ಮಿಕರ ಬವಣೆಯೂ ಆಧುನಿಕ ಸಮಾಜದ ನಿಷ್ಕ್ರಿಯತೆಯೂ

Update: 2020-01-24 18:41 GMT

ನಾವು ಬದುಕುತ್ತಿರುವ ಸುಶಿಕ್ಷಿತ, ಅತ್ಯಾಧುನಿಕ, ತಂತ್ರಜ್ಞಾನ ಕೇಂದ್ರಿತ ಸಮಾಜದಲ್ಲಿ ಈ ಮಟ್ಟಿಗೆ ನಿಷ್ಕಾಳಜಿ, ನಿಷ್ಕ್ರಿಯತೆ ಮತ್ತು ಅಮಾನವೀಯ ಕ್ರೌರ್ಯ ಅಡಗಿದೆ ಎಂದರೆ ನಾವು ನಾಚಿಕೆಯಿಂದ ತಲೆತಗ್ಗಿಸಬೇಕಾಗಿದೆ. ಜೆಸಿಬಿ ಇರುವುದು ನಮ್ಮ ವಿದ್ಯಾವಂತ ಸಮಾಜದ ಆಂತರ್ಯದಲ್ಲಿ, ಜೋಪಡಿಗಳನ್ನು ಉರುಳಿಸುವ ಜೆಸಿಬಿ ನಿಮಿತ್ತ ಮಾತ್ರ. ಮಣ್ಣೊಡನೆ ಮಣ್ಣಾಗಿ, ಮಣ್ಣ ಕಣಗಳೊಡನೆ ಬೆರೆತು ತಮ್ಮ ಬೆವರು ನೆತ್ತರು ಹರಿಸಿ ಸುಂದರ ನಗರಗಳನ್ನು ನಿರ್ಮಿಸುವ, ಸುಂದರ ಜೀವನವನ್ನು ಕಲ್ಪಿಸುವ ಶ್ರಮಜೀವಿಗಳ ನಿಟ್ಟುಸಿರಿಗೆ ಈ ಸುಶಿಕ್ಷಿತ ಸಮಾಜ ಏನೆಂದು ಸಾಂತ್ವನ ಹೇಳಲು ಸಾಧ್ಯ?

ಇತ್ತೀಚೆಗೆ ಕೇರಳದ ಮರಾಡು ಕರಾವಳಿ ಪ್ರದೇಶದಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ನಾಲ್ಕು ಬೃಹತ್ ವಸತಿ ಸಮುಚ್ಚಯಗಳನ್ನು ನೆಲಸಮ ಮಾಡಲಾಯಿತು. ನಿಯಮ ಬಾಹಿರವಾಗಿ ನಿರ್ಮಿಸಲಾಗಿದ್ದ ಈ ವಸತಿ ಸಮುಚ್ಚಯಗಳ ಧ್ವಂಸ ಕಾರ್ಯಾಚರಣೆಯ ಸಂದರ್ಭದಲ್ಲಿ ಕನ್ನಡದ ಸುದ್ದಿವಾಹಿನಿಯೊಂದರೊಡನೆ ಮಾತನಾಡುತ್ತಿದ್ದ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ಬೆಂಗಳೂರಿನಲ್ಲೂ ಇಂತಹ ಅಕ್ರಮ ಅತಿಕ್ರಮಣ ಹೆಚ್ಚಾಗುತ್ತಿರುವುದರ ಬಗ್ಗೆ ಪ್ರಸ್ತಾಪಿಸುತ್ತಾ ‘‘ಬೆಂಗಳೂರು ನಗರದಲ್ಲಿ ಅತಿಕ್ರಮವಾಗಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಂಡರೆ ಬಹುಪಾಲು ಕಟ್ಟಡಗಳು ನೆಲಸಮವಾಗುತ್ತವೆ’’ ಎಂದು ಹೇಳಿದ್ದರು. ವಾಸ್ತವವನ್ನು ನಿರ್ಭೀತಿಯಿಂದ ಹೇಳಿದ ಆಯುಕ್ತರು ಪ್ರಶಂಸಾರ್ಹರು. ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡ ಶ್ರೀಮಂತರ ಬಂಗಲೆಗಳು, ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಬಡಾವಣೆಗಳು, ರಸ್ತೆಯನ್ನು ಆಕ್ರಮಿಸಿಕೊಂಡು ನಿರ್ಮಿಸಿರುವ ಮನೆಗಳು ಹೀಗೆ ಬೆಂಗಳೂರು ಅಕ್ರಮಗಳ ನಗರ ಆಗಿರುವುದು ಗುಟ್ಟಿನ ಮಾತೇನಲ್ಲ. ನಗರಾಭಿವೃದ್ಧಿ ಅಂದರೆ ಹಾಗೆಯೇ. ನಗರ ಬೆಳೆಯುತ್ತಲೇ ಇರುತ್ತದೆ, ಅಕ್ರಮಗಳ ನಡುವೆ, ಅತಿಕ್ರಮಣಗಳ ನಡುವೆ, ಒತ್ತುವರಿಯ ನಡುವೆ. ಆದರೆ ಈ ಅಕ್ರಮಗಳ ಫಲಾನುಭವಿಗಳು ಯಾರು ಎನ್ನುವುದರ ಮೇಲೆ ನಗರಾಭಿವೃದ್ಧಿ ಪ್ರಾಧಿಕಾರಗಳು ತಮ್ಮ ಸಾರ್ವಜನಿಕ ಪ್ರಜ್ಞೆಯನ್ನು ವ್ಯಕ್ತಪಡಿಸುತ್ತವೆ.

 ನಮ್ಮ ಆಧುನಿಕ ಸಮಾಜದಲ್ಲಿ ಕುತ್ತಿಗೆಗೆ ಬೆಲ್ಟ್ ಹಾಕಿದ ನಾಯಿ ಬೀದಿ ನಾಯಿಗಿಂತಲೂ ಶ್ರೇಷ್ಠ ಎನಿಸಿಬಿಡುತ್ತದೆ. ಏಕೆಂದರೆ ಸಾಕು ನಾಯಿಗೆ ಒಂದು ಹೆಸರು ಇರುತ್ತದೆ, ಅವುಗಳಿಗೆ ಒಡೆಯನ ಇಂಗ್ಲಿಷ್ ಅರ್ಥವಾಗುತ್ತದೆ. ಕಾರುಗಳಲ್ಲಿ ಓಡಾಡುತ್ತದೆ. ಆರೋಗ್ಯ ಸಮಸ್ಯೆ ಎದುರಾದರೆ ವೈದ್ಯರಿಂದ ಚಿಕಿತ್ಸೆ ದೊರೆಯುತ್ತದೆ. ಪಾಪ ಬೀದಿ ಬೀದಿಗಳಲ್ಲಿ ಅಡ್ಡಾಡುವ ನಾಯಿಗಳು ಅಬ್ಬೇಪಾರಿಗಳಂತೆ ಎಂದೋ ಒಂದು ದಿನ ನರ ಕತ್ತರಿಸಿಕೊಂಡು ನರಳುತ್ತಾ ನಗರ ಪಾಲಿಕೆಯ ಗೂಡುಗಳನ್ನು ಸೇರುತ್ತವೆ. ಸಾಕಿದ ದನಗಳಿಗಿಂತಲೂ ಬೀಡಾಡಿ ದನಗಳು ಕೀಳಾಗಿ ಕಾಣುತ್ತವೆ. ಗೋವಿನ ಬಗ್ಗೆ ಎಷ್ಟೇ ಗೌರವ ಇದ್ದರೂ ನಮ್ಮ ಮನೆಯ ಮುಂದಿನ ಹೂಗಿಡಗಳಿಗೆ ಬಾಯಿ ಹಾಕಿದಾಗ ದಂಡ ಪ್ರಹಾರ ಮಾಡಿ ಒದ್ದೋಡಿಸಿಬಿಡುತ್ತೇವೆ. ಇಲ್ಲವೇ ಮನೆಯಲ್ಲಿ ಉಳಿದ ತಂಗಳನ್ನು ತಿನ್ನಲು ಕೊಟ್ಟು ಕೃತಾರ್ಥರಾಗುತ್ತೇವೆ. ಮನೆಯ ಗೇಟಿನ ಮುಂದೆ ಸಗಣಿಯ ತೊಪ್ಪೆಕಂಡರೆ ಹಿಡಿಶಾಪ ಹಾಕುವ ನಾವೇ ಯಾವುದೋ ಒಬ್ಬ ಟಿವಿ ಗುರೂಜಿ ಆದೇಶಿಸಿದರೆ ಸಗಣಿಯನ್ನು ಪಡೆಯಲು ಅಂಡಲೆಯುತ್ತೇವೆ. ಅಂದರೆ ನಮಗೆ ಬೀಡಾಡಿ ದನಗಳು ಬೇಕು, ಆದರೆ ನಮ್ಮ ಹಿತವಲಯಕ್ಕೆ ತೊಂದರೆಯಾಗದಂತಿರಬೇಕು. ಒಂದೆರಡು ಬೀದಿ ನಾಯಿಗಳಿದ್ದರೆ ರಾತ್ರಿ ಕಳ್ಳರ ಕಾಟ ಇರುವುದಿಲ್ಲ ಎಂದು ಭಾವಿಸಿ ಸುಮ್ಮನಾಗುತ್ತೇವೆ. ಆದರೆ ಆ ಬೀದಿ ನಾಯಿ ಮನೆಯ ಮುಂದೆಯೇ ಸಾಯುತ್ತಿದ್ದರೂ ಅತ್ತ ತಿರುಗಿಯೂ ನೋಡದೆ ಹೋಗುತ್ತೇವೆ. ಮನುಷ್ಯನಲ್ಲಿ ಕ್ರೌರ್ಯ ಕಂಡಾಗ ಮೃಗೀಯ ವರ್ತನೆ ಎಂದು ಖಂಡಿಸುವ ನಮಗೆ, ಮೃಗಗಳಲ್ಲಿ ನಮ್ಮಲ್ಲಿರುವಷ್ಟು ಕ್ರೌರ್ಯ ಇರುವುದಿಲ್ಲ ಎನ್ನುವ ಸತ್ಯ ಅರಿವಾಗುವುದೇ ಇಲ್ಲ.

 ಭಾರತದ ಪ್ರಜಾತಂತ್ರ ವ್ಯವಸ್ಥೆಯ ಮನಸ್ಥಿತಿ ಹೀಗಾಗಿದೆ. ನಮ್ಮ ಆಡಳಿತ ವ್ಯವಸ್ಥೆ ಈ ದೇಶದ ಜನತೆಯನ್ನೂ ಹೀಗೆಯೇ ವಿಂಗಡಿಸಿ, ಪ್ರತ್ಯೇಕಿಸಿ, ವಿಭಜಿಸಿ ನೋಡುತ್ತಿದೆ. ಆಡಳಿತ ವ್ಯವಸ್ಥೆಯೂ ತನ್ನದೇ ಆದ ಹಿತವಲಯವನ್ನು ಸೃಷ್ಟಿಸಿಕೊಂಡಿದೆ. ಈ ವಲಯದಲ್ಲಿ ನೆಲೆಸಿರುವವರಿಗೆ ಎಲ್ಲರೂ ಮನುಷ್ಯರಂತೆ ಕಾಣುತ್ತಿಲ್ಲ. ಕೆಲವರು ದೇವ ಮಾನವರಂತೆ ಕಾಣುತ್ತಿದ್ದಾರೆ. ಇನ್ನು ಕೆಲವರು ಕ್ಷುದ್ರ ಕ್ರಿಮಿಗಳಂತೆ ಕಾಣುತ್ತಿದ್ದಾರೆ. ಹಾಗಾಗಿ ಕೆಲವರಿಗೆ ಸಮ್ಮಾನದ ಗೌರವ ಹಲವರಿಗೆ ಉಚ್ಚಾಟನೆಯ ಶಿಕ್ಷೆ. ರಸ್ತೆ ನಿರ್ಮಾಣಕ್ಕೆ, ರೈಲ್ವೆ ಕಾಮಗಾರಿಗೆ, ಮೇಲ್ ಸೇತುವೆಗಳ ನಿರ್ಮಾಣಕ್ಕೆ, ಮೆಟ್ರೋ ರೈಲು ನಿರ್ಮಾಣಕ್ಕೆ ಅನಿವಾರ್ಯವಾಗಿ ಬೇಕಾಗುವ ಎಲುಬಿನ ಗೂಡುಗಳು, ಸುಂದರ ನಗರ ನಿರ್ಮಾಣವಾದ ಕೂಡಲೇ ತ್ಯಾಜ್ಯದ ವಸ್ತುಗಳಂತಾಗಿಬಿಡುತ್ತವೆ. ತಮ್ಮ ಐಷರಾಮಿ ಕಾರುಗಳಲ್ಲಿ ನಗರದ ರಸ್ತೆಗಳಲ್ಲಿ ಅಂಕುಡೊಂಕು, ಹಳ್ಳದಿಬ್ಬಗಳ ನಡುವೆ ಚಲಿಸುವ ಮಧ್ಯಮ ವರ್ಗದ ಮನಸ್ಸುಗಳು ಅಕ್ಕ ಪಕ್ಕದ, ಸೇತುವೆಯ ಕೆಳಗಿನ ಜೋಪಡಿಗಳನ್ನು ನೋಡುತ್ತಾ ‘‘ಪಾಪ ಎಷ್ಟು ಕಷ್ಟ ಪಡ್ತಾರೆ ಅಲ್ವಾ...’’ ಎನ್ನುತ್ತಾ ತಮ್ಮಾಳಗಿನ ಮಾನವನನ್ನು ಎಚ್ಚರಿಸುತ್ತಾರೆ. ತಮ್ಮ ಐಷಾರಾಮಿ ವಸತಿ ಸಮುಚ್ಚಯಗಳ ಸುತ್ತಲೂ ಹರಡುವ ಇಂತಹುದೇ ಜೋಪಡಿಗಳೂ ಸಹ ಕಟ್ಟಡ ಪೂರ್ತಿಯಾಗುವವರೆಗೂ ಅನುಕಂಪ ಗಳಿಸುತ್ತವೆ. ಒಮ್ಮೆ ಕಟ್ಟಡ ಪೂರ್ಣವಾಗಿ, ಮೆಟ್ರೋ ಚಲಿಸುವಂತಾಗಿ, ಸುಗಮ ಸಂಚಾರಕ್ಕೆ ಮಾರ್ಗ ಮುಕ್ತವಾದ ಕೂಡಲೇ ಇದೇ ಮನಸ್ಸುಗಳು ‘‘ಮೊದ್ಲು ಈ ಗುಡಿಸಲುಗಳನ್ನು ಕಿತ್ತಾಕ್ ಬೇಕ್ರಿ, ಇವ್ರಿಗೆ ಬೇರೆ ಜಾಗ ಸಿಗಲ್ವೇ...’’ ಎಂದು ರಾಗಬದ್ಧವಾಗಿ ಮೂದಲಿಸುತ್ತಾ ಮುನ್ನಡೆಯುತ್ತಾರೆ. ‘‘ ಸ್ವಲ್ಪಜಾಗ ಕೊಟ್ರೆ ಸಾಕು ಪರ್ಮನೆಂಟಾಗಿ ಊರಿಬಿಡ್ತಾರೆ...’’ ಅನ್ನೋ ಮಾತುಗಳಿಗೂ ಕೊರತೆ ಇರುವುದಿಲ್ಲ. ಈ ಮನಸ್ಥಿತಿಯನ್ನು ಆಡಳಿತ ವ್ಯವಸ್ಥೆಯಲ್ಲೂ ಕಾಣಬಹುದು ಎಂದು ಬಿಬಿಎಂಪಿ ನಿರೂಪಿಸಿದೆ.

 ಬೆಂಗಳೂರಿನ ಬೆಳ್ಳಂದೂರು ಮತ್ತು ಕರಿಯಮ್ಮನ ಅಗ್ರಹಾರ ಪ್ರದೇಶದ ಕಾಡುಬೀಸನ ಹಳ್ಳಿ ಮತ್ತು ದೇವರ ಬೀಸನ ಹಳ್ಳಿಯಲ್ಲಿ ಬೀಡು ಬಿಟ್ಟಿದ್ದ ನೂರಾರು ಶ್ರಮಜೀವಿಗಳ ಜೋಪಡಿಗಳನ್ನು ಏಕಾಏಕಿ ಧ್ವಂಸ ಮಾಡುವ ಮೂಲಕ ಬೆವರಿನ ಗೂಡುಗಳನ್ನು ನೆಲಸಮ ಮಾಡಿರುವ ಆಡಳಿತ ವ್ಯವಸ್ಥೆಗೆ ಇಲ್ಲಿ ನೆಲೆಸಿದ್ದ ಎಲುಬಿನ ಹಂದರಗಳು ಎಲ್ಲಿಂದಲೋ ಬಂದ ಆಗಂತುಕರಂತೆ ಕಂಡಿದ್ದರೆ ಅಚ್ಚರಿಯೇನಿಲ್ಲ. ಏಕೆಂದರೆ ಅವರ ಶ್ರಮದ ಉತ್ಪಾದಕೀಯತೆಯ ಲಾಭವನ್ನು ಈ ವೇಳೆಗಾಗಲೇ ಬಾಚಿಕೊಂಡು ಅನುಭವಿಸಿದ್ದಾಗಿದೆ. ಈ ಜೋಪಡಿಗಳಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದವರೂ ಇದ್ದರು ಎನ್ನುವುದೇ ನೆಲಸಮ ಮಾಡಲು ಕಾರಣ ಎನ್ನುವುದಾದರೆ ಜೆಸಿಬಿ ಬಳಸಿ ರಾತ್ರೋರಾತ್ರಿ ನೂರಾರು ಜನರನ್ನು ನಿರ್ಗತಿಕರನ್ನಾಗಿ ಮಾಡಿದ ಆಡಳಿತ ವ್ಯವಸ್ಥೆ ಈ ದೇಶದ ಪ್ರಜೆಗಳ ಮುಂದೆ ಸಾಕ್ಷ್ಯಾಧಾರಗಳನ್ನು ಮಂಡಿಸಬೇಕಾಗುತ್ತದೆ. ಇಲ್ಲಿ ನೆಲೆಸಿದ್ದವರಲ್ಲಿ ಹೆಚ್ಚು ಪಾಲು ಕೊಪ್ಪಳ ಮತ್ತು ಇತರ ಉತ್ತರ ಕರ್ನಾಟಕದಿಂದ ಕೂಳಿಗಾಗಿ ಗುಳೆ ಹೊರಟು ಬಂದ ಶ್ರಮಿಕರೇ ಆಗಿದ್ದರು ಎನ್ನುವುದು ಸತ್ಯ. ಒಂದು ವೇಳೆ ಬಾಂಗ್ಲಾದೇಶದ ಕೆಲವರು ಇಲ್ಲಿ ಇದ್ದುದೇ ಆದರೆ ಅವರನ್ನು ಗುರುತಿಸಿ ಗೌರವಯುತವಾಗಿ ಹಿಂದಕ್ಕೆ ಕಳುಹಿಸಬಹುದಿತ್ತು. ಸಮಸ್ಯೆ ಎಂದರೆ ಬಾಂಗ್ಲಾ ವಲಸಿಗರು ಎಂದ ಕೂಡಲೇ ನಮ್ಮ ಆಡಳಿತ ವ್ಯವಸ್ಥೆಗೆ ಬಾಂಬ್ ಕಾಣುತ್ತದೆ, ಮನುಷ್ಯನ ಚಿತ್ರ ಕಾಣುವುದಿಲ್ಲ. ಹಾಗಾಗಿ ನೆಲಸಮವನ್ನು ಸಮರ್ಥಿಸಲು ಸುಲಭ. ಎಲ್ಲ ಶ್ರಮಿಕರನ್ನೂ ಬೀದಿಪಾಲು ಮಾಡಿದ ನಂತರ, ಬಾಂಗ್ಲಾದಿಂದ ಬಂದವರು ಈಗಾಗಲೇ ಓಡಿ ಹೋಗಿದ್ದಾರೆ ಎಂದು ಹೇಳುವುದನ್ನು ನೋಡಿದರೆ ಬಾಂಗ್ಲಾ ಎನ್ನುವ ಪದ ನಿಮಿತ್ತ ಮಾತ್ರ ಎಂದು ಸ್ಪಷ್ಟವಾಗುತ್ತದೆ.

ವಲಸಿಗರು ಮನುಷ್ಯರಲ್ಲವೇ? ನಾವು ನಡೆದಾಡುವ ಮಣ್ಣಿನಲ್ಲಿ, ನಾವು ವಾಸಿಸುವ ಸಿಮೆಂಟು ಜಲ್ಲಿ ಗಾರೆಯ ಗೂಡುಗಳಲ್ಲಿ, ನಾವು ಓಡಾಡುವ ಸೇತುವೆ ಮೆಟ್ರೋಗಳಲ್ಲಿ, ನಾವು ಅಡ್ಡಾಡುವ ನವಿರಾದ ರಸ್ತೆಗಳಲ್ಲಿ ಮತ್ತು ನಾವು ಉಣ್ಣುವ ಅನ್ನದ ಕಣಕಣದಲ್ಲಿ ಈ ಜೋಪಡಿ ನಿವಾಸಿಗಳ ಬೆವರಿನ ಹನಿಗಳಿರುವುದನ್ನು ಏಕೆ ಗಮನಿಸಲಾಗುವುದಿಲ್ಲ? ವಲಸೆ, ವಲಸಿಗರು ಎಂದ ಕೂಡಲೇ ಏನೋ ಇಡೀ ಸಮಾಜಕ್ಕೆ ಕಂಟಕಪ್ರಾಯರು ಎಂದು ಭಾವಿಸುವ ಕ್ರೂರ ಮನಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಹಾಗಾಗಿಯೇ ನಮ್ಮ ಕಣ್ಣಿಗೆ ಈ ಶ್ರಮಿಕರು ಬೀಡಾಡಿ ಜಾನುವಾರುಗಳಂತೆ ಕಾಣುತ್ತಾರೆ. ಬೇಕೆಂದಾಗ ಬಳಸಿ ಬೇಡವಾದಾಗ ತಿಪ್ಪೆಗೆಸೆದುಬಿಡುತ್ತೇವೆ. ಇವರು ವಾಸಿಸುವ ತುಂಡು ಭೂಮಿ ಅತಿಕ್ರಮಣಕ್ಕೆ ಒಳಗಾದ ಅಕ್ರಮ ಸಾಮ್ರಾಜ್ಯದಂತೆ ಕಾಣುತ್ತದೆ. ಈ ಸಾಮ್ರಾಜ್ಯದ ವಿಮೋಚನೆಗೆ ಜೆಸಿಬಿ ಅಸ್ತ್ರವಾಗಿಬಿಡುತ್ತದೆ. ಜೆಸಿಬಿ ಚಲಾಯಿಸುವ ಚಾಲಕನೂ ಇಂತಹುದೇ ಮತ್ತೊಂದು ಜೋಪಡಿಯಲ್ಲಿ ವಾಸಿಸುತ್ತಿದ್ದರೂ ಅಚ್ಚರಿ ಪಡಬೇಕಿಲ್ಲ. ಅವ ತನ್ನ ಕರ್ತವ್ಯ ನಿಭಾಯಿಸುತ್ತಾನೆ, ತುತ್ತು ಕೂಳಿಗಾಗಿ. ಆದರೆ ಜೆಸಿಬಿ ಯಂತ್ರದ ಇಂಜಿನ್ ನಮ್ಮ ಆಡಳಿತ ವ್ಯವಸ್ಥೆಯ ಕೈಯಲ್ಲಿರುತ್ತದೆ. ಹಾಗಾಗಿಯೇ ಇದು ರಾಜಕಾಲುವೆಗಳ ಬಳಿ ಬಂದರೆ ನಿಷ್ಕ್ರಿಯವಾಗಿಬಿಡುತ್ತವೆ. ಇಲ್ಲಿ ಅದೇ ಜೆಸಿಬಿ ಚಾಲಕನ ಕೈಕಾಲುಗಳು ಸ್ತಬ್ಧವಾಗಿಬಿಡುತ್ತವೆ. ಚಾಲಕ ಶಕ್ತಿ ಅವನಲ್ಲಿರುವುದಿಲ್ಲ ಅಲ್ಲವೇ ?

ವಲಸಿಗರು ಕಸಿಯುವವರಲ್ಲ ತಮ್ಮ ಬೆವರು ಬಸಿಯುವವರು ಎಂಬ ಸತ್ಯವನ್ನು ಅರಿತರೆ ನಾವು ಮನುಷ್ಯರೆಂದು ಗುರುತಿಸಿಕೊಳ್ಳಲು ಸಾಧ್ಯ. ಅಸ್ಸಾಮಿನಿಂದ ಕೋಲಾರದವರೆಗೆ ಈ ವಲಸಿಗರು ಹರಡಿರಬಹುದು. ಎಲ್ಲರೂ ಬಾಂಬ್ ಹೊತ್ತವರಲ್ಲ, ಎಲ್ಲರೂ ಸ್ಫೋಟಕಗಳನ್ನು ಹೊತ್ತವರಲ್ಲ. ಚುಮುಚುಮು ಚಳಿಯಲ್ಲಿ ದೇಹ ಬೆಚ್ಚಗಾಗಿಸಲು ಬಿಸಿ ಬಿಸಿ ಚಹಾ ಸವಿಯುವಾಗಲೆಲ್ಲಾ ಅಸ್ಸಾಮಿನ ಚಹಾ ತೋಟಗಳಲ್ಲಿ ತೊಟ್ಟಿಕ್ಕಿರುವ ವಲಸಿಗರ ಬೆವರಿನ ಹನಿಗಳು ನೆನಪಾಗದೆ ಹೋದರೆ ನಾವು ಮನುಷ್ಯರೆಂದು ಭಾವಿಸಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ನೆಲಸಮವಾದ 250 ಜೋಪಡಿಗಳಲ್ಲಿ ವಾಸಿಸುತ್ತಿದ್ದವರು ಬದುಕಿನ ಅನಿವಾರ್ಯತೆಗಳಿಗೆ ಕಟ್ಟುಬಿದ್ದು ತಮ್ಮ ಒಂದು ಹೊತ್ತಿನ ಕೂಳಿಗಾಗಿ ಶ್ರಮಿಸುವವರು. ಇವರ ಶ್ರಮದ ಫಲ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ರಕ್ತದ ಕಣಗಳಲ್ಲಿ ಹರಿಯುತ್ತಿರುತ್ತದೆ. ನಮ್ಮ ಸಂಸದರು ಹೇಳಿದಂತೆ ಇವರ ಎದೆ ಬಗೆದರೆ ಅಕ್ಷರ ಕಾಣುವುದಿಲ್ಲ ಆದರೆ ಬದುಕಲು ಬೇಕಾದ ಅಕ್ಕರೆ ಧಾರಾಳವಾಗಿ ಕಾಣುತ್ತದೆ. ಇವರ ಬೆವರಿಗೆ, ಶ್ರಮದ ಹನಿಗೆ ಜಾತಿ ಧರ್ಮಗಳ ಭೇದ ಭಾವ ಇರುವುದಿಲ್ಲ. ನಮ್ಮ ತಳಪಾಯ ನಿರ್ಮಿಸಲು ಅವರ ಶ್ರಮದ ಹನಿಗಳು ತೊಟ್ಟಿಕ್ಕುವಾಗ ನಮಗೂ ಈ ಭೇದ ಭಾವ ಕಾಣುವುದಿಲ್ಲ. ಆದರೆ ನಮ್ಮ ಹಿತವಲಯ ಸಿದ್ಧವಾದ ಕೂಡಲೇ ನಮ್ಮ ಪಾಲಿಗೆ ಅವರು ಅನ್ಯರಾಗಿಬಿಡುತ್ತಾರೆ. ಜೆಸಿಬಿ ನೆನಪಾಗಿಬಿಡುತ್ತದೆ.

 ನಿರ್ಗತಿಕರಾಗಿರುವ ಬೆಳ್ಳಂದೂರು ವಲಯದ 250 ಕುಟುಂಬಗಳು ಈಗ ತಮ್ಮ ದಾಖಲೆಗಳನ್ನು ಹಿಡಿದು, ಕೂಲಿನಾಲಿಯನ್ನು ಮರೆತು, ಬಿಸಿಲಿನ ಝಳದಲ್ಲಿ ಗಂಟೆಗಟ್ಟಲೆ ಸಾಲುಗಟ್ಟಿ ನಿಂತು ನಾವು ಈ ದೇಶದ ಪೌರರು ಎಂದು ಸಾಬೀತುಪಡಿಸಬೇಕಾಗುತ್ತದೆ. ಮುಸ್ಲಿಮರಾಗಿ ದಾಖಲೆ ಇಲ್ಲದಿದ್ದರೆ ನಿರಾಶ್ರಿತ ಶಿಬಿರಗಳಲ್ಲಿ ಬಂದಿಗಳಾಗಬೇಕಾಗುತ್ತದೆ. ಅವರ ಶ್ರಮದ ಫಲವನ್ನು ಉಂಡು ಸವಿದು ಚಪ್ಪರಿಸಿದ ಹಿತವಲಯದ ಮನುಷ್ಯರಿಗೆ ಇವರ ನೋವೂ ಅರ್ಥವಾಗುವುದಿಲ್ಲ, ಇವರ ವೇದನೆಯೂ ಅರ್ಥವಾಗುವುದಿಲ್ಲ. ಏಕೆಂದರೆ ಈ ಬಡಪಾಯಿಗಳ ಗುಂಪಿನಲ್ಲಿ ಬಹಿಷ್ಕೃತರೇ ಹೆಚ್ಚಾಗಿರುತ್ತಾರೆ. ಇವರ ನೋವುಗಳು ಸಮಾಜದ ನೋವುಗಳು ಎಂದು ಭಾವಿಸುವ ಪ್ರಜ್ಞೆಯನ್ನೇ ಭಾರತದ ಸುಶಿಕ್ಷಿತ ಸಮಾಜ ಬೆಳೆಸಿಕೊಂಡಿಲ್ಲ. ರಸ್ತೆ ಅಗಲೀಕರಣಕ್ಕೆ ತಮ್ಮ ಮನೆಯ ಕಾಂಪೌಂಡ್ ಗೋಡೆ ಕೆಡವಬೇಕಾದರೆ ಜಗತ್ತನ್ನೇ ಶಪಿಸುವ ಮಧ್ಯಮ ವರ್ಗಗಳು, ಶ್ರೀಮಂತರು ತಮ್ಮ ಮನೆಯ ನಿರ್ಮಾಣದಲ್ಲಿ ತಮ್ಮ ಬೆವರಿನ ಕಣಗಳನ್ನು ಬೆರೆಸಿ ನಿರ್ಗತಿಕರಾಗುವ ಶ್ರಮಿಕರ ಬವಣೆಯ ಬಗ್ಗೆ ಚಿಂತಿಸುವುದೇ ಇಲ್ಲ. ಇಲ್ಲಿ ಬೀದಿಪಾಲಾದವರಿಗೆ ಯಾವ ಮತಧರ್ಮದ ಅಸ್ಮಿತೆಯನ್ನೂ ಲಗತ್ತಿಸುವುದಿಲ್ಲ. ಆದರೆ ಜಾತಿಯ ಹಣೆಪಟ್ಟಿ ಅಂಟಿಸಿಬಿಡುತ್ತಾರೆ. ಹಾಗಾಗಿ ಶೋಷಿತ ವರ್ಗಗಳಿಗಾಗಿ ಹೋರಾಡುವ ದನಿಗಳು ಇವರ ಬಳಿ ಬರುತ್ತವೆ, ಹಿಂದೂ ರಾಷ್ಟ್ರದ ಅಬ್ಬರದ ದನಿಗಳು ಕಣ್ಮರೆಯಾಗುತ್ತವೆ.

ನಾವು ಬದುಕುತ್ತಿರುವ ಸುಶಿಕ್ಷಿತ, ಅತ್ಯಾಧುನಿಕ, ತಂತ್ರಜ್ಞಾನ ಕೇಂದ್ರಿತ ಸಮಾಜದಲ್ಲಿ ಈ ಮಟ್ಟಿಗೆ ನಿಷ್ಕಾಳಜಿ, ನಿಷ್ಕ್ರಿಯತೆ ಮತ್ತು ಅಮಾನವೀಯ ಕ್ರೌರ್ಯ ಅಡಗಿದೆ ಎಂದರೆ ನಾವು ನಾಚಿಕೆಯಿಂದ ತಲೆತಗ್ಗಿಸಬೇಕಾಗಿದೆ. ಜೆಸಿಬಿ ಇರುವುದು ನಮ್ಮ ವಿದ್ಯಾವಂತ ಸಮಾಜದ ಆಂತರ್ಯದಲ್ಲಿ, ಜೋಪಡಿಗಳನ್ನು ಉರುಳಿಸುವ ಜೆಸಿಬಿ ನಿಮಿತ್ತ ಮಾತ್ರ. ಮಣ್ಣೊಡನೆ ಮಣ್ಣಾಗಿ, ಮಣ್ಣ ಕಣಗಳೊಡನೆ ಬೆರೆತು ತಮ್ಮ ಬೆವರು ನೆತ್ತರು ಹರಿಸಿ ಸುಂದರ ನಗರಗಳನ್ನು ನಿರ್ಮಿಸುವ, ಸುಂದರ ಜೀವನವನ್ನು ಕಲ್ಪಿಸುವ ಶ್ರಮಜೀವಿಗಳ ನಿಟ್ಟುಸಿರಿಗೆ ಈ ಸುಶಿಕ್ಷಿತ ಸಮಾಜ ಏನೆಂದು ಸಾಂತ್ವನ ಹೇಳಲು ಸಾಧ್ಯ? ಆಡಳಿತ ವ್ಯವಸ್ಥೆಯಲ್ಲಿ ಮಾನವೀಯತೆಯನ್ನು ಶೋಧಿಸುವ ಮುನ್ನ ನಾವೇ ಕನ್ನಡಿಯ ಮುಂದೆ ನಿಂತು ನಮ್ಮ ಮುಖಭಾವವನ್ನು ನೋಡಿಕೊಳ್ಳೋಣ. ಕೊನೆಯ ಹನಿ:

ನೆಲ ಸಮ ಮಾಡಲು ಜೆಸಿಬಿ ಬಾಗಿಲ ಹೊರಗೆ ನಿಂತಿತ್ತು

ನೆಲ ಗುಡಿಸುತ್ತಿದ್ದವ ಕೇಳಿದ, ಸಮ ಎಂದರೇನು?

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News