ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಂಡ 72 ವಯಸ್ಸಿನ ಪ್ರತಿಭಟನಾಕಾರ

Update: 2020-01-25 04:08 GMT

ಇಂಧೋರ್, ಜ.25: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ 72 ವರ್ಷ ವಯಸ್ಸಿನ ರಮೇಶ್ಚಂದ್ರ ಪ್ರಜಾಪತ್ ಎಂಬುವವರು ಪ್ರತಿಭಟನೆ ವೇಳೆ ಜನನಿಬಿಡ ರಸ್ತೆಯಲ್ಲಿ ಸಾರ್ವಜನಿಕರ ಎದುರಲ್ಲೇ ಬೆಂಕಿ ಹಚ್ಚಿಕೊಂಡ ಘಟನೆ ವರದಿಯಾಗಿದೆ. ತೀವ್ರ ಸುಟ್ಟ ಗಾಯಗಳಾಗಿರುವ ಅವರು ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಪ್ರಜಾಪತ್, ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಎಂ) ಕಾರ್ಯಕರ್ತ ಎನ್ನಲಾಗಿದೆ.

ಶೇಕಡ 90ರಷ್ಟು ಸುಟ್ಟ ಗಾಯಗಳಾಗಿರುವ ಪ್ರಜಾಪತ್ ಎಂವೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಧೋರ್‌ನ ಗೀತಾಭವನ ಕ್ರಾಸಿಂಗ್ ಬಳಿ ಶುಕ್ರವಾರ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದಾಗ ಪ್ರಜಾಪತ್ ಬೆಂಕಿ ಹಚ್ಚಿಕೊಂಡರು ಎಂದು ತಿಳಿದುಬಂದಿದೆ.

"ಅವರ ಆರೋಗ್ಯಸ್ಥಿತಿ ತೀರಾ ಗಂಭೀರವಾಗಿದೆ. ಅವರ ಹೇಳಿಕೆ ದಾಖಲಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರೇ ಬೆಂಕಿ ಹಚ್ಚಿಕೊಂಡಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ" ಎಂದು ತೂಕೊಗಂಜ್ ಠಾಣೆಯ ಅಧಿಕಾರಿ ನಿರ್ಮಲ್ ಶ್ರೀನಿವಾಸ್ ಹೇಳಿದ್ದಾರೆ. ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿರುದ್ಧದ ಕರಪತ್ರಗಳು ಪ್ರಜಾಪತ್ ಅವರ ಜೇಬಿನಲ್ಲಿದ್ದವು ಎಂದು ವಿವರಿಸಿದ್ದಾರೆ.

ನಿವೃತ್ತ ಸರ್ಕಾರಿ ಅಧಿಕಾರಿಯಾಗಿರುವ ಪ್ರಜಾಪತ್, ಬೆಂಕಿ ಹಚ್ಚಿಕೊಳ್ಳಲು ಕಾರಣವೇನು ಎನ್ನುವುದು ತಿಳಿದಿಲ್ಲ ಎಂದು ಸಿಪಿಎಂ ಮುಖ್ಯಸ್ಥ ಕೈಲಾಶ್ ಲಿಂಬೋಡಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News