ಬಿತ್ತನೆ ಬೀಜ ಕಾಯ್ದೆಯಿಂದ ರೈತರಿಗೆ ಮಾರಣಾಂತಿಕ ಹೊಡೆತ: ಕುರುಬೂರು ಶಾಂತಕುಮಾರ್

Update: 2020-01-25 18:45 GMT

ಮೈಸೂರು,ಜ.25: ಕೇಂದ್ರ ಸರ್ಕಾರ ಬಿತ್ತನೆ ಬೀಜ ಕಾಯ್ದೆ ತರಲು ಹೊರಟಿದೆ. ಬಿತ್ತನೆ ಬೀಜ ಕಾಯ್ದೆ ಜಾರಿಯಾದರೆ ರೈತರಿಗೆ ಮಾರಣಾಂತಿಕ ಹೊಡೆತ ಬೀಳಲಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿತ್ತನೆ ಬೀಜ ಕಾಯ್ದೆ ಜಾರಿಯಾದರೆ ಬೀಜ ಉತ್ಪಾದನೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಬಹುರಾಷ್ಟ್ರೀಯ ಕಂಪನಿಗಳ ಪಾಲಾಗಲಿವೆ. ಹೀಗಾಗಿ ಬೀಜ ಕಾಯ್ದೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಜನವರಿ 30 ರಂದು ಮೈಸೂರಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹಲವಾರು ತಜ್ಞರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ಸಂಕಿರಣದ ಚರ್ಚೆಯಾಗಿ ನಮ್ಮ ನಿಲುವನ್ನು ಸರ್ಕಾರಕ್ಕೆ ತಿಳಿಸಬೇಕಿದೆ ಎಂದು ತಿಳಿಸಿದರು.

ರೈತರು ತಾವೆ ಬೀಜ ಉತ್ಪಾದನೆ ಮಾಡಿ ವ್ಯವಸಾಯ ಮಾಡುತ್ತಿದ್ದರು. ಈ ಕಾಯ್ದೆ ಬಂದರೆ ರೈತರು ಬಹುರಾಷ್ಟ್ರೀಯ ಕಂಪನಿಗಳ ಗುಲಾಮರಾಗಬೇಕಾಗುತ್ತದೆ. ಪರಂಪರಾನುಗತವಾಗಿ ಬಿತ್ತನೆ ಬೀಜಗಳನ್ನು ಬೇರೊಬ್ಬ ರೈತನಿಂದ ಖರೀದಿಸುತ್ತಿದ್ದರು. ಈ ಕಾಯ್ದೆ ಜಾರಿಯಾದರೆ ಇದು ರೈತನಿಗೆ ಹೊಡೆತ ಬೀಳಲಿದೆ. ಬೀಜ ಉತ್ಪಾದನೆಯನ್ನ ಬಹುರಾಷ್ಟ್ರೀಯ ಕಂಪನಿಗಳು ಮಾಡುವುದರಿಂದ ಬೆಲೆ ತಾರತಮ್ಯ ಮಾಡುತ್ತವೆ. ಬೆಲೆ ನಿಯಂತ್ರಣ ಇಲ್ಲದೆ ತಮಗಿಷ್ಟ ಬಂದ ಬೆಲೆಯಲ್ಲಿ ಬೀಜ ಮಾರಾಟ ಮಾಡುತ್ತವೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಲಿದೆ ಎಂದು ಕುರುಬೂರು ಶಾಂತಕುಮಾರ್  ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ರಾಂತ ಕುಲಪತಿ ಎಸ್.ಬಿ.ದಂಡಿನ್, ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ತಾಲೂಕು ಕಾರ್ಯದರ್ಶಿ ಬರಡನಪುರ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News