ಭೀಮಾ ಕೊರೆಗಾಂವ್ ಪ್ರಕರಣದ ತನಿಖೆ ಎನ್‌ಐಎಗೆ ಹಸ್ತಾಂತರಕ್ಕೆ ವಿರೋಧ

Update: 2020-01-25 19:48 GMT

ಮುಂಬೈ, ಜ.25: ಭೀಮಾ-ಕೊರೆಗಾಂವ್ ಹಿಂಸಾಚಾರ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿರುವುದನ್ನು ಖಂಡಿಸಿರುವ ಕಾಂಗ್ರೆಸ್ ಮತ್ತು ಎನ್‌ಸಿಪಿ, ತನಿಖೆಯನ್ನು ಎನ್‌ಐಎಗೆ ಹಠಾತ್ ವರ್ಗಾಯಿಸಿರುವುದು ಬಿಜೆಪಿಯ ಪಿತೂರಿಯನ್ನು ದೃಢಪಡಿಸಿದೆ ಎಂದು ಹೇಳಿದೆ.

   ಮಹಾರಾಷ್ಟ್ರದಲ್ಲಿ ಈ ಹಿಂದಿನ ಬಿಜೆಪಿ ನೇತೃತ್ವದ ಸರಕಾರ ಮಾಡಿದ್ದ ತಪ್ಪುಗಳನ್ನು ಮುಚ್ಚಿಡುವ ಕೇಂದ್ರ ಸರಕಾರದ ತಂತ್ರ ಇದಾಗಿದೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರಕಾರ ಅಸ್ತಿತ್ವಕ್ಕೆ ಬಂದು ಪುಣೆ ಪೊಲೀಸರ ವಿಚಾರಣೆಯ ಬಗ್ಗೆ ಮರು ತನಿಖೆಗೆ ಆದೇಶಿಸಿದೊಡನೆ ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣವನ್ನು ಕೇಂದ್ರ ಸರಕಾರ ಎನ್‌ಐಎಗೆ ವಹಿಸಿರುವುದು ಬಿಜೆಪಿಯ ಪಿತೂರಿಗೆ ಉದಾಹರಣೆಯಾಗಿದೆ. ಈ ಪ್ರಕರಣ ಎನ್‌ಐಎ ವ್ಯಾಪ್ತಿಗೆ ಬರುತ್ತದೆ ಎಂದು ಅರಿವಾಗಲು 2 ವರ್ಷ ಬೇಕಾಯಿತೇ? ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಈ ಹಿಂದಿನ ಬಿಜೆಪಿ ನೇತೃತ್ವದ ಸರಕಾರ ಮಾಡಿದ್ದ ತಪ್ಪುಗಳನ್ನು ಮುಚ್ಚಿಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎನ್‌ಸಿಎ ವಕ್ತಾರ ನವಾಬ್ ಮಲಿಕ್ ಆರೋಪಿಸಿದ್ದಾರೆ.

 ಪುಣೆ ಪೊಲೀಸರು ತನಿಖೆ ನಡೆಸುತ್ತಿದ್ದ ಪ್ರಕರಣವನ್ನು ಎನ್‌ಐಎಗೆ ವಹಿಸಿ ಕೊಡುವುದಾಗಿ ಕೇಂದ್ರ ಸರಕಾರ ಶುಕ್ರವಾರ ಘೋಷಿಸಿದೆ. ಪ್ರಕರಣದಲ್ಲಿ ಪುಣೆ ಪೊಲೀಸರ ಕ್ರಮಗಳನ್ನು ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಬೇಕೆಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News