ಉತ್ತಮ ಕಾರಣಕ್ಕಾಗಿ ಹೋರಾಡುವಾಗ ಅಹಿಂಸೆಯನ್ನು ಮರೆಯಬಾರದು: ರಾಮನಾಥ ಕೋವಿಂದ್

Update: 2020-01-25 19:59 GMT

ಹೊಸದಿಲ್ಲಿ, ಜ.25: ಯುವಜನತೆ ಉತ್ತಮ ಕಾರಣಕ್ಕಾಗಿ ಹೋರಾಟ, ಪ್ರತಿಭಟನೆ ನಡೆಸುವಾಗ ಅಹಿಂಸೆಯನ್ನು ಮರೆಯಬಾರದು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.

ದೇಶದ 71ನೇ ಗಣರಾಜ್ಯೋತ್ಸವದ ಮುನ್ನಾ ದಿನ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನದ ಆಶಯ, ಆದರ್ಶವನ್ನು ಎತ್ತಿಹಿಡಿಯಲು ಒತ್ತು ನೀಡಬೇಕಾಗಿದೆ ಎಂದರು. ಸ್ವತಂತ್ರ್ರ ಪ್ರಜಾಪ್ರಭುತ್ವ ದೇಶದ ಪೌರರಾಗುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಇದೇ ವೇಳೆ, ಸಂವಿಧಾನದ ಸಿದ್ಧಾಂತವನ್ನು ಪಾಲಿಸುವ ಜವಾಬ್ದಾರಿಯನ್ನೂ ನೀಡಿದೆ. ಯುವಜನತೆ ಉತ್ತಮ ಕಾರಣಕ್ಕಾಗಿ ಹೋರಾಟ ನಡೆಸುವಾಗ ಮಹಾತ್ಮಾ ಗಾಂಧೀಜಿಯವರ ಕೊಡುಗೆಯಾದ ಅಹಿಂಸೆಯನ್ನು ಎಂದಿಗೂ ಮರೆಯಬಾರದು ಎಂದು ರಾಷ್ಟ್ರಪತಿ ಹೇಳಿದರು.

 ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜೀವನ ಮತ್ತು ಅವರ ಆದರ್ಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಸಂವಿಧಾನದ ಆದರ್ಶಗಳನ್ನು ಪಾಲಿಸಲು ಸುಲಭವಾಗುತ್ತದೆ.

      ದೇಶದ ಸಮಗ್ರ ಭಾಗದ ಅಭಿವೃದ್ಧಿಗೆ ಸರಕಾರ ಕಾರ್ಯ ನಿರ್ವಹಿಸುತ್ತಿದೆ. ಹೀಗೆ ಮಾಡುವ ಮೂಲಕ ಗಾಂಧೀಜಿಯವರ 150ನೇ ಜನ್ಮದಿನಾಚರಣೆಗೆ ಒಂದು ಅರ್ಥಪೂರ್ಣ ಆಯಾಮ ಒದಗಿಸಬಹುದು . ಗಾಂಧೀಜಿಯವರ ಆದರ್ಶ ದೇಶದಲ್ಲಿ ಇಂದಿಗೂ ಪ್ರಸ್ತುತವಾಗಿದ್ದು ಸತ್ಯ ಮತ್ತು ಅಹಿಂಸೆಯ ಬಗ್ಗೆ ಅವರು ನೀಡಿದ ಸಂದೇಶವನ್ನು ಪಾಲಿಸುವ ಬಗ್ಗೆ ಜನಸಾಮಾನ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು . ಗಾಂಧೀಜಿಯವರ ‘ರಕ್ಷಾಯಂತ್ರ’ವನ್ನು ಸರಕಾರ ಮತ್ತು ವಿಪಕ್ಷಗಳು ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಬಳಸಬಹುದು ಎಂದು ಕೋವಿಂದ್ ಹೇಳಿದರು.

 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ಮತ್ತು ವಿಪಕ್ಷಗಳ ಪಾತ್ರ ಮಹತ್ತರವಾಗಿದೆ. ಇಬ್ಬರೂ ತಮ್ಮ ರಾಜಕೀಯ ವಿಚಾರಧಾರೆಯನ್ನು ಅನುಸರಿಸುವ ಜೊತೆಗೆ, ದೇಶದ ಅಭಿವೃದ್ಧಿ ಮತ್ತು ಜನರ ಕ್ಷೇಮಾಭ್ಯುದಯದ ನಿಟ್ಟಿನಲ್ಲಿ ಜತೆಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News