ಜೆಎನ್‌ಯು ವಿದ್ಯಾರ್ಥಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Update: 2020-01-26 14:37 GMT
 ಜೆಎನ್‌ಯು ಪ್ರತಿಭಟನೆ (ಫೈಲ್ ಚಿತ್ರ)

ಗುವಾಹತಿ: ಶಹೀನ್‌ಬಾಗ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಆಯೋಜಿಸಿದವರಲ್ಲಿ ಒಬ್ಬರಾದ ಜೆಎನ್‌ಯು ವಿದ್ಯಾರ್ಥಿ ಶರ್ಜಿಲ್ ಇಮಾಮ್ ವಿರುದ್ಧ ಅಸ್ಸಾಂ ಪೊಲೀಸರು ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ರಾಜ್ಯವನ್ನು ಭಾರತದಿಂದ ಪ್ರತ್ಯೇಕಿಸುವಂತೆ ಶರ್ಜಿಲ್ ಕರೆ ನೀಡಿದ್ದಾರೆ ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಶರ್ಜಿಲ್ ದೆಹಲಿಯ ಜೆಎನ್‌ಯುನಲ್ಲಿ ಆಧುನಿಕ ಭಾರತದ ಇತಿಹಾಸ ವಿಭಾಗದ ವಿದ್ಯಾರ್ಥಿ. ಅಪರಾಧ ಪಿತೂರಿ, ದೇಶದ್ರೋಹ ಮತ್ತು ವಿವಿಧ ಪ್ರದೇಶಗಳ ನಡುವೆ ದ್ವೇಷಭಾವನೆ ಹರಡಲು ಕುಮ್ಮಕ್ಕು ನೀಡಿದ ಆರೋಪವನ್ನು ಶರ್ಜಿಲ್ ವಿರುದ್ಧ ಹೊರಿಸಲಾಗಿದೆ.

ವಿದ್ಯಾರ್ಥಿ ಹೇಳಿಕೆಯನ್ನು ಖಂಡಿಸಿದ ಅಸ್ಸಾಂ ಸಚಿವ ಹೇಮಂತ್ ಬಿಸ್ವಾ ಶರ್ಮಾ, ಶಹೀನ್‌ಬಾಗ್ ಪ್ರತಿಭಟನೆಯು ಹಿಂದೂ, ಕ್ರಿಶ್ಚಿಯನ್, ಸಿಕ್ಖ್ ಮತ್ತು ಬೌದ್ಧರ ವಿರುದ್ಧ ಮುಸ್ಲಿಮರು ನಡೆಸಿದ ಪ್ರತಿಭಟನೆಯ ಮೊದಲ ನಿದರ್ಶನ ಎಂದು ಹೇಳಿದ್ದರು.

ಈತ ಅಲೀಗಢ ಮುಸ್ಲಿಂ ವಿವಿಯಲ್ಲಿ ನಡೆದ ಪ್ರತಿಭಟನೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದ ಎನ್ನುವುದು ಅಲೀಗಢ ಪೊಲೀಸರ ಹೇಳಿಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News