​ಯೂರೋಪಿಯನ್ ಒಕ್ಕೂಟದ 154 ಸಂಸದರಿಂದ ಸಿಎಎ ವಿರುದ್ಧ ನಿರ್ಣಯ

Update: 2020-01-26 17:44 GMT

ಹೊಸದಿಲ್ಲಿ, ಜ. 26: ಪೌರತ್ವ ತಿದ್ದುಪಡಿ ಕಾಯ್ದೆ ಭಾರತದಲ್ಲಿ ಪೌರತ್ವ ನಿರ್ಣಯಿಸುವ ರೀತಿಯ ಅಪಾಯಕಾರಿ ಬದಲಾವಣೆಯನ್ನು ಸೂಚಿಸಿದೆ. ಅಲ್ಲದೆ ಇದರಿಂದ ಜಗತ್ತಿನ ಅತಿ ದೊಡ್ಡ ದೊಡ್ಡ ಸಂಖ್ಯೆಯ ಜನರು ಪೌರತ್ವ ರಹಿತತೆಯ ಬಿಕ್ಕಟ್ಟು ಎದುರಿಸಲಿದ್ದಾರೆ ಹಾಗೂ ಜನರು ಅಪಾರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಐರೋಪ್ಯ ಒಕ್ಕೂಟದ 154 ಸದಸ್ಯರ ಐದು ಪುಟಗಳ ಕರಡು ವರದಿ ಹೇಳಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತೀವ್ರವಾಗಿ ಖಂಡಿಸಿ ಮುಂದಿನ ವಾರ ಬ್ರುಸೆಲ್‌ನಲ್ಲಿ ಆರಂಭವಾಗಲಿರುವ ಐರೋಪ್ಯ ಸಂಸತ್ತಿನ ಸಮಗ್ರ ಅಧಿವೇಶನದಲ್ಲಿ ಮಂಡಿಸಲು ಐರೋಪ್ಯ ಒಕ್ಕೂಟದ ಸದಸ್ಯರು ಈ ಕರಡು ರೂಪಿಸಿದ್ದಾರೆ.

 ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಾರತಮ್ಯ ಹಾಗೂ ವಿಭಜನಕಾರಿ ಎಂದು ಈ ಪ್ರಸ್ತಾಪಿತ ನಿರ್ಣಯ ವಿವರಿಸಿದೆ. ಅಲ್ಲದೆ, ಭಾರತ ಸರಕಾರ ಸಹಿ ಹಾಕಿದ ನಾಗರಿಕ ಹಾಗೂ ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂದ (ಐಸಿಸಿಪಿಆರ್) ಹಾಗೂ ಮಾನವ ಹಕ್ಕುಗಳ ಒಪ್ಪಂದದ ಅಡಿಯಲ್ಲಿ ‘‘ಅಂತಾರಾಷ್ಟ್ರೀಯ ಬಾಧ್ಯತೆ’’ಯನ್ನು ಈ ಕಾಯ್ದೆ ಉಲ್ಲಂಘಿಸುತ್ತದೆ ಎಂದು ಕೂಡ ಅದು ಹೇಳಿದೆ. ಯುರೋಪ್ ಸಂಸತ್‌ನ ಎರಡನೇ ಅತಿ ದೊಡ್ಡ ರಾಜಕೀಯ ಸಮಿತಿ ಎಂದು ಪರಿಗಣಿಸಲಾಗುವ 26 ಐರೋಪ್ಯ ಒಕ್ಕೂಟ ದೇಶಗಳ ಐರೋಪ್ಯ ಸಂಸತ್ತಿನ ಸದಸ್ಯರ ಪ್ರಗತಿಪರ ವೇದಿಕೆ ‘ಎಸ್ ಆ್ಯಂಡ್ ಡಿ ಗುಂಪು’ಗೆ ಈ 154 ಸಂಸದರು ಸೇರಿದ್ದಾರೆ.

 ಸಮಾನವಾಗಿ ಪೌರತ್ವ ಪಡೆಯಬೇಕಾಗಿರುವ ಲಕ್ಷಾಂತರ ಮುಸ್ಲಿಮರ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳಲು ಭಾರತ ಈ ಕಾನೂನು ಸೃಷ್ಟಿಸಿದೆ ಎಂದು ಈ ಸಂಸದರು ನಿರ್ಣಯದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹಲವು ಮುಸ್ಲಿಮರನ್ನು ಪೌರತ್ವ ರಹಿತರನ್ನಾಗಿ ಮಾಡಲು ರಾಷ್ಟ್ರೀಯ ಪೌರತ್ವ ನೋಂದಣಿಯೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬಳಸುವ ಬಗ್ಗೆ ಕೂಡ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಜನವರಿ 5ರಂದು ಈ ಸಂಸದರು ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು ಹಾಗೂ ಪ್ರತಿಭಟನಕಾರನ್ನು ಅಪರಾಧೀಕರಣಗೊಳಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದರು. ಅಲ್ಲದೆ, ಪ್ರತಿಭಟನಕಾರರೊಂದಿಗೆ ಆನುಸಂಧಾನ ನಡೆಸುವಂತೆ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News