ಕಲಬುರಗಿ: ಗಣರಾಜ್ಯೋತ್ಸವ ದಿನ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ

Update: 2020-01-26 13:26 GMT

ಕಲಬುರಗಿ, ಜ. 26: ಗಣರಾಜ್ಯೋತ್ಸವದ ದಿನದಂದೇ ಕೆಲವೊಂಡು ಕಿಡಿಗೇಡಿಗಳು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಹಿತ್ತಲ ಶಿರೂರ ಗ್ರಾಮದಲ್ಲಿ ನಡೆದಿದೆ.

ಶನಿವಾರ ಮಧ್ಯರಾತ್ರಿ ಕೆಲವೊಂದು ಕಿಡಿಗೇಡಿಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು, ಚಪ್ಪಲಿ ಕಟ್ಟಿ ಅವಮಾನಿಸಿರುವ ಘಟನೆ ನಡೆದಿದೆ. ಈ ಘಟನೆಯನ್ನು ಖಂಡಿಸಿ ಗ್ರಾಮದ ದಲಿತ ಸಂಘಟನೆಗಳ ಪ್ರಮುಖರು, ಯುವ ಜನರು ರವಿವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಈ ಅಮಾನೀಯವಾದ ಘಟನೆ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ಈ ಕೃತ್ಯವೆಸಗಿದವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ ರಾತ್ರಿ 2 ರ ಸುಮಾರಿಗೆ ವಿದ್ಯುತ್ ಕಡಿತವಾಗಿದ್ದ ವೇಳೆ ಈ ಘಟನೆ ನಡೆದಿದ್ದು, ಜೆಸ್ಕಾಂ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಇದರು.

ಗ್ರಾಮಕ್ಕೆ ದಲಿತ ಸಂಘಟನೆಗಳ ಪ್ರಮುಖರಾದ ಹಣಮಂತ ಯಳಸಂಗಿ, ಮಹಾದೇವ ಧನ್ನಿ, ಪ್ರಕಾಶ ಮೂಲಭಾರತಿ, ಸೂರ್ಯಕಾಂತ ಜಿಡಗಾ, ಧರ್ಮಾ ಬಂಗರಗಿ, ಮಲ್ಲಿಕಾರ್ಜುನ ಬೋಳಣಿ ಭೇಟಿ ನೀಡಿ ಅಂಬೇಡ್ಕರ್‌ಗೆ ಅವಮಾನ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಪಡಿಸಿದರು.

ಸಂವಿಧಾನಶಿಲ್ಪಿ ಅಂಬೇಡ್ಕರ್ ನೀಡಿದ ಸಂವಿಧಾನದ ಅಡಿಯಲ್ಲಿಯೇ ಎಲ್ಲರೂ ಇಂದು ಬದುಕುವಂತಾಗಿದೆ. ಮುಂದಿನ ದಿನಗಳಲ್ಲಿ ಇಂತಕ ವಿಧ್ವಂಸಕ ಕೃತ್ಯಗಳು ನಡೆಯದಂತೆ ತಾಲೂಕು ಆಡಳಿತ ಮುಂಜಾಗ್ರತೆ ವಹಿಸಬೇಕು. ದಲಿತರಿಗೆ ರಕ್ಷಣೆ ನೀಡಬೇಕು. ಗ್ರಾಪಂ ನಿಂದ 4 ಲಕ್ಷ ಅನುದಾನ ನೀಡಿ ಹೊಸ ಕಟ್ಟೆ ನಿರ್ಮಾಣ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಪಡಿಸಿದರು.

ಈ ವೇಳೆ ಗ್ರಾಮಕ್ಕೆ ಕಲಬುರಗಿಯ ಸಹಾಯಕ ಆಯುಕ್ತ ರಾಮಚಂದ್ರ ಗಡದೆ, ತಹಸೀಲ್ದಾರ್ ದಯಾನಂದ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಎಸ್ಪಿ ಭೇಟಿ ನೀಡಿ ಪರಿಶೀಲಿಸಿದರು. ಕಿಡಿಗೇಡಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News