ಹಲವು ಪ್ರಥಮಗಳಿಗೆ ಸಾಕ್ಷಿಯಾದ ಗಣರಾಜ್ಯೋತ್ಸವ ಪರೇಡ್: ಈ ಬಾರಿಯ ವಿಶೇಷತೆಗಳೇನು ಗೊತ್ತಾ?

Update: 2020-01-26 10:19 GMT

ಹೊಸದಿಲ್ಲಿ: ರಾಜಧಾನಿಯಲ್ಲಿ ರವಿವಾರ ಮುಂಜಾನೆ 71ನೇ ಗಣರಾಜ್ಯೋತ್ಸವ ಸಮಾರಂಭ ಅದ್ದೂರಿಯಾಗಿ ಆರಂಭವಾಯಿತು. ಬ್ರೆಝಿಲ್ ಅಧ್ಯಕ್ಷ ಜೈರ್ ಬೆಲ್ಸೊನಾರೊ ಅತಿಥಿಯಾಗಿದ್ದರು. ದೇಶದ ಸೇನೆ ಮತ್ತು ಸಾಂಸ್ಕೃತಿಕ ವೈವಿಧ್ಯಗಳ ಆಕರ್ಷಕ ಪರೇಡ್ ಗೆ ಈ ಸಮಾರಂಭ ವೇದಿಕೆಯಾಯಿತು ಹಾಗೂ ಈ ಬಾರಿಯ ಪರೇಡ್ ಹಲವು ಪ್ರಥಮಗಳನ್ನು ದಾಖಲಿಸಿತು.

ಹದಿನಾರು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಮತ್ತು ಆರು ವಿವಿಧ ಸಚಿವಾಲಯ, ಇಲಾಖೆಗಳ ಸ್ತಬ್ಧಚಿತ್ರಗಳು ಸೇರಿದಂತೆ ಒಟ್ಟು 22 ಸ್ತಬ್ಧಚಿತ್ರಗಳು ದೇಶದ ಸಮೃದ್ಧ ಸಾಂಸ್ಕೃತಿಕ ಪರಂಪರೆ ಹಾಗು ಆರ್ಥಿಕ ಪ್ರಗತಿಯನ್ನು ಬಿಂಬಿಸಿದವು.

1. ಕ್ಯಾಪ್ಟನ್ ಮೃಗಾಂಕ್ ಭಾರದ್ವಾಜ್ ನೇತೃತ್ವದಲ್ಲಿ ದನುಷ್ ಬಂದೂಕು ವ್ಯವಸ್ಥೆಯನ್ನು ಮೊಟ್ಟಮೊದಲ ಬಾರಿಗೆ ಪ್ರದರ್ಶಿಸಲಾಯಿತು. 155 ಮಿಲಿಮೀಟರ್/45 ಕ್ಯಾಲಿಬರ್‍ನ ಧನುಷ್ ಗನ್ ಸಿಸ್ಟಮ್, ದೇಶೀಯವಾಗಿ ಅಭಿವೃದ್ಧಿಪಡಿಸಲಾದ ವ್ಯವಸ್ಥೆಯಾಗಿದ್ದು, ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ ಇದನ್ನು ಅಭಿವೃದ್ಧಿಪಡಿಸಿದೆ. ಈ ಬಂದೂಕು ಗರಿಷ್ಠ 36.5 ಕಿಲೋಮೀಟರ್ ದೂರ ಸಾಮರ್ಥ್ಯ ಹೊಂದಿದ್ದು, ಆಟೋಮ್ಯಾಟಿಕ್ ಗನ್ ಅಲೈನ್‍ ಮೆಂಟ್ ಮತ್ತು ಪೊಸಿಷನಿಂಗ್ ಸೌಲಭ್ಯ ಹೊಂದಿದೆ.

2. ಸಂಪ್ರದಾಯವನ್ನು ಮುರಿದು ಪ್ರಧಾನಿ ನರೇಂದ್ರ ಮೋದಿಯವರು, ಹುತಾತ್ಮ ಯೋಧರಿಗೆ ಇಂಡಿಯಾ ಗೇಟ್ ಕಮಾನಿನ ಅಮರ್ ಜವಾನ್ ಜ್ಯೋತಿ ಬದಲಾಗಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗೌರವ ಸಮರ್ಪಿಸಿದರು.

3. ನಾಲ್ಕನೇ ಪೀಳಿಗೆಯ ಸೇನಾ ಅಧಿಕಾರಿಯಾಗಿರುವ ಕ್ಯಾಪ್ಟನ್ ತಾನ್ಯ ಶೇರ್‍ ಗಿಲ್, ಗಣರಾಜ್ಯೋತ್ಸವ ಪರೇಡ್‍ ನ ಪುರುಷರ ಪಡೆಯ ನೇತೃತ್ವ ವಹಿಸಿದ ಎರಡನೇ ಮಹಿಳೆ ಎನಿಸಿಕೊಂಡರು.

4. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‍ ನಲ್ಲಿ ಪಾಲ್ಗೊಂಡಿತ್ತು.

5. ಸಿಆರ್ ಪಿಎಫ್ ನ ಮಹಿಳಾ ತಂಡವು ಪ್ರಪ್ರಥಮ ಬಾರಿಗೆ ಮೈನವಿರೇಳಿಸುವ ಬೈಕ್ ಸಾಹಸಗಳನ್ನು ಪ್ರದರ್ಶಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News