ದೇಶ ಒಡೆಯಲು, ಸಾಮರಸ್ಯ ಕದಡಲು ಸಂಚು ನಡೆಯುತ್ತಿದೆ: ಸಚಿವ ಸಿ.ಟಿ.ರವಿ

Update: 2020-01-26 12:17 GMT

ಚಿಕ್ಕಮಗಳೂರು, ಜ .26: ಭಾರತ ಬ್ರಿಟೀಷರ ದಾಸ್ಯದಿಂದ ಮುಕ್ತವಾದ 1947, ಆ.15 ಮೊದಲ ಅನನ್ಯ ಕ್ಷಣವಾದರೆ, ಪ್ರಜಾಪ್ರಭುತ್ವದ ಮೂಲ ಬುನಾದಿಯಾದ ಸಂವಿಧಾನ ಅಸ್ತಿತ್ವಕ್ಕೆ ಬಂದ 1950, ಜ.26 ಮತ್ತೊಂದು ಅಮೃತಘಳಿಗೆಯಾಗಿದೆ. ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿದಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ತಮ್ಮ ಪಾಂಡಿತ್ಯವನ್ನು ಧಾರೆಯೆರೆದು ಭಾರತೀಯತೆಯನ್ನು ಒಳಗೊಂಡ ನಮ್ಮದೇ ಆದ ಸಂವಿಧಾನವನ್ನು ರಚಿಸಿ ದೇಶಕ್ಕೆ ಸಮರ್ಪಿಸಿರುವ ದಿನ ಭಾರತದ ಚರಿತ್ರೆಯಲ್ಲಿ ಸದಾ ಚಿರಸ್ಥಾಯಿಯಾಗಿರಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಕ್ಕರೆ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ಸುಭಾಶ್ಚಂದ್ರ ಭೋಸ್ ಜಿಲ್ಲಾ ಆಟದ ಮೈದಾನಲ್ಲಿ ನಡೆದ 71ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ಅವರು,  ಗಣರಾಜ್ಯೋತ್ಸವ ಕೇವಲ ಸಂಭ್ರಮದ ದಿನ ಮಾತ್ರವಲ್ಲ, ಪ್ರತೀ ಭಾರತೀಯನ ಪಾಲಿಗೂ ಆತ್ಮಾವಲೋಕನದ ಹಾಗೂ ಸಂಕಲ್ಪದ ಸುದಿನವೂ ಆಗಿದೆ ಎಂದ ಅವರು, ಭೂತಕಾಲದ ಪರಂಪರೆ, ವರ್ತಮಾನದ ಸಮಸ್ಯೆ-ಸಂಕಟ ಮತ್ತು ಭವಿಷ್ಯತ್ತಿನ ಕನಸು ಎಂಬ ತ್ರಿಕಾಲದ ಅರಿವು, ಸ್ಪಷ್ಟತೆ ಪ್ರತೀ ಪ್ರಜೆಗೂ ಮುಖ್ಯ. ಆ ತ್ರಿಕಾಲ ಜ್ಞಾನವೇ ಬದುಕಿನ ಯಶಸ್ಸು, ದೇಶದ ಸುಭಿಕ್ಷೆ-ಸಮೃದ್ಧಿಗೆ ದಾರಿ ದೀಪವಾಗಲಿದೆ. ಪರಂಪರೆಯ ಹೆಜ್ಜೆಗಳನ್ನು ಅನುಸರಿಸಿ ನಡೆಯುವುದು ನಾಗರಿಕರ ಆದ್ಯ ಕರ್ತವ್ಯ. ದೇಶದ ಘನತೆ, ಸಾರ್ವಭೌಮತೆಯನ್ನು ಎತ್ತಿಹಿಡಿಯುವುದು ಸರ್ವರ ಹೊಣೆಗಾರಿಕೆಯಾಗಿದೆ ಎಂದರು.

ಕೇಂದ್ರ ಸರಕಾರ ಸ್ಪಷ್ಟ ದಿಟ್ಟ ನಿಲುವಿನಿಂದ ಅನೇಕ ಕ್ರಮಗಳನ್ನು ಕೈಗೊಂಡಿದೆ. ಭಾರತೀಯರು ನಾವೆಲ್ಲ ಒಂದು ಎನ್ನುವ ನುಡಿಯನ್ನು ಸಾರ್ಥಕ ಮಾಡುವ ಕಾರ್ಯ ಮಾಡುತ್ತಿದೆ. ಇಂತಹ ಸಾರ್ಥಕ ಕಾರ್ಯಗಳನ್ನು ಹೃದಯಪೂರ್ವಕವಾಗಿ ಸ್ವಾಗತಿಸಿ ಭಾರತೀಯತೆಗೆ ಅಖಂಡ ಬೆಂಬಲದ ಅಗತ್ಯವಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿ, ತತ್ವ, ಸಿದ್ಧಾಂತಗಳಿಗೆ ಅಪಾರ ಮೌಲ್ಯ ಬರುವಂತೆ ಮಾಡುವಲ್ಲಿ ಪ್ರತಿಯೊಬ್ಬ ಪ್ರಜೆಯೂ ಪಾಲುದಾರರಾಗಬೇಕೆಂದ ಅವರು, ರಾಜಕೀಯ ಲಾಭಕ್ಕಾಗಿ ತಪ್ಪು ಅಭಿಪ್ರಾಯ ರೂಪಿಸುವ ಕೆಲಸ ದುರುದ್ದೇಶಪೂರಿತವಾಗಿ ನಡೆಯುತ್ತಿರುವುದು ದುರದೃಷ್ಟಕರ. ಸತ್ಯವನ್ನು ತಿಳಿಸುವ, ವೈರತ್ವ ದೂರಗೊಳಿಸುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕಾಗಿದೆ.

ದೇಶ ಕಟ್ಟಲು ಲಕ್ಷಾಂತರ ಹುತಾತ್ಮರ ಬಲಿದಾನಕ್ಕೆ ಈ ದೇಶ ಸಾಕ್ಷಿಯಾಗಿದೆ. ಆದರೆ ಪ್ರಸಕ್ತ ದೇಶ ಒಡೆಯಲು, ಸಾಮರಸ್ಯ ಕದಡಲು ಸಂಚು ನಡೆಯುತ್ತಿದೆ ಎಂದ ಸಿ.ಟಿ.ರವಿ,  ಪ್ರಸಕ್ತ ದೇಶವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಭಯೋತ್ಪಾದನೆಯದ್ದು ಒಂದು ಮಗ್ಗಲಾದರೆ, ಕೋಮುದಳ್ಳುರಿ, ಮತ ಮತಗಳ ನಡುವಿನ ಜಗ್ಗಾಟದ್ದು ಮತ್ತೊಂದು ಮಗ್ಗಲು. ದೇಶದ ಸಾರ್ವಭೌಮತೆಗೆ ಧಕ್ಕೆ ತರುತ್ತಿರುವ ಈ ಒಳ ಏಟುಗಳನ್ನು ನಾವೆಲ್ಲರೂ ಹತ್ತಿಕ್ಕಬೇಕಾಗಿದೆ. ದೇಶದ ಆಸ್ತಿ-ಭವಿಷ್ಯ ಆಗಿರುವ ಯುವಜನತೆಯನ್ನು ದಾರಿ ತಪ್ಪಿಸುವ ಕೆಲಸ ದೇಶಾದ್ಯಂತ ವ್ಯಾಪಕವಾಗಿ ನಡೆಯುತ್ತಿದೆ. ದೇಶವನ್ನು ಸಮಗ್ರ ದೃಷ್ಟಿಯಿಂದ ಸಂಪದ್ಭರಿತವಾಗಿ ಕಟ್ಟುವ ಕಾರ್ಯಗಳಿಗೆ ಅಡೆತಡೆ ನೀಡುವ ಪಿತೂರಿ ಎಲ್ಲೆಡೆ ಜೋರಾಗಿದೆ. ಈ ಪಿತೂರಿ-ದೇಶದ್ರೋಹದ ಮತ್ತು ದಾರಿತಪ್ಪಿಸುವ ಚಾಳಿಯವರಿಗೆ ತಕ್ಕ ಪಾಠ ಕಲಿಸುವ, ನವಭಾರತ ನಿರ್ಮಾಣದ ಕಾರ್ಯಕ್ಕೆ ಜೊತೆಯಾಗುವ ಸಂಕಲ್ಪ ತೊಡಲು ಈ ಗಣರಾಜ್ಯೋತ್ಸವದ ದಿನವೇ ಸೂಕ್ತವಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾದ ಮೇಲೆ ಎಲ್ಲಾ ಅಕಾಡೆಮಿ, ಪ್ರಾಧಿಕಾರ, ರಂಗಸಮಾಜ ಮತ್ತು ರಂಗಾಯಣಗಳಿಗೆ ಅರ್ಹರನ್ನು ಪಾರದರ್ಶಕವಾಗಿ ನೇಮಕ ಮಾಡಲಾಗಿದೆ. ಮೈಸೂರಿನಲ್ಲಿಯೇ ಶಾಸ್ತ್ರೀಯ ಕನ್ನಡ ಭಾಷೆಯ ಅತ್ಯುನ್ನತ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಅದಕ್ಕಾಗಿ ಮೂರು ಎಕರೆ ಭೂಮಿಯನ್ನು ಮೈಸೂರು ವಿವಿಯಿಂದ ಮಂಜೂರು ಮಾಡಲು ಸರಕಾರದ ಅನುಮತಿ ನೀಡಲಾಗಿದೆ. ಬೆಂಗಳೂರಿನ ಕಲಾ ಗ್ರಾಮದ ಅಂಗಳದಲ್ಲಿನ ಕಟ್ಟಡಗಳ ಕಾಮಗಾರಿಯ ನಿರ್ವಹಣೆಗಾಗಿ ಒಟ್ಟು 4 ಕೋಟಿ ರೂ. ಅನುದಾನವನ್ನು ಕನ್ನಡ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರು ಮಾಡಲಾಗಿದೆ. ನಾಡಿನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ, ವಿವಿಧ ಪ್ರಶಸ್ತಿಗಳನ್ನುನೀಡಿ ಗೌರವಿಸಲಾಗಿದೆ. ಮಾಗಡಿ ತಾಲೂಕಿನ ವೀರಾಪುರದಲ್ಲಿ ಸಿದ್ಧಗಂಗೆಯ  ಶಿವಕುಮಾರ ಸ್ವಾಮೀಜಿ ಹಾಗೂ ಬಿಡದಿ ತಾಲೂಕಿನ ಬಾನಂದೂರಿನಲ್ಲಿ ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ನೆನಪಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದ ಅವರು,  ಮೈಸೂರು ದಸರಾ, ಹಂಪಿ ಉತ್ಸವ, ಕದಂಬೋತ್ಸವ, ಆನೆಗೊಂದಿ ಉತ್ಸವ, ಕಲ್ಯಾಣ ಕರ್ನಾಟಕ ಉತ್ಸವ, ಬಾದಾಮಿ ಉತ್ಸವ, ಕಿತ್ತೂರು ಉತ್ಸವ, ಕರಾವಳಿ ಉತ್ಸವ, ಬೆಂಗಳೂರು ಹಬ್ಬ, ಹೊಯ್ಸಳ ಉತ್ಸವ, ದುರ್ಗದ ಉತ್ಸವಗಳನ್ನು ನಾಡಹಬ್ಬವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ರವಿ ಹೇಳಿದರು.

ಸರಕಾರ ನೂತನ ಪ್ರವಾಸೋದ್ಯಮ ನೀತಿಯನ್ನು ರೂಪಿಸಲು ಹಾಗೂ ಸ್ಥಗಿತಗೊಂಡಿದ್ದ ಗೋಲ್ಡನ್ ಚಾರಿಯೇಟ್ ರೈಲು ಸೇವೆ ಮರುಚಾಲನೆಗೆ ಕ್ರಮ ಕೈಗೊಂಡಿದೆ. ಜಮ್ಮು-ಕಾಶ್ಮೀರದಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲ್ ಸ್ಥಾಪನೆಗೆ ಅಲ್ಲಿನ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಬಾದಾಮಿ, ಬೇಲೂರು, ಹಂಪಿ ಹಾಗೂ ವಿಜಯಪುರಗಳಲ್ಲಿ ಸ್ಟಾರ್ ಹೊಟೇಲ್‍ಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವನ್ನು 75 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕರಣಗೊಳಿಸಲು ವರದಿ ತಯಾರಿಸಲಾಗಿದೆ. ಶಾಲಾ ಮಕ್ಕಳಿಗಾಗಿ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ 8.92 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

2019-20ನೇ ಸಾಲಿನ ಕಬ್ಬು ಬೆಳೆಗಾರರ ಬಾಕಿಯನ್ನು ಶೇ.99.70ರಷ್ಟು ಪಾವತಿಸಲು ಕ್ರಮವಹಿಸಿದ ಮೊದಲ ಸರಕಾರ ಬಿಜೆಪಿ ಸರಕಾರವಾಗಿದೆ ಎಂದ ಅವರು, ಮಂಡ್ಯ ಭಾಗದಲ್ಲಿ ಸ್ಥಗಿತಗೊಂಡಿದ್ದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಗುತ್ತಿಗೆ ನೀಡಿ ಪುನಾರಂಭಿಸಲು ಸಚಿವ ಸಂಪುಟದ ಅನುಮೋದನೆ ನೀಡಲಾಗಿದೆ. ಮೈಶುಗರ್ ಮಂಡ್ಯ ಕಾರ್ಖಾನೆ ಪುನಃಶ್ಚೇತನಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ರವಿ ತಿಳಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ್ದು, ಜಲಧಾರೆ ಯೋಜನೆಯಡಿಯಲ್ಲಿ 630 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿ ಅನುಷ್ಠಾನದಿಂದ ಜಿಲ್ಲೆಯ ಬಯಲುಸೀಮೆ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ನಿವಾರಣೆ ಆಗಲಿದೆ. 180 ಹಳ್ಳಿಗಳ ಕೆರೆ ತುಂಬಿಸುವ ಗೊಂದಿಹಳ್ಳ ಯೋಜನೆಯನ್ನು 1350 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. 30 ಕೋಟಿ ರೂ. ವೆಚ್ಚದಲ್ಲಿ ಕರಗಡ ಎರಡನೇ ಹಂತದ ಅಂದಾಜು ಪಟ್ಟಿ ಸಿದ್ಧಗೊಳಿಸಿ ಅನುಷ್ಠಾನಕ್ಕೆ ಕ್ರಮವಹಿಸಲಾಗಿದ್ದು, ಯಗಚಿಹಳ್ಳದಿಂದ ಭೈರಾಪುರ ಪಿಕಪ್ ಮೂಲಕ ಲಕ್ಯಾ, ಮಾದರಸನ ಕೆರೆ ಹಾಗೂ ಕಳಸಾಪುರ ಭಾಗದ ಕರೆಗಳಿಗೆ ನೀರು ಹರಿಸುವ ಹಾಗೂ ಹಿರೇಮಗಳೂರು ಕೆರೆಯಿಂದ ಕಣಿವೆದಾಸರಹಳ್ಳಿಯ ಕೆರೆಗೆ ನೀರು ತುಂಬಿಸುವ ಯೋಜನೆಗಳಿಗೆ ಸಮಗ್ರ ವಿಸ್ತೃತ ಯೋಜನಾ ವರದಿ ತಯಾರಿಸಲಾಗುತ್ತಿದೆ ಎಂದರು.

ಕಳಸ ಇನಾಂ ಭೂಮಿ ಹಾಗೂ ಡೀಮ್ಡ್ ಅರಣ್ಯ ವ್ಯಾಪ್ತಿಯ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗಿದೆ.  ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಂಡಿದ್ದು,ಸಖರಾಯಪಟ್ಟಣದಲ್ಲಿ ನಿವೇಶನ ಗುರುತಿಸಲಾಗಿದೆ. ಚಿಕ್ಕಮಗಳೂರು-ಬೇಲೂರು-ಹಾಸನ ರೈಲ್ವೆ ಪಥ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಭೂಸ್ವಾಧೀನ ಪ್ರಕ್ರಿಯೆ ಚಾಲನೆಯಲ್ಲಿದೆ. ಕಡೂರು-ಚಿಕ್ಕಮಗಳೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ಕಾರ್ಯ ನಡೆಯುತ್ತಿದೆ ಎಂದರು.

ಸಮಾರಂಭಕ್ಕೂ ಮುನ್ನ ವಿವಿಧ ಕವಾಯತು ತಂಡಗಳಿಂದ ಉಸ್ತುವಾರಿ ಸಚಿವ ರವಿ ಗೌರವವಂಧನೆ ಸ್ವೀಕರಿಸಿದರು. ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಗೃಹರಕ್ಷಕ ದಳ, ಅಗ್ನಿಶಾಮಕದಳ, ಅರಣ್ಯ ಇಲಾಖೆ, ಸಿವಿಲ್ ಪೊಲೀಸ್, ಎನ್‍ಸಿಸಿ, ಮಹಿಳಾ ಪೊಲೀಸ್, ಮಾಜಿ ಸೈನಿಕರು ಹಾಗೂ ಆಶಾ ಕಿರಣ ಅಂಧ ಮಕ್ಕಳ ಶಾಲಾ ಮಕ್ಕಳು ನಡೆಸಿಕೊಟ್ಟ ಪೆರೆಡ್‍ಗಳು ಸಮಾರಂಭದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಸಾಧಕ ಅಧಿಕಾರಿ, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಬಳಿಕ ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಮೂಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

ಇದೇ ವೇಳೆ ಕವಾಯತಿನಲ್ಲಿ ಅತ್ಯತ್ತಮ ಪ್ರದರ್ಶನ ನೀಡಿದ ಡಿ.ಎ.ಸಿ.ಜಿ ಪಾಲಿಟೆಕ್ನಿಕ್, ಜ್ಞಾನ ರಶ್ಮಿ ಪ್ರೌಢಶಾಲೆ ಉಪ್ಪಳ್ಳಿ, ಶಾಸಕರ ಮಾದರಿ ಶಾಲೆ ಬಸವನಹಳ್ಳಿ, ಸೆಂಟ್‍ಜೋಸೆಫ್ ಬಾಲಕಿಯರ ಫ್ರೌಢಶಾಲೆ ಹಾಗೂ ಆಶಾಕಿರಣ ಅಂಧ ಮಕ್ಕಳ ಶಾಲೆಗೆ ವಿಶೇಷ ಬಹುಮಾನ ನೀಡಲಾಯಿತು. ಸಮಾರಂಭದಲ್ಲಿ 2019-20ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಆರ್.ಬಿ.ಕರೇಗೌಡ, ಕಡೂರು ತಾಲೂಕಿನ ಗರ್ಜೆಯ ಪ್ರಾಥಮಿಕಆರೋಗ್ಯಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಸುಮ ಉಮೇಶ್, ಸಮಾಜಕಲ್ಯಾಣಇಲಾಖೆಯಉಪನಿರ್ದೇಶಕ ಮಲ್ಲಿಕಾರ್ಜುನ್, ಕನ್ನಡ ಮತ್ತು ಸಂಸ್ಕøತಿಇಲಾಖೆಯ ಸಹಾಯಕ ನಿರ್ದೇಶಕ ಡಾ.ರಮೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಮಂಜುಳಾ ಹುಲ್ಲಹಳ್ಳಿ,   ಜಿಲ್ಲಾಧಿಕಾರಿ ಕಚೇರಿಯ ಕಂದಾಯ ಇಲಾಖೆಯ ಹಿರಿಯ ಬೆರಳಚ್ಚುಗಾರ್ತಿ ಆಶಾಲತಾ, ಧಾರ್ಮಿಕದತ್ತಿಇಲಾಖೆಯ ಮುಜರಾಯಿಅಧೀಕ್ಷ ಶ್ರೀನಿವಾಸ್, ಕೈಗಾರಿಕೆ ಮತ್ತು ವಾಣಿಜ್ಯಇಲಾಖೆಯ ಕುಶಲ ಕರ್ಮಿ ತರಬೇತಿ ಸಂಸ್ಥೆಯ ಭೋದಕ ಎಸ್.ಬಿ.ಪರಮೇಶ್ವರಪ್ಪ, ಬ್ಯಾರವಳ್ಳಿ ಗ್ರಾಪಂ ಪಿಡಿಒ ಎಸ್.ಎಸ್.ಜಗನ್ನಾಥ್, ಜಿಪಂ ಡಿ ದರ್ಜೆ ನೌಕರ ಡಿ.ಹರೀಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎಸ್.ಎಲ್.ಧರ್ಮೇಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಟಪ್ಪ, ಶಾಸಕ ಎಂ.ಕೆ.ಪ್ರಾಣೇಶ್, ತಾಪಂ ಅಧ್ಯಕ್ಷ ಜಯಣ್ಣ, ಜಯಣ್ಣ, ಡಿಸಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಅಶ್ವತಿ, ಎಸ್ಪಿ ಹರೀಶ್ ಪಾಂಡೆ, ಬಿಎಸ್ಪಿ ಮುಖಂಡ ಕೆ.ಟಿ.ರಾಧಾಕೃಷ್ಣ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಅಧಿಕಾರಿಗಳು, ಜನಪ್ರತಿನಿಧಿಗಳು ಈ ವೇಳೆ ಉಪಸ್ಥಿತರಿದ್ದರು.

2019ರ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ತಿಂಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ಆದ ಹಾನಿಯನ್ನು ಸರಿಪಡಿಸಲು ಸರಕಾರ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮವಹಿಸಿವೆ. ಹಾನಿಗೊಂಡ ವಾಸ್ತವ್ಯದ ಮನೆಗಳ ನಿರ್ಮಾಣಕ್ಕೆ ಸರಕಾರ ಜಿಲ್ಲೆಗೆ ಈಗಾಗಲೇ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು,, ಪ್ರವಾಹದಿಂದ ಸಂಭವಿಸಿದ ಹಾನಿಯನ್ನು ಸರಿಪಡಿಸಲು ಮತ್ತು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಈಗಾಗಲೇ ಜಿಲ್ಲೆಗೆ ವಿವಿಧ ಹಂತಗಳಲ್ಲಿ 212 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಪಿ.ಎಂ.ಜಿ.ಎಸ್.ವೈ ಯೋಜನೆಯಲ್ಲಿ ಜಿಲ್ಲೆಯ 7 ತಾಲೂಕುಗಳಿಗೆ ತಲಾ 30 ಕಿ.ಮೀ.ಗಳಂತೆ ಒಟ್ಟು 210 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗಿದೆ. ಅಜ್ಜಂಪುರ ಮತ್ತು ಕಳಸ ತಾಲೂಕುಗಳಲ್ಲಿ ತಲಾ 30 ಕಿ.ಮೀ.ಗಳಂತೆ ರಸ್ತೆ ಅಭಿವೃದ್ಧಿಪಡಿಸಲು ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲೆಯ ಜನರ ಬಹುದಿನದ ಕನಸಾಗಿದ್ದ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಒಟ್ಟು 325 ಕೋಟಿ ರೂ. ಅನುದಾನದಲ್ಲಿ ವೈದ್ಯಕೀಯ ಕಾಲೇಜಿನ ಸ್ಥಾಪನೆಗೆ ಶೀಘ್ರದಲ್ಲಿಯೇ ಶಂಕುಸ್ಥಾಪನೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗುವುದು. ಇದರೊಂದಿಗೆ 170 ಕೋಟಿ ರೂ. ಅನುದಾನದಲ್ಲಿ ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಕಾರ್ಯ ಯೋಜನೆ ರೂಪಿಸಲಾಗಿದೆ.

 - ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News