ಸಂವಿಧಾನ ಸಾಮಾನ್ಯರಿಗೂ ಸಮಾನ ಅವಕಾಶ ನೀಡಿದೆ: ಸಚಿವೆ ಶಶಿಕಲಾ ಜೊಲ್ಲೆ

Update: 2020-01-26 12:55 GMT

ಕಾರವಾರ: ಡಾ. ಬಿ.ಆರ್. ಅಂಬೇಡ್ಕರವರ ನೇತೃತ್ವದಲ್ಲಿ ರಚಿಸಿದ ಸಂವಿಧಾನದಿಂದಾಗಿಯೇ ಸಾಮಾನ್ಯ ವ್ಯಕ್ತಿ ಸೇರಿದಂತೆ ಮಹಿಳೆಯರು ಕೂಡ ಇಂದು ರಾಜಕೀಯದಲ್ಲಿ ಪ್ರವೇಶಿಸಿ ಉನ್ನತ ಸ್ಥಾನಮಾನ ಅಲಂಕರಿಸಲು ಸಾಧ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ರವಿವಾರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ 71 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ವಿಶ್ವದಲ್ಲಿಯೇ ಭಾರತದ ಸಂವಿಧಾನ ಅತಿ ದೊಡ್ಡ  ಸಂವಿಧಾನವಾಗಿದೆ. ವಿವಿಧತೆಯಲ್ಲಿ ಏಕತೆ ಸಾಧಿಸಲು ಸಹಕಾರಿಯಾಗಿರುವುದರಿಂದ ದೇಶದ ಪ್ರತಿಯೊಬ್ಬ ನಾಗರಿಕನು ಸಂವಿಧಾನಕ್ಕೆ ಬದ್ದವಾಗಿರುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು.

ರಾಜ್ಯ ಸರಕಾರದ ಎಲ್ಲ ಯೋಜನೆಗಳು ಜನರಿಗೆ ತಲುಪುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಕಳೆದ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸಂಭವಿಸಿದ ಪ್ರವಾಹವನ್ನು ಜಿಲ್ಲಾಡಳಿತ ಉತ್ತಮವಾಗಿ ಎದುರಿಸಿ, ರಕ್ಷಣಾ ಕಾರ್ಯಾಚರಣೆ ಮೂಲಕ 9,013 ಜನರನ್ನು ಪ್ರವಾಹದಿಂದ ರಕ್ಷಿಸಿದೆ. ಪ್ರವಾಹದಲ್ಲಿ ಮೃತಪಟ್ಟ 4 ಜನರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಿಸಲಾಗಿದೆ. 322 ಜಾನುವಾರು ಹಾನಿಗೆ 62.1 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು.

ಹಾನಿಗೀಡಾದ ಮನೆಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಣ ಮಾಡಿ  ಮನೆಗಳ ನವನಿರ್ಮಾಣ ಹಾಗೂ ದುರಸ್ಥಿಗಾಗಿ ಒಟ್ಟಾರೆಯಾಗಿ ಇದುವರೆಗೂ 19.23 ಕೋಟಿ ರೂ. ಸಂತ್ರಸ್ಥರಿಗೆ ಮಂಜೂರು ಮಾಡಲಾಯಿತು ಅಲ್ಲದೇ ಬೆಳೆ ಹಾನಿಗೆ ಇದುವರೆಗೂ 1743 ರೈತ ಫಲಾನುಭವಿಗಳಿಗೆ 13.88 ಕೋಟಿ ರೂ.ಗಳನ್ನು ಪರಿಹಾರವನ್ನು ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಿದೆ. ಜಿಲ್ಲೆಯ ಕರಾವಳಿಯ ಜನರ ಜೀವನಾಡಿಯಾಗಿರುವ ಮೀನುಗಾರಿಕೆಯು ಸಹ ಪ್ರವಾಹದ ಸಮಯದಲ್ಲಿ ಸ್ಥಬ್ಧವಾದಾಗ, ಪರಿಹಾರದ ನಿಟ್ಟಿನಲ್ಲಿ 168 ದೋಣಿಗಳಿಗೆ ರೂ. 41.62 ಲಕ್ಷ ಹಾಗೂ 460 ಬಲೆಗಳಿಗೆ ರೂ. 57.17 ಲಕ್ಷ ಮಂಜೂರು ಮಾಡಲಾಗಿದೆ ಎಂದರು.

ಆಕರ್ಷಕ ಪರೇಡ್: ಧ್ವಜಾರೋಹಣ ಬಳಿಕ ಸಚಿವರು ತೆರೆದ ಜೀಪ್‍ನಲ್ಲಿ ಎಲ್ಲಾ ತುಕಡಿಗಳ ಗೌರವ ವಂದನೆ ಸ್ವೀಕರಿಸಿದರು. 16 ವಿವಿಧ ತುಕಡಿಗಳ ಪಥಸಂಚಲನ ಆಕರ್ಷಕವಾಗಿದ್ದವು. ಪಥ ಸಂಚಲನದಲ್ಲಿ ಸೆಂಟ್ ಜೊಸೆಫ್ ಎನ್.ಸಿ.ಸಿ ನೇವಲ್ ಪ್ರಥಮ, ಯುವಜನ ಮತ್ತು ಕ್ರೀಡಾ ಇಲಾಖೆ ದ್ವಿತೀಯ, ಸರಕಾರಿ ಪಾಲಿಟೆಕ್ ಕಾಲೇಜು ತೃತಿಯ ಸ್ಥಾನದಲ್ಲಿ ಬಹುಮಾನ ಪಡೆದವು.

ಪದ್ಮಶ್ರೀ ವಿಜೇತೆ ವೃಕ್ಷ ಮಾತೆಗೆ ಸನ್ಮಾನ: ದೇಶದ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಿಸಿ ಗೌಡಅವರಿಗೆ  ಜಿಲ್ಲಾಡಳಿತದ ಪರವಾಗಿ ಸಚಿವೆ ಸನ್ಮಾನಿಸಿ ಅಭಿನಂದಿಸಿದರು. ಮೆಚ್ಚುಗೆ ಗಳಿಸಿದ ಸಾಂಸ್ಕೃತಿಕ ಕಾರ್ಯಕ್ರಮ, ಶಾಲಾ ಮಕ್ಕಳ ದೇಶಿಯ ಜನಪದ ನೃತ್ಯ ರೂಪಕಗಳು, ನೃತ್ಯ ರೂಪಕಗಳು, ಸಾಂಸ್ಕೃತಿಕ ಕಾರ್ಯಕ್ರಮ ಜನರ ಗಮನ ಸೆಳೆಯುವ ಮೂಲಕ ಮೆಚ್ಚುಗೆ ಗಳಿಸಿದವು.

ಸರ್ವೋತ್ತಮ ಸೇವಾ ಪ್ರಶಸ್ತಿ: ಜಿಲ್ಲೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಹತ್ತುಜನ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ಸಚಿವರು ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಿದರು. ಅಂಕೋಲಾ ತಾಲೂಕಿನ ಅಚವೆ ಚನಗಾರ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಡಾ. ಲಲಿತಾ ಯು. ಎಚ್, ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್. ಪುರುಷೋತ್ತಮ, ಶಿರಸಿ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯ ಸತೀಶ ಹೆಗಡೆ, ಕುಮಟಾ ಲೋಕೋಪಯೋಗಿಇಲಾಖೆಯ ಶಶಿಕಾಂತ ಜನಾರ್ಧನ ಕೋಳೇಕರ, ಕಾರವಾರ ಭೂಮಾಪನ ಇಲಾಖೆಯ ಉಪನಿರ್ದೇಶಕ ರಾಜು ಪೂಜಾರಿ, ಜೊಯಿಡಾ ತಹಶೀಲ್ದಾರ ಕಚೇರಿಯ ಪ್ರಕಾಶ ಡಿ ಗೌಡ, ಕಾರವಾರ ಅರಣ್ಯ ಇಲಾಖೆಯ ರಾಘವೇಂದ್ರ ಎಮ್ ನಾಯ್ಕ, ಧಾರ್ಮಿಕ ದತ್ತಿ ಇಲಾಖೆಯ ರಾಧಾ ಬಿ. ಶಿರಸಿಕರ, ಭಟ್ಕಳ ಸಹಾಯಕ ಆಯುಕ್ತರ ಕಚೇರಿಯ ರಾಜು ಕೃಷ್ಣಾ ನಾಯ್ಕ ಹಾಗೂ ಕಾರವಾರ ಕಂದಾಯ ಇಲಾಖೆಯ ಪ್ರಭಾಕರ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲೂಕು ಪಂಚಾಯತ್ ಅಧ್ಯಕ್ಷೆ ಪ್ರಮಿಳಾ ನಾಯ್ಕ, ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಶನ್ ಹಾಗೂ ಕಾರವಾರ ಉಪವಿಭಾಗಾಧಿಕಾರಿ ಎಂ. ಪ್ರೀಯಾಂಗಾ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News