‘ಅಸ್ಸಾಮನ್ನು ಬೇರ್ಪಡಿಸುವ ’ಹೇಳಿಕೆ: ಮಾಜಿ ಜೆಎನ್‌ಯು ವಿದ್ಯಾರ್ಥಿ ವಿರುದ್ಧ ಎಫ್‌ಐಆರ್

Update: 2020-01-26 14:37 GMT
 ಜೆಎನ್‌ಯು ಪ್ರತಿಭಟನೆ (ಫೈಲ್ ಚಿತ್ರ)

ಹೊಸದಿಲ್ಲಿ,ಜ.26: ಅಸ್ಸಾಮನ್ನು ಭಾರತದ ಇತರ ಭಾಗದಿಂದ ಬೇರ್ಪಡಿಸುವುದಾಗಿ ಬೆದರಿಕೆಯೊಡ್ಡಿದ ಆರೋಪದಲ್ಲಿ ದಿಲ್ಲಿಯ ಶಾಹೀನ್‌ ಬಾಗ್‌ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಯ ಸಂಘಟಕರಲ್ಲೊಬ್ಬರಾಗಿರುವ ಮಾಜಿ ಜೆಎನ್‌ಯು ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ವಿರುದ್ಧ ದಿಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಅಸ್ಸಾಂ ಪೊಲೀಸರು ಈಗಾಗಲೇ ಗುವಾಹಟಿಯಲ್ಲಿ ಇಮಾಮ್ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಇಮಾಮ್ ಅವರನ್ನೊಳಗೊಂಡ ವೀಡಿಯೊವೊಂದು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

‘ ನಮ್ಮ ಬಳಿ ಐದು ಲಕ್ಷ ಸಂಘಟಿತ ಜನರಿದ್ದರೆ ನಾವು ಈಶಾನ್ಯ ಭಾರತವನ್ನು ಶಾಶ್ವತವಾಗಿ ಅಥವಾ ಕನಿಷ್ಠ ಒಂದು ತಿಂಗಳ ಮಟ್ಟಿಗಾದರೂ ಭಾರತದಿಂದ ಬೇರ್ಪಡಿಸಬಹುದು. ಅಸ್ಸಾಮನ್ನು ಭಾರತದಿಂದ ಪ್ರತ್ಯೇಕಿಸುವುದು ನಮ್ಮ ಜವಾಬ್ದಾರಿಯಾಗಿದೆ,ಆಗ ಮಾತ್ರ ಅವರು (ಕೇಂದ್ರ) ನಮ್ಮ ಮಾತುಗಳನ್ನು ಆಲಿಸುತ್ತಾರೆ ’ಎಂದು ಇಮಾಮ್ ಹೇಳಿರುವುದು ವೀಡಿಯೊದಲ್ಲಿ ಕೇಳಿಬಂದಿದೆ. ಆದರೆ ಈ ವೀಡಿಯೊದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ ಎಂದು ಸುದ್ದಿಸಂಸ್ಥೆಯು ಹೇಳಿದೆ.

ಈ ವೀಡಿಯೊ ತುಣುಕಿನ ಕುರಿತು ಬಿಜೆಪಿ ಮತ್ತು ಆಪ್ ಶನಿವಾರ ಪರಸ್ಪರರ ವಿರುದ್ಧ ದಾಳಿಗಳನ್ನು ನಡೆಸಿದ್ದವು. ಪ್ರತಿಭಟನೆಗಳ ಕುರಿತು ದಿಲ್ಲಿಯ ಆಡಳಿತಾರೂಢ ಪಕ್ಷವಾಗಿರುವ ಆಪ್ ನಿಲುವನ್ನು ಬಿಜೆಪಿ ಗುರಿಯಾಗಿಸಿಕೊಂಡಿದ್ದರೆ,ಈ ವಿಷಯದಲ್ಲಿ ಸರಕಾರವೇಕೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆಪ್ ಪ್ರಶ್ನಿಸಿತ್ತು.

ಇಮಾಮ್ ಹೇಳಿಕೆಯಿಂದ ಅಂತರವನ್ನು ಕಾಯ್ದುಕೊಂಡಿರುವ ಶಾಹೀನ್‌ಬಾಗ್ ಪ್ರತಿಭಟನಾಕಾರರು,ಈ ಭಾಷಣವನ್ನು ಶಾಹೀನ್‌ ಬಾಗ್‌ ನಲ್ಲಿ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

  ‘ವಿವಾದಾಸ್ಪದ ಹೇಳಿಕೆಯನ್ನಾಗಲೀ ಭಾಷಣವನ್ನಾಗಲೀ ಶಾಹೀನ್‌ಬಾಗ್‌ನಲ್ಲಿ ಅಥವಾ ಸುತ್ತುಮುತ್ತಲಿನ ಪರಿಸರದಲ್ಲಿ ಮಾಡಲಾಗಿರಲಿಲ್ಲ ಎನ್ನುವುದನ್ನು ಪುನರುಚ್ಚರಿಸುವ ಅಗತ್ಯವುಂಟಾಗಿದೆ. ಇಂತಹ ಹೇಳಿಕೆಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಮತ್ತು ಶಾಹೀನ್‌ಬಾಗ್‌ನಲ್ಲಿ ಯಾವುದೇ ಸಂಘಟನಾ ಸಮಿತಿ,ನಾಯಕ ಅಥವಾ ಯಾವುದೇ ಓರ್ವ ನಿರ್ದಿಷ್ಟ ಸಂಘಟಕರಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಿದ್ದೇವೆ ’ಎಂದು ಅವರು ಹೇಳಿದ್ದಾರೆ.

ಮಕ್ಕಳು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವ ಕನಿಷ್ಠ 500 ಜನರು ಕಳೆದ 40 ದಿನಗಳಿಂದಲೂ ಶಾಹೀನ್‌ಬಾಗ್‌ನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News