ಚಿಕ್ಕಮಗಳೂರು: ಫಲಪುಷ್ಪಗಳಲ್ಲಿ ಅರಳಿದ ಕಲಾಕೃತಿಗೆ ಮೂಕವಿಸ್ಮಿತರಾಗುತ್ತಿರುವ ಜನತೆ

Update: 2020-01-26 16:11 GMT

ಚಿಕ್ಕಮಗಳೂರು, ಜ.26: ನಗರದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ರವಿವಾರ ಆಯೋಜಿಸಲಾಗಿದ್ದ ಫಲಪುಷ್ಟ ಪ್ರದರ್ಶನಲ್ಲಿ ಹೂವು ಹಣ್ಣುಗಳಲ್ಲಿ ಅರಳಿದ ಕಲೆ ಸಾರ್ವಜನಿಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ಅಸಂಖ್ಯ ಹೂವುಗಳಲ್ಲಿ ಮೂಡಿದ ಮಕರಂದ ಹೀರಲು ಝೆಂಕರಿಸುತ್ತಿರುವ ದುಂಬಿಗಳು, ಪೆಂಗ್ವಿನ್, ಕಲ್ಲಂಗಡಿಯಲ್ಲಿ, ಕುಂಬಳಕಾಯಿ ಮತ್ತಿತರ ಹಣ್ಣು, ತರಕಾರಿಗಳಲ್ಲಿ ಮೂಡಿದ ಮಹಾಪುರುಷರು, ಸಮಾಜಸೇವಕರು, ಕ್ರೀಡಾಪಟುಗಳು, ಗಾಯಕರು, ಹೂವಿನಲ್ಲಿ ಮೈದಾಳಿದ ಪ್ರಾಣಿಗಳೂ ಸೇರಿದಂತೆ ದೇಶ, ವಿದೇಶಗಳ ಹೂ, ಹಣ್ಣುಗಳು ನೋಡುಗರ ಮನಸೂರೆಗೊಂಡವು.

ತೋಟಗಾರಿಕೆ ಇಲಾಖೆ ಆವರಣದಲ್ಲಿ 71ನೆಯ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಕಚೇರಿ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಸೇವಂತಿ ಮತ್ತು ಆರ್ಕಿಡ್‍ನಲ್ಲಿ ಮೂಡಿರುವ ಬೃಹತ್ ಗಾತ್ರದ ಅನಾನಸ್ ನೋಡುಗರನ್ನು ಕೈಬೀಸಿ ಕರೆಯುತ್ತಿದ್ದು, ಫಲಪುಷ್ಪ ಪ್ರೇಮಿಗಳಿಗೆ ಸ್ವಾಗತ ಕೋರುತ್ತಿರುವ ದೃಶ್ಯ ಕಂಡು ಮೂಕವಿಸ್ಮಿತರಾಗುವಂತಹ ಅನುಭವ ಸಿಗುತ್ತದೆ. ಬಳಿಕ ಸಮತಟ್ಟು ಜಾಗದಲ್ಲಿ ಜೋಡಿಸಿಟ್ಟ ವಿವಿಧ ಜಾತಿಯ ಹೂವುಗಳು, ಹೂವಿನ ಗಿಡಗಳು ಕಾಲೇಜು ಯುವತಿಯರು, ಮಹಿಳೆಯರನ್ನು ಕದಲದಂತೆ ನಿಲ್ಲಿಸುವ ಸೊಬಗಿನಿಂದ ಮನ ತಣಿಸುತ್ತವೆ.

ಮುಖ್ಯವಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಮಹತ್ವದ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಈ ಫಲಪುಷ್ಪ ಪ್ರದರ್ಶನದಲ್ಲಿ ಕಲಾಕೃತಿಯೊಂದು ಎಲ್ಲರ ಗಮನಸೆಳೆದಿದೆ. ಕೆಟ್ಟದನ್ನು ಮಾತಾಡಬೇಡ, ಕಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ ಎಂಬ ಗಾಂಧೀಜಿಯ ಮಹತ್ವದ ಸಂದೇಶ ಸಾರುತ್ತಾ ಬಾವಿ, ಕಿವಿ, ಕಣ್ಣುಮುಚ್ಚಿರುವ ಮೂರು ಮಂಗಗಳು ಸಾಲಗಿ ಕುಳಿತ್ತಿರುವ ಸಂಪೂರ್ಣವಾಗಿ ಹೂವಿನ ಎಸಲೂಗಳಿಂದಲೇ ಮಾಡಿರುವ ಕಲಾಕೃತಿ ಫಲಫುಷ್ಟ ಪ್ರದರ್ಶನದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಉಳಿದಂತೆ ಸೇವಂತಿಗೆಯಲ್ಲಿ  ಧ್ವಜದಕಟ್ಟೆ ನಿರ್ಮಾಣಗೊಂಡು ಅದರ ಮೇಲೆ ತಿರಂಗಧ್ವಜ ಹಾರಾಡುತಿರುವುದು, ಬೈನೆ ಸೊಪ್ಪು ಮತ್ತು ಆರ್ಕಿಡ್, ಸೇವಂತಿ ಬಳಸಿ ನಿರ್ಮಿಸಿದ್ದ ಕೋಗಿಲೆ ಗರಿಬಿಚ್ಚಿ ಕುಣಿಯುತ್ತಿರುವ ಕಲಾಕೃತಿ, ಭೇಟೆಗೆ ಬಾಯಿ ತೆರೆದಿರುವಂತೆ ಹೂವಿನಲ್ಲಿ ನಿರ್ಮಿಸಿರುವ ಹುಲಿ, ಸಾವಿರಾರೂ ಗುಲಾಬಿಗಳಲ್ಲೇ ಅರಳಿದ ಬೃಹತ್ ಗಾತ್ರದ ಕಮಲದ ಹೂ, ಹಳದಿ, ಕೆಂಪು ಗುಲಾಬಿಗಳಲ್ಲಿ ಮೂಡಿದ 1 ರೂಪಾಯಿ ನಾಣ್ಯ ಸಾರ್ವಜನಿಕರ ಆಕರ್ಷಣೆಯಾಗಿದೆ.

ಇದಲ್ಲದೇ ಎರಡು ಕೈಚಾಚಿರುವ ಕಣ್ಣುಬಾಯಿ ಹೊಂದಿರುವ ಮೀನಿನಾಕಾರದ ಹೂವಿನ ಗೊಂಬೆ ಗೊಂಬೆಯೊಂದು ಮಕ್ಕಳ ಆಕರ್ಷಣೆಯಾಗಿದ್ದರೇ, ಅಲ್ಲೇ ಪಕ್ಕದಲ್ಲಿ ಸಂಪೂರ್ಣವಾಘಿ ಬಿಳಿ ಸೇವಂತಿಗೆ ಮಾಡಿದ ಹಕ್ಕಿ, ಪೆಂಗ್ವಿನ್ ಹೋಲುವ ಕಲಾಕೃತಿ ಎಲ್ಲರ ಆಕರ್ಷಣೆಯಾಗಿದೆ. ಇದೇ ಸಾಲಿನಲ್ಲಿರುವ ಕ್ಯಾಪ್ಸಿಕಂ( ದೊಡ್ಡ ಮೆಣಸಿನಕಾಯಿ)ಯಿಂದ ಮಾಡಿರುವ ದೊಡ್ಡ ಪಿರಂಗಿಯೊಂದು ಗುಂಡಿನ ದಾಳಿಗೆ ಸಜ್ಜಾಗಿ ನಿಂತಂತೆ ಭಾಸವಾಗುತ್ತಿದೆ.

ಕೃಷಿಯೊಂದಿಗೆ ಆದಾಯವನ್ನು ತಂದುಕೊಡಬಲ್ಲ,ಜೇನುಕೃಷಿಯನ್ನು ಪ್ರೋತ್ಸಾಹಿಸಲು ತೋಟಗಾರಿಕೆ ಇಲಾಖೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಗುಲಾಬಿ ಮತ್ತು ಸೇವಂತಿಗೆಯಲ್ಲಿ ಅರಳಿರುವ ಬೃಹತ್ ಗಾತ್ರದ ಹೂವುಗಳಲ್ಲಿ ಮಕರಂದ ಹೀರುತ್ತಿರುವ ಜೇನ್ನೋಣಗಳು ಕಲಾಕೃತಿಗಳು ಜೇನು ಸಾಕಣೆಯ ಮಹತ್ವವನ್ನು ಸಾರಿ ಹೇಳುತ್ತಿವೆ. ಇದರೊಂದಿಗೆ.ಬಣ್ಣ ಬಣ್ಣದ ಸಾವಿರಾರು ಗುಲಾಬಿಗಳಿಂದಲೇ ಮೂಡಿರುವ ಈರುಳ್ಳಿ ಶೇಖರಣಾ ಘಟಕ ಕೃಷಿಕರ ಆಕರ್ಷಣೆಯಾಗಿದೆ.

ಇನ್ನು ಇಡೀ ಫಲಪುಷ್ಪ ಪ್ರದರ್ಶನದಲ್ಲಿ ಎಲ್ಲರ ಮನಸೂರೆಗೊಳ್ಳುತ್ತಿರುವುದು ಹಣ್ಣು, ತರಕಾರಿಗಳಲ್ಲಿ ಮೂಡಿರುವ ಸಾಧಕರ ಕಲಾಕೃತಿಗಳು, ಕಲ್ಲಂಗಡಿಯಲ್ಲಿ ಮೂಡಿರುವರಲ್ಲಿ ಜಿಲ್ಲೆಯವರೇ ಆದ ಖ್ಯಾತ ಉದ್ಯಮಿ ಜಿ.ವಿ.ಸಿದ್ದಾರ್ಥ ಗಮನಸೆಳೆಯುತ್ತಿದೆ. ಈ ಕಲಾಕೃತಿಗಳ ಮಧ್ಯೆ ಕುಂಬಳಕಾಯಿಯಲ್ಲಿ ಮೂಡಿರುವ ಮೀನುಗಳು ಕಲಾವಿದನ ಪ್ರತಿಭೆ, ಕೈಚಳಕ್ಕೆ ಸಾಕ್ಷಿಯಾಗಿದೆ.

ಕಲ್ಲಂಗಡಿಯಲ್ಲಿ ಚಿಕಾಗೋದಲ್ಲಿ ದೇಶದ ಘನತೆ ಹೆಚ್ಚಿಸಿದ ಸ್ವಾಮಿವಿವೇಕಾನಂದ, ತೋಟಗಾರಿಕೆ ಪಿತಾಮಹಾ ಮರೀಗೌಡ, ಮಾಜಿರಾಷ್ಟ್ರಪತಿ ಪ್ರಣವ್‍ಮುಖರ್ಜಿ,  ಸಾಲುಮರದ ತಿಮ್ಮಕ್ಕ, ಗಾಯಕರಾದ ಲತಾಮಂಗೇಶ್ವರ್,ಎಸ್.ಪಿ. ಬಾಲಸುಬ್ರಹ್ಮಣ್ಯ, ಎಸ್.ಜಾನಕಿ,ಕ್ರೀಡಾಪುಟುಗಳಾದ ಸಚಿನ್ ತೆಂಡ್ಯೂಲ್ಕರ್,ಎಂ.ಎಸ್.ಧೋನಿ,ವಿರಾಟ್‍ಕೊಯ್ಲಿ,ಮೇರಿಕೋಮ್, ಸೈನಾನೆಹ್ವಾನ್,ಸಿಂಧು,ಚಿತ್ರನಟಿ ಶ್ರೀದೇವಿ, ಇನ್ಫೋಸಿಸ್‍ನ ನಾರಾಯಣಮೂರ್ತಿ, ಸುಧಾಮೂರ್ತಿ, ಕದ್ರಿಗೋಪಾಲ್, ಸಂಗೀತ ನಿರ್ದೇಶಕ ಹಂಸಲೇಖಾ, ಸೇನಾಮುಖ್ಯಸ್ಥ ಬಿಪಿನ್‍ರಾವತ್,ವಿಂಗ್ ಕಮಾಂಡರ್ ಅಭಿನಂದನ್‍ವರ್ಧಮಾನ್, ನಾನಾಜಿದೇಶಮುಖ್, ಅಭಿಜಿತ್ ಬ್ಯಾನರ್ಜಿ,ಕಿಶೋರ್‍ಕುಮಾರ್,ಅಡ್ಮಿರಲ್ ಕರಮ್‍ಬಿರ್, ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ಅವರುಗಳ ಸುಂದರವಾಗಿ ಮೂಡಿದ್ದಾರೆ.

ಒಟ್ಟಾರೆ ನಗರದಲ್ಲಿ ರವಿವಾರ ಉದ್ಘಾಟನೆಗೊಂಡಿರುವ ಫಲಪುಷ್ಪ ಪ್ರದರ್ಶನದ ಸೊಬಗು ಸಲಿವಯಲು ಸಾರ್ವಜನಿಕರು ಮುಗಿಬೀಳುತ್ತಿದ್ದು, ಇಂದಿನಿಂದ ಮೂರು ದಿನಗಳ ಕಾಲ ಇಲ್ಲಿ ಜನ ಜಾತ್ರೆ ನೆರೆಯಲಿದೆ. ಸಾರ್ವಜನಿಕರ ಕಣ್ಣಿಗೆ ಹಬ್ಬ ನೀಡುವುದರೊಂದಿಗೆ ಇಲ್ಲಿ ಹೊಟೆ ತುಂಬಿಸಿಕೊಳ್ಳಲೂ ಬಗೆ ಬಗೆಯ ಖಾದ್ಯ, ವಸ್ತುಗಳ ಖರೀದಿಗೆ ಪ್ರತ್ಯೇಕ ಮಳಿಗೆಗೆಳೂ ಜನರನ್ನು ಕೈಬೀಸಿ ಕರೆಯುತ್ತಿದ್ದು, ಹೂವುಗಳ ಚೆಲುವ ಸವಿಯಲು ನಗರದ ಪುಷ್ಪ ಪ್ರಿಯರಿಗೆ ಇದು ಸಕಾಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News