ರೋಹಿತ್ ವೇಮುಲಾ ತಾಯಿ ಜೊತೆಗೆ ಶಾಹೀನ್ ಭಾಗ್ ಮಹಿಳೆಯರ ಗಣರಾಜ್ಯೋತ್ಸವ

Update: 2020-01-26 16:35 GMT

ಹೊಸದಿಲ್ಲಿ, ಜ.26: ಪೌರತ್ವ ಕಾಯ್ದೆ ವಿರೋಧಿಸಿ ಕಳೆದ 43 ದಿನಗಳಿಂದ ಶಾಹೀನ್‌ ಭಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ‘ಶಾಹೀನ್‌ಭಾಗ್ ಮಹಿಳೆಯರು’ ಎಂದೇ ಹೆಸರಾದ ಮೂವರು ಹಿರಿಯ ಮಹಿಳೆಯರು ಹಾಗೂ ರೋಹಿತ್ ವೇಮುಲಾರ ತಾಯಿ ಒಟ್ಟಾಗಿ ಶಾಹೀನ್‌ ಭಾಗ್‌ನಲ್ಲಿ ರಾಷ್ಟ್ರಧ್ವಜ ಅರಳಿಸಿ ಗಣರಾಜ್ಯೋತ್ಸವ ಆಚರಿಸಿದ್ದು ವಿಶೇಷವಾಗಿತ್ತು.

ಶನಿವಾರ ಮಧ್ಯರಾತ್ರಿಯಿಂದಲೇ ಶಾಹೀನ್‌ಭಾಗ್‌ನಲ್ಲಿ ಗಣರಾಜ್ಯೋತ್ಸವದ ಸಂಭ್ರಮಾಚರಣೆ ಆರಂಭವಾಗಿತ್ತು. ಆರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ವಾಚಿಸಿದ ಬಳಿಕ ರಾಷ್ಟ್ರಗೀತೆಯನ್ನು ಹಾಡಲಾಯಿತು. ರವಿವಾರ ಮುಂಜಾನೆಯ ವೇಳೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಒಟ್ಟುಸೇರಿ ಶಾಹೀನ್‌ಭಾಗ್‌ನ ಗಣರಾಜ್ಯೋತ್ಸವದ ಸಂಭ್ರಮಾಚರಣೆಗೆ ಕೈಜೋಡಿಸಿದರು. ಈ ಮೂಲಕ ಸಂವಿಧಾನ ರಕ್ಷಣೆಯ ನಿಟ್ಟಿನಲ್ಲಿ ತಮ್ಮ ಹೋರಾಟವನ್ನು ಮುಂದುವರಿಸುವ ಪ್ರತಿಜ್ಞೆ ಸ್ವೀಕರಿಸಿದರು.

 ಕಾರ್ಯಕ್ರಮದ ಅಂಗವಾಗಿ ಟ್ಯಾಬ್ಲೋಗಳ ಸಹಿತ ಆಟೊರಿಕ್ಷಾ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಶಾಹೀನ್‌ ಭಾಗ್‌ನ ನಿವಾಸಿಗಳು ದೇಶಪ್ರೇಮ ಹಾಗೂ ದೇಶಭಕ್ತಿಯ ಪ್ರತೀಕವಾಗಿ ಈ ಕಾರ್ಯಕ್ರಮ ಮೂಡಿಬಂದಿತು. ಪೌರತ್ವ ಕಾಯ್ದೆಯನ್ನು ವಿರೋಧಿಸಿ ಕಳೆದ 43 ದಿನಗಳಿಂದ ಶಾಹೀನ್‌ ಭಾಗ್‌ನಲ್ಲಿ ನಿರಂತರ ಪ್ರತಿಭಟನೆ ಮುಂದುವರಿಸಿದ್ದ ಶಾಹಿನ್‌ಭಾಗ್ ಮಹಿಳೆಯರ ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದ ಅಧಿಕಾರಿಗಳು, ಮಹಿಳೆಯರು ಪ್ರತಿಭಟನೆ ನಡೆಸಲು ದಿನಕ್ಕೆ 500 ರೂ. ಕೂಲಿ ಪಡೆಯುವ ಜೊತೆಗೆ, ಪಿಝ್ಝಾ ಮತ್ತು ಬಿರಿಯಾನಿ ಪಡೆಯುತ್ತಿದ್ದಾರೆ ಎಂದು ಪ್ರಚಾರ ಮಾಡಿದ್ದರು. ಆದರೆ ಈ ಅಪಪ್ರಚಾರಕ್ಕೆ ಅಳುಕದೆ ಪ್ರತಿಭಟನೆ ಮುಂದುವರಿಸಿದ್ದ ಮಹಿಳೆಯರು, ಗಣರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಪೌರತ್ವ ಕಾಯ್ದೆ ರದ್ದುಗೊಳಿಸಬೇಕು ಅಥವಾ ಪ್ರಧಾನಿ ಅಥವಾ ಗೃಹಸಚಿವರು ಶಾಹೀನ್‌ಭಾಗ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಮ್ಮೊಂದಿಗೆ ಮಾತುಕತೆ ನಡೆಸಬೇಕು ಎಂದು ಶಾಹೀನ್‌ಭಾಗ್‌ನ ಮಹಿಳೆಯರ ಆಗ್ರಹವಾಗಿದೆ. ಆದರೆ ಇದುವರೆಗೆ ಈ ಎರಡೂ ಆಗ್ರಹಗಳಿಗೆ ಸರಕಾರ ನಿರ್ಲಕ್ಷ ತೋರಿದೆ ಹಾಗೂ ಮುಂಬರುವ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಶಾಹೀನ್‌ಭಾಗ್ ಪ್ರತಿಭಟನಾಕಾರರು ಜೀವಭಯದಿಂದ ಓಡುವಂತಾಗಬೇಕು ಎಂದು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News